ಮಾನವೀಯತೆ ಮರೆತ ವಿಕ್ಟೋರಿಯಾ ಆಸ್ಪತ್ರೆ: ರೋಗಿಗಳು ನರಳಾಡುತ್ತಿದ್ದರೂ ದಾಖಲಿಸಿಕೊಳ್ಳದ ಸಿಬ್ಬಂದಿ, ಜನರಿಂದ ಆಕ್ರೋಶ

ನಗರದ ಅತಿ ದೊಡ್ಡ ಸರ್ಕಾರಿ ಆಸ್ಪತ್ರೆ ವಿಕ್ಟೋರಿಯಾ ಆಸ್ಪತ್ರೆಯ ಕರ್ಮಕಾಂಡ ಒಂದೆರಡಲ್ಲ. ಅವ್ಯವಸ್ಥೆಗಳ ಕುರಿತು ಈ ಹಿಂದೆ ಸುದ್ದಿಯಾಗಿದ್ದ ವಿಕ್ಟೋರಿಯಾ ಆಸ್ಪತ್ರೆ ಇದೀಗ ಮತ್ತೆ ಸುದ್ದಿಯಲ್ಲಿದೆ. ಶುಶ್ರೂಷೆ ಅರಸಿ ಆಸ್ಪತ್ರೆಗೆ ಬರುವ ರೋಗಿಗಳನ್ನು ಹೀನಾಯವಾಗಿ ನಡೆಸುಕೊಳ್ಳುತ್ತಿರುವ ಘಟನೆ ಬೆಳಕಿಗೆ ಬಂದಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ನಗರದ ಅತಿ ದೊಡ್ಡ ಸರ್ಕಾರಿ ಆಸ್ಪತ್ರೆ ವಿಕ್ಟೋರಿಯಾ ಆಸ್ಪತ್ರೆಯ ಕರ್ಮಕಾಂಡ ಒಂದೆರಡಲ್ಲ. ಅವ್ಯವಸ್ಥೆಗಳ ಕುರಿತು ಈ ಹಿಂದೆ ಸುದ್ದಿಯಾಗಿದ್ದ ವಿಕ್ಟೋರಿಯಾ ಆಸ್ಪತ್ರೆ ಇದೀಗ ಮತ್ತೆ ಸುದ್ದಿಯಲ್ಲಿದೆ. ಶುಶ್ರೂಷೆ ಅರಸಿ ಆಸ್ಪತ್ರೆಗೆ ಬರುವ ರೋಗಿಗಳನ್ನು ಹೀನಾಯವಾಗಿ ನಡೆಸುಕೊಳ್ಳುತ್ತಿರುವ ಘಟನೆ ಬೆಳಕಿಗೆ ಬಂದಿದೆ. 

ನಿನ್ನೆ ಸಂಜೆ ಆಸ್ಪತ್ರೆಯ ಹೊರಗೆ 4 ಆ್ಯಂಬುಲೆನ್ಸ್ ಗಳು ನಿಂತಿದ್ದು, ಆಸ್ಪತ್ರೆಯ ಸಿಬ್ಬಂದಿಗಳು ಮಾತ್ರ ರೋಗಿಗಳನ್ನು ದಾಖಲಿಸಿಕೊಳ್ಳಲು ಹಿಂದೇಟು ಹಾಕಿದ್ದಾರೆ. ಪರಿಣಾಮ ಬಡ ರೋಗಿಗಳು ಐಸಿಯು ಬೆಡ್ ಸಿಗದೆ ಆ್ಯಂಬುಲೆನ್ಸ್ ನಲ್ಲೇ ಜೀವನ್ಮರಣದ ನಡುವೆ ಹೋರಾಟ ಮಾಡುವಂತಾಗಿತ್ತು. 

ಘಟನೆ ಕುರಿತು ಕರ್ನಾಟಕ ರಾಷ್ಟ್ರ ಸಮಿತಿಯ ಸದಸ್ಯರು ವಿಡಿಯೋ ಮಾಡಿಕೊಂಡು ಆಸ್ಪತ್ರೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. 

ಕರ್ನಾಟಕ ರಾಷ್ಟ್ರ ಸಮಿತಿಯ ಅಧ್ಯಕ್ಷ ರವಿ ಕೃಷ್ಣಾ ರೆಡ್ಡಿಯವರು ಮಾತನಾಡಿ, ನಮ್ಮ ಸಂಘಟನೆಯ ಸದಸ್ಯರೊಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂಬಂಧಿಯನ್ನು ಭೇಟಿ ಮಾಡಲು ಹೋಗಿದ್ದರು. ಈ ವೇಳೆ ಆ್ಯಂಬುಲೆನ್ಸ್ ಗಳು ಸಾಲುಗಟ್ಟಿ ನಿಂತಿರುವುದು ಹಾಗೂ ಜನರು ಕಾಯುತ್ತಾ ನಿಂತಿರುವುದನ್ನು ನೋಡಿದ್ದಾರೆ. ಬಳಿಕ ಸಿಬ್ಬಂದಿಗಳನ್ನು ಕೇಳಿದಾಗ, ಅವರನ್ನು ಒಳಗೆ ಬಿಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. 

ಒಬ್ಬ ರೋಗಿ ಆಂಧ್ರಪ್ರದೇಶದಿಂದ ಬಂದಿದ್ದು, ನಿಮ್ಹಾನ್ಸ್ ಆಸ್ಪತ್ರೆಯು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸುವಂತೆ ಶಿಫಾರಸು ಮಾಡಿದ್ದಾರೆ. ಆದರೆ, ವಿಕ್ಟೋರಿಯಾ ಆಸ್ಪತ್ರೆಯ ಸಿಬ್ಬಂದಿಗಳು ಮಾತ್ರ ರೋಗಿಯನ್ನು ದಾಖಲಿಸಿಕೊಳ್ಳದೆ, ಆ್ಯಂಬುಲೆನ್ಸ್ ನಲ್ಲಿ ಕಾಯುವಂತೆ ಮಾಡಿರುವುದು ವಿಡಿಯೋದಲ್ಲಿ ಕಂಡು ಬಂದಿದೆ. 

ಈ ನಡುವೆ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಎಚ್ಚೆತ್ತ ಆಸ್ಪತ್ರೆಯ ಅಧಿಕಾರಿಗಳು ಹಾರಿಕೆ ಉತ್ತರವನ್ನು ನೀಡಿದ್ದಾರೆ. 

ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ರಮೇಶಅ ಕೃಷ್ಣ ಅವರು ಮಾತನಾಡಿ, ಶುಕ್ರವಾರ ಆಸ್ಪತ್ರೆಗೆ ಬಂದ ರೋಗಿಗಳ ಸಂಖ್ಯೆ ಹೆಚ್ಚಾಗಿತ್ತು. ಹಬ್ಬ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ಸಿಬ್ಬಂದಿಗಳ ಕೊರತೆ ಇತ್ತು. ಹೀಗಾಗಿ ರೋಗಿಗಳಿಗೆ ಚಿಕಿತ್ಸೆ ನೀಡುವಲ್ಲಿ ವಿಳಂಬವಾಯಿತು ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com