ದಸರಾ ಎಫೆಕ್ಟ್: ಮೈಸೂರಿನಲ್ಲಿ ಪಾಸಿಟಿವಿಟಿ ದರ ಹೆಚ್ಚಳ!

ದಸರಾ ಹಬ್ಬ ಸಂಭ್ರದ ಬಳಿಕ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮಹಾಮಾರಿ ಕೊರೋನಾ ಸಾಂಕ್ರಾಮಿಕ ರೋಗದ ಅಬ್ಬರ ಕೊಂಚ ಪ್ರಮಾಣದಲ್ಲಿ ಏರಿಕೆಯಾಗಿರುವುದು ಕಂಡು ಬಂದಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ದಸರಾ ಹಬ್ಬ ಸಂಭ್ರದ ಬಳಿಕ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮಹಾಮಾರಿ ಕೊರೋನಾ ಸಾಂಕ್ರಾಮಿಕ ರೋಗದ ಅಬ್ಬರ ಕೊಂಚ ಪ್ರಮಾಣದಲ್ಲಿ ಏರಿಕೆಯಾಗಿರುವುದು ಕಂಡು ಬಂದಿದೆ. 

ಅಕ್ಟೋಬರ್ 14 ರಂದು, ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿಯೂ ಶೇಕಡಾ 1 ಕ್ಕಿಂತ ಕಡಿಮೆ ಸಕ್ರಿಯ ಪ್ರಕರಣಗಳು ವರದಿಯಾಗಿತ್ತು. ಆದರೆ, ಅಕ್ಟೋಬರ್ 16ರ ಬಳಿಕ ಮೈಸೂರು ಜಿಲ್ಲೆಯಲ್ಲಿ ಶೇ.1.13ರಷ್ಟು ಪಾಸಿಟಿವಿಟಿ ದರ ದಾಖಲಾಗಿರುವುದು ಕಂಡು ಬಂದಿದೆ. ಮೈಸೂರು ಜಿಲ್ಲೆ ಹೊರತುಪಡಿಸಿದ ಉಳಿದ ಜಿಲ್ಲೆಗಳಲ್ಲಿ ಶೇ.1ಕ್ಕಿಂತ ಕಡಿಮೆ ಪಾಸಿಟಿವಿಟ ದರ ಕಂಡು ಬಂದಿದೆ. 

ಮೈಸೂರಿನಲ್ಲಿ ಕಂಡು ಬರುತ್ತಿರುವ ಈ ಬೆಳವಣಿಗೆ ಅಧಿಕಾರಿಗಳಲ್ಲಿ ಆಶ್ಚರ್ಯವನ್ನುಂಟು ಮಾಡಿಲ್ಲ. ಜಿಲ್ಲೆಯಲ್ಲಿ 10 ದಿನಗಳ ಕಾಲ ದಸರಾ ಉತ್ಸವಗಳನ್ನು ನಡೆಸಿದ ಪರಿಣಾಮ ಪಾಸಿಟಿವಿಟಿ ದರ ಏರಿಕೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ದಸರಾ ಹಿನ್ನೆಲೆಯಲ್ಲಿ ದೇಶ ಹಾಗೂ ವಿದೇಶಗಳಿಂದ ಮೈಸೂರಿಗೆ ಬರುವವರ ಸಂಖ್ಯೆ ಹೆಚ್ಚಾಗಿದೆ. ಕಳೆದ ಏಳು ದಿನಗಳ ದತ್ತಾಂಶಗಳ ಪ್ರಕಾರ, ಮೈಸೂರು ಜಿಲ್ಲೆಯಲ್ಲಿ ಅಕ್ಟೋಬರ್ 14 ರಂದು ಶೇ.0.82ರಷ್ಟು ಪಾಸಿಟಿವಿಟಿ ದರ ದಾಖಲಾಗಿತ್ತು. ಆದರೆ, ನಂತರ ಎರಡು ದಿನಗಳಲ್ಲಿ ಪಾಸಿಟಿವಿಟಿ ದರ ಶೇ.1.13ಕ್ಕೆ ತಲುಪಿದೆ.

ಬೆಂಗಳೂರು ನಗರ ಬಳಿಕ ಅತೀ ಹೆಚ್ಚು ಪ್ರಕರಣಗಳು ವರದಿಯಾದ ರಾಜ್ಯದ ಮೈಸೂರು ಎರಡನೇ ಜಿಲ್ಲೆಯಾಗಿದೆ. ಕಳೆದ ವಾರದಲ್ಲಿ, ಜಿಲ್ಲೆಯಲ್ಲಿ 252 ಹೊಸ ಪ್ರಕರಣಗಳು ವರದಿಯಾಗಿವೆ.

ಈ ನಡುವೆ ರಾಜ್ಯದಲ್ಲಿ ಕೋವಿಡ್ ಪರೀಕ್ಷೆಗಳ ಸಂಖ್ಯೆ ಕೂಡ ಇಳಿಕೆಯಾಗಿರುವುದು ಕಂಡು ಬಂದಿದೆ. ರಾಜ್ಯದಲ್ಲಿ ಪ್ರತೀನಿತ್ಯ 1 ಲಕ್ಷಕ್ಕಿಂತಲೂ ಕಡಿಮೆ ಪರೀಕ್ಷೆಗಳು ನಡೆಯುತ್ತಿರುವುದು ಕಂಡು ಬರುತ್ತಿದೆ. ಅಕ್ಟೋಬರ್ 16 ರಂದು ರಾಜ್ಯದಲ್ಲಿ ಕೇವಲ 60,141 ಪರೀಕ್ಷೆಗಳನ್ನು ನಡೆಸಲಾಗಿದ್ದು, ಭಾನುವಾರ 78,742 ಪರೀಕ್ಷೆಗಳನ್ನು ನಡೆಸಲಾಗಿದೆ. 

ಹಲವು ಜಿಲ್ಲೆಗಳು ನಿಗದಿತ ಗುರಿಗಿಂತಲೂ ಕಡಿಮೆ ಪರೀಕ್ಷೆಯನ್ನು ವರದಿ ಮಾಡುತ್ತಿರುವುದು ಕಂಡು ಬಂದಿದೆ. ಈ ನಡುವೆ ರಾಜ್ಯದಲ್ಲಿಯೂ ಸೋಂಕು ಪ್ರಕರಣಗಳು ಹೆಚ್ಚಳವಾಗುತ್ತಿರುವ ಬೆಳವಣಿಗೆಗಳು ಕಂಡು ಬರುತ್ತಿವೆ.  ಶನಿವಾರ 264 ಪ್ರಕರಣಗಳು ಕಂಡು ಬಂದಿದ್ದರೆ, ಭಾನುವಾರ 326 ಪ್ರಕರಣಗಳು ವರದಿಯಾಗಿವೆ. 

ಇನ್ನು ಬೆಂಗಳೂರು ನಗರದಲ್ಲಿ ಭಾನುವಾರ 173 ಪ್ರಕರಣಗಳು ವರದಿಯಾಗಿದ್ದರೆ, ಮೈಸೂರಿನಲ್ಲಿ 42 ಪ್ರಕರಣಗಳು ವರದಿಯಾಗಿವೆ. ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 6,817ಕ್ಕೆ ತಲುಪಿದೆ. 

ರಾಜ್ಯದಲ್ಲಿ ಒಟ್ಟು 29,83,459 ಪಾಸಿಟಿವಿಟಿ ಪ್ರಕರಣಗಳಿವೆ. ಈ ನಡುವೆ ಗುಣಮುಖರಾಗುತ್ತಿರುವವರ ಸಂಖ್ಯೆ ಕೂಡ ಇಳಿಕೆಯಾಗುತ್ತಿರುವುದು ಕಂಡು ಬರುತ್ತಿದೆ. ರಾಜ್ಯದಲ್ಲಿ ಈ ವರೆಗೂ 29,36,039 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. 

ಭಾನುವಾರ 4 ಮಂದಿ ಕೋವಿಡ್ ನಿಂದ ಸಾವನ್ನಪ್ಪಿದ್ದು,  ಬೆಂಗಳೂರು ನಗರ ಮತ್ತು ಧಾರವಾಡದಿಂದ ತಲಾ ಒಂದು, ಮತ್ತು ಮೈಸೂರಿನಿಂದ ಎರಡು ಸಾವುಗಳು ವರದಿಯಾಗವೆ. ರಾಜ್ಯದಲ್ಲಿ ಸಾವಿನ ಪ್ರಮಾಣ ಶೇ 1.22 ರಷ್ಟಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com