ರಾಜ್ಯದಲ್ಲಿ ಜ.26ರಿಂದ ಮನೆ ಬಾಗಿಲಿಗೇ ತಲುಪಲಿದೆ ‘ಪಡಿತರ ಧಾನ್ಯ’!

ಜನವರಿ 26ರ ನಂತರ ರೇಷನ್ ಕೂಡ ಮನೆ ಬಾಗಿಲಿಗೆ ಬರಲಿದೆ. ಇದಕ್ಕಾಗಿ ಯೋಜನೆ ರೂಪಿಸಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಶನಿವಾರ ಘೋಷಿಸಿದ್ದಾರೆ.
ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮಕ್ಕೆ ಚಾಲನೆ ನೀಡುತ್ತಿರುವ ಸಿಎಂ ಬೊಮ್ಮಾಯಿ, ಆರ್.ಅಶೋಕ ಹಾಗೂ ಇನ್ನಿತರೆ ಸಚಿವರು.
ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮಕ್ಕೆ ಚಾಲನೆ ನೀಡುತ್ತಿರುವ ಸಿಎಂ ಬೊಮ್ಮಾಯಿ, ಆರ್.ಅಶೋಕ ಹಾಗೂ ಇನ್ನಿತರೆ ಸಚಿವರು.

ಬೆಂಗಳೂರು: ಜನವರಿ 26ರ ನಂತರ ರೇಷನ್ ಕೂಡ ಮನೆ ಬಾಗಿಲಿಗೆ ಬರಲಿದೆ. ಇದಕ್ಕಾಗಿ ಯೋಜನೆ ರೂಪಿಸಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಶನಿವಾರ ಘೋಷಿಸಿದ್ದಾರೆ.

ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಸುರಹೊನ್ನೆಯಲ್ಲಿ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದ ಸೌಲಭ್ಯಗಳು ವಿಧಾನಸೌಧದಲ್ಲಿ ಇರೋದಿಲ್ಲ. ಜನರ ಬಳಿಗೆ ಒಯ್ಯುವ ಕಾರ್ಯವನ್ನು ಮಾಡೋ ನಿಟ್ಟಿನಲ್ಲಿ ನ.1ರಿಂದ ಬೆಂಗಳೂರು ವ್ಯಾಪ್ತಿಯಲ್ಲಿ ಹಾಗೂ ಜ.26ರಿಂದ ರಾಜ್ಯವ್ಯಾಪಿ ಜನ ಸೇವಕ ಸೇವೆಯನ್ನು ಆರಂಭಿಸುತ್ತೇವೆ. ಇದರ ಭಾಗವಾಗಿ ಪಡಿತರ ಧಾನ್ಯಗಳನ್ನು ಫಲಾನುಭವಿಗಳ ಮನೆ ಭಾಗಿಲಿಗೆ ತಲುಪಿಸೋ ಕೆಲಸ ಮಾಡಲಾಗುತ್ತದೆ ಎಂಬುದಾಗಿ ಘೋಷಣೆ ಮಾಡಿದ್ದಾರೆ.  

ಜನರ ಮನೆ ಬಾಗಿಲಿಗೆ ಸರ್ಕಾರವನ್ನು ಕೊಂಡೊಯ್ಯುವ ಮೂಲಕ ಜನರ ಆಡಳಿತ ನೀಡುವ ಜನ ಸೇವಕ ಯೋಜನೆ 2 ಹಂತದಲ್ಲಿ ರಾಜ್ಯವ್ಯಾಪಿ ಜಾರಿಗೊಳ್ಳಲಿದೆ. ಸಾಮಾಜಿ ಭದ್ರತೆ ಯೋಜನೆಗಳಾದ ವೃದ್ಧಾಪ್ಯ ವೇತನ, ವಿಧವಾ ವೇತನ, ಅಂಗವಿಲರ ಸೌಲಭ್ಯಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸಲಿದ್ದೇವೆ. ಜನರಿಗೆ ಇನ್ನು ಮುಂದೆ ಸೌಲಭ್ಯಗಳ ಮಾಹಿತಿಯನ್ನು ಮೊಬೈಲ್'ಗೆ ಹಾಕಲಿದ್ದೇವೆ. ಈ ಮೂಲಕ ಮಧ್ಯವರ್ತಿಗಳ ಹಾವಳಿ ಇಲ್ಲದೇ ನೇರವಾಗಿ ಫಲಾನುಭವಿಗೆ ಸೌಲಭ್ಯ ಮುಟ್ಟಿಸುತ್ತೇವೆಂದು ತಿಳಿಸಿದ್ದಾರೆ. 

ಸರ್ಕಾರದ ಮುಖ್ಯ ಕಾರ್ಯದರ್ಶಿಯಿಂದ ಗ್ರಾಮ ಮಟ್ಟದ ಅಧಿಕಾರಿಗಳವರೆಗೆ ಎಲ್ಲರೂ ಜನರ ಮನೆ ಬಾಗಿಲಿಗೆ ಹೋಗಬೇಕೆಂಬ ಸದುದ್ದೇಶದ ಕಾರ್ಯಕ್ರಮ ಜನಸೇವಕ ಆಗಿದೆ. ಮುಂದಿನ ದಿನಗಳಲ್ಲಿ ಎಲ್ಲಾ ಅಧಿಕಾರಿಗಳು ಜನರ ಮನೆ ಬಾಗಿಲಿಗೆ ಹೋಗಲಿದ್ದಾರೆ. ಜನರಿಗೆ ಸರ್ಕಾರದ ಸೌಲಭ್ಯಗಳು ಜೇನು ತುಪ್ಪದಂತೆ ಸಿಗಬೇಕು. ಇದನ್ನೇ ಬದಲಾವಣೆ, ಪರಿವರ್ತನೆ ಎನ್ನುತ್ತೇವೆ. ಆಡಳಿತ ಯಂತ್ರ ವಿಧಾನಸೌಧ ಕೇಂದ್ರೀಕೃತವಾಗಿಲ್ಲ. ನಮ್ಮ ಮನೆ ಬಾಗಿಲಲ್ಲೇ ಇದೆ ಎಂಬ ಭಾವನೆ ಜನರಿಗೆ ಬರಬೇಕು. ಅಂತಹ ಬದಲಾವಣೆ ಮಾಡಿ ತೋರಿಸುತ್ತೇವೆಂದಿದ್ದಾರೆ. 

ಹಿಂದೆಲ್ಲಾ ಸರ್ಕಾರಿ ಸೌಲಭ್ಯ ಪಡೆಯಲು ಮಧ್ಯವರ್ತಿಗಳ ಹಾವಳಿ ತೀವ್ರವಾಗಿರುತ್ತಿತ್ತು. ಇಂತಹ ಮಧ್ಯವರ್ತಿಗಳು ಸಾವಿರಾರು ರೂಪಾಯಿ ಇಲ್ಲದೇ ಮನೆಗೆ ಹೋಗುತ್ತಿರಲಿಲ್ಲ. ನಮ್ಮ ಸರ್ಕಾರ ಬಂದ ಬಳಿಕ ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಹಾಕುತ್ತಿದ್ದೇವೆ. ಸರ್ಕಾರಿ ಸೌಲಭ್ಯಗಳು ನೇರವಾಗಿ ಜನರಿಗೆ ತಲುಪಬೇಕು. ಯಾವುದೇ ಮಧ್ಯವರ್ತಿಗಳ ಹಾವಳಿ ಇರಕೂಡದು. ಇದೇ ಸದುದ್ದೇಶದಿಂದ ಜನ ಸೇವಕ ಕಾರ್ಯಕ್ರಮ ರೂಪಿಸಿ, ಬದಲಾವಣೆ ತರಲು ಹೊರಟಿದ್ದೇವೆ. ಇಡೀ ರಾಜ್ಯದ ಜನರ ಅಭಿವೃದ್ಧಿಗೆ ನಾವು ಬದ್ಧರಿದ್ದೇವೆ. ಬದಲಾವಣೆಯನ್ನೂ ತರುತ್ತೇವೆ ಎಂದು ಪುನರುಚ್ಚರಿಸಿದ್ದಾರೆ. 

ನಮ್ಮ ಸರ್ಕಾರ ಬಡವರಿಗೆ 4 ಲಕ್ಷ ಮನೆಗಳನ್ನು ಕೇವಲ ಒಂದೂವರೆ ವರ್ಷದಲ್ಲಿ ಕಟ್ಟಿದೆ. ನಗರಗಳ ಕೊಳಗೇರಿಯಲ್ಲಿರುವವರಿಗೆ 1 ಲಕ್ಷ ಮನೆಗಳನ್ನು ಕಟ್ಟಿ ಕೊಡಲಾಗುತ್ತಿದೆ. ಜಲಜೀವನ್ ಮಿಷನ್ ಯೋಜನೆಯನ್ನು ಅನುಷ್ಠಾನಗೊಳಿಸಲು 2 ಸಾವಿರ ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ಉದ್ಯಮ, ಉದ್ಯೋಗಕ್ಕೆ ಸಮಾನ ಮಹತ್ವವನ್ನು ಸರ್ಕಾರ ನೀಡಿದೆ. ಶಿಕ್ಷಣದಲ್ಲಿ ಕ್ರಾಂತಿಕಾರಿ ಬದಲಾವಣೆ ತರುವ ನೂತನ ಶಿಕ್ಷಣ ನೀತಿಯನ್ನು ಜಾರಿಗೊಳಿಸುತ್ತಿದ್ದೇವೆಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com