ರಾಜ್ಯದಲ್ಲಿ ವಿದ್ಯುತ್ ಪೂರೈಕೆಗೆ ಸಮಸ್ಯೆ ಎದುರಾಗುವುದಿಲ್ಲ: ಸಚಿವ ಸುನೀಲ್ ಕುಮಾರ್
ಕಲ್ಲಿದ್ದಲು ಕೊರತೆ ಎದುರಾಗಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ವಿದ್ಯುತ್ ಸಮಸ್ಯೆಗಳು ಎದುರಾಗಲಿದೆ ಎಂಬ ಗೊಂದಲಗಳಿಗೆ ಇಂಧನ ಸಚಿವ ವಿ. ಸುನೀಲ್ ಕುಮಾರ್ ಅವರು ಶುಕ್ರವಾರ ತೆರೆ ಎಳೆದಿದ್ದಾರೆ.
Published: 16th October 2021 06:55 AM | Last Updated: 16th October 2021 01:28 PM | A+A A-

ಸಂಗ್ರಹ ಚಿತ್ರ
ಬೆಂಗಳೂರು: ಕಲ್ಲಿದ್ದಲು ಕೊರತೆ ಎದುರಾಗಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ವಿದ್ಯುತ್ ಸಮಸ್ಯೆಗಳು ಎದುರಾಗಲಿದೆ ಎಂಬ ಗೊಂದಲಗಳಿಗೆ ಇಂಧನ ಸಚಿವ ವಿ. ಸುನೀಲ್ ಕುಮಾರ್ ಅವರು ಶುಕ್ರವಾರ ತೆರೆ ಎಳೆದಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, ಕಲ್ಲಿದ್ದಲು ಕೊರತೆ ಉಂಟಾಗಬಹುದು ಎಂಬ ಮುಂಜಾಗ್ರತೆ ಹಿನ್ನೆಲೆಯಲ್ಲಿ ರಾಯಚೂರು ಉಷ್ಣ ವಿದ್ಯುತ್ ಉತ್ಪಾದನಾ ಘಟಕವನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿತ್ತು. ರಾಜ್ಯದಲ್ಲಿ ವಿದ್ಯುತ್ ಪೂರೈಕೆಯಲ್ಲಿ ಯಾವುದೇ ಸಮಸ್ಯೆಗಳಾಗುವುದಿಲ್ಲ ಎಂದು ಹೇಳಿದ್ದಾರೆ.
ಆದರೆ, ಸಚಿವರ ಈ ಹೇಳಿಕೆಯನ್ನು ವಿರೋಧ ಪಕ್ಷಗಳ ನಾಯಕರು ಒಪ್ಪಲು ಸಿದ್ಧರಿಲ್ಲ. ರಾಜ್ಯದ ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಉಂಟಾಗಿರುವ ಕಲ್ಲಿದ್ದಲಿನ ಕೊರತೆಯು ಸಹಜವಾಗಿ ನಡೆದಿದೆಯೆ? ಅಥವಾ ಕೃತಕವಾಗಿ ಸೃಷ್ಟಿಸಲಾಗಿದೆಯೇ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಕಲ್ಲಿದ್ದಲು ಕೊರತೆ: ವಿದ್ಯುತ್ ಅಭಾವ ಎದುರಿಸುತ್ತಿರವ ರಾಜ್ಯಗಳಿಗೆ ದುಪ್ಪಟ್ಟು ಹಣ ತೆತ್ತು ಖರೀದಿಸುವ ಅನಿವಾರ್ಯತೆ
ಕರ್ನಾಟಕದಲ್ಲಿ ಈವರೆಗೆ ವಿದ್ಯುತ್ ಕೊರತೆ ಸೃಷ್ಟಿಯಾಗಿರಲಿಲ್ಲ. ಯಾವಾಗಲೂ ನಮ್ಮಲ್ಲಿ ಅಗತ್ಯಕ್ಕಿಂತ ಹೆಚ್ಚು ಪ್ರಮಾಣದ ವಿದ್ಯುತ್ ಉತ್ಪಾದನೆ ಆಗುತ್ತಿತ್ತು. ರಾಜ್ಯಕ್ಕೆ ಕಲ್ಲಿದ್ದಲು ದೊಡ್ಡ ಪ್ರಮಾಣದಲ್ಲೇನೂ ಬೇಕಿಲ್ಲ. ಆದರೂ, ಕೊರತೆ ಆಗಿರುವುದು ಸಂಶಯಕ್ಕೆ ಕಾರಣವಾಗಿದೆ. ವಿದ್ಯುತ್ ಉತ್ಪಾದನಾ ಸ್ಥಾವರಗಳನ್ನು ಖಾಸಗಿಯವರಿಗೆ ಉದ್ದೇಶದಿಂದ ಸರ್ಕಾರವೇ ಕೃತಕವಾಗಿ ಕಲ್ಲಿದ್ದಲಿನ ಅಭಾವ ಸೃಷ್ಟಿಸಬಾರದು. ಆ ರೀತಿ ಮಾಡಿದರೆ ಅದನ್ನು ನಾನು ಖಂಡಿಸುತ್ತೇನೆ’
ವಿದ್ಯುತ್ ಉತ್ಪಾದನೆ ಮತ್ತು ಪೂರೈಕೆಯನ್ನು ಖಾಸಗೀಕರಣ ಮಾಡಬಾರದು. ಖಾಸಗಿಯವರ ಕೈಗೆ ಒಪ್ಪಿಸಿದರೆ ರೈತರಿಗೆ ಅನ್ಯಾಯವಾಗುತ್ತದೆ. ಕೃಷಿ ನೀರಾವರಿ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ಪೂರೈಕೆಯನ್ನು ಖಾಸಗಿಯವರು ಸ್ಥಗಿತಗೊಳಿಸುತ್ತಾರೆ ಎಂದು ತಿಳಿಸಿದ್ದಾರೆ.
ಅಧಿಕಾರಿಗಳ ಬಳಿ ಸರಿಯಾದ ಯೋಜನೆಗಳಿಲ್ಲ. ರಾಜ್ಯದಲ್ಲಿನ ವಿದ್ಯುತ್ ಪರಿಸ್ಥಿತಿ ಹಾಗೂ ಕಲ್ಲಿದ್ದಲು ಲಭ್ಯತೆಯನ್ನು ಗಮನಿಸುತ್ತಿದ್ದೇನೆ. ವಿದ್ಯುತ್ ಸಮಸ್ಯೆಯನ್ನು ಸರ್ಕಾರ ಬಗೆಹರಿಸುತ್ತದೆಯೇ ಎಂಬುದು ಇನ್ನು ಕೆಲವೇ ದಿನಗಳಲ್ಲಿ ತಿಳಿದುಬರಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ.ಶಿವಕುಮಾರ್ ಅವರು ಹೇಳಿದ್ದಾರೆ.
ಮಾಜಿ ಸಿಎಂ ಮತ್ತು ಜೆಡಿಎಸ್ ನಾಯಕ ಎಚ್‌ಡಿ ಕುಮಾರಸ್ವಾಮಿ ಅವರು ಮಾತನಾಡಿ, “ಈ ಸರ್ಕಾರ ಕೊನೆಯ ಕ್ಷಣದವರೆಗೂ ಸುಳ್ಳು ಆಶ್ವಾಸನೆಗಳನ್ನು ನೀಡುತ್ತದೆ ಮತ್ತು ನಿಜವಾದ ಸಮಸ್ಯೆಯನ್ನು ಬಹಿರಂಗಪಡಿಸುವುದಿಲ್ಲ. ಒಂದೆರಡು ದಿನದಲ್ಲಿ ನಮಗೆ ನೈಜ ಪರಿಸ್ಥಿತಿ ತಿಳಿಯಲಿದೆ ಎಂದಿದ್ದಾರೆ.