ಮುರುಘಾ ಮಠದ ಶ್ರೀಗಳ ಪೀಠಾರೋಹಣದ 30ನೇ ವಾರ್ಷಿಕೋತ್ಸವ: "ವಿಶ್ವರೂಪಿ"ಪುಸ್ತಕ ಬಿಡುಗಡೆ, ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಬಿಎಸ್ ವೈಗೆ ಸನ್ಮಾನ

ಮುರುಘಾ ಮಠದ ಶ್ರೀ ಡಾ.ಶಿವಮೂರ್ತಿ ಮುರುಘಾ ಶರಣರ ಪೀಠಾರೋಹಣದ 30 ನೇ ವಾರ್ಷಿಕೋತ್ಸವ ಸಮಾರಂಭ ಚಿತ್ರದುರ್ಗದ ಅನುಭವ ಮಂಟಪದಲ್ಲಿ ಅ.18 ರಂದು ನಡೆಯಿತು.
ಶರಣ ಸಂಸ್ಕೃತಿ ಉತ್ಸವ - 2021 ಕಾರ್ಯಕ್ರಮದಲ್ಲಿ 'ವಿಶ್ವರೂಪಿ' ಪುಸ್ತಕ ಬಿಡುಗಡೆ
ಶರಣ ಸಂಸ್ಕೃತಿ ಉತ್ಸವ - 2021 ಕಾರ್ಯಕ್ರಮದಲ್ಲಿ 'ವಿಶ್ವರೂಪಿ' ಪುಸ್ತಕ ಬಿಡುಗಡೆ

ಚಿತ್ರದುರ್ಗ: ಮುರುಘಾ ಮಠದ ಶ್ರೀ ಡಾ.ಶಿವಮೂರ್ತಿ ಮುರುಘಾ ಶರಣರ ಪೀಠಾರೋಹಣದ 30 ನೇ ವಾರ್ಷಿಕೋತ್ಸವ ಸಮಾರಂಭ ಚಿತ್ರದುರ್ಗದ ಅನುಭವ ಮಂಟಪದಲ್ಲಿ ಅ.18 ರಂದು ನಡೆಯಿತು.

ಚಿತ್ರದುರ್ಗದ ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರಚೆನ್ನಯ್ಯ ಸ್ವಾಮಿಜಿಗಳು ಸಾನ್ನಿಧ್ಯ ವಹಿಸಿದ್ದು ಕಾರ್ಯಕ್ರಮದ ವಿಶೇಷತೆಯಾಗಿತ್ತು. ಅನುಭವಮಂಟಪದಲ್ಲಿ ನಡೆದ ಶರಣ ಸಂಸ್ಕೃತಿ ಉತ್ಸವ - 2021 ಕಾರ್ಯಕ್ರಮದಲ್ಲಿ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಸಂಪಾದಿತ ಕೃತಿ/ಪುಸ್ತಕ (coffee table book) "ವಿಶ್ವರೂಪಿ ಡಾ.ಶಿವಮೂರ್ತಿ ಮುರುಘಾ ಶರಣರು" ಇಂಗ್ಲೀಷ್ ಹಾಗೂ ಕನ್ನಡ ಆವೃತ್ತಿಯನ್ನು ಲೋಕಾರ್ಪಣೆ ಮಾಡಿ ಶ್ರೀಗಳಿಗೆ ಸಮರ್ಪಿಸಲಾಯಿತು. ಸಿಎಂ ಬಸವರಾಜ ಬೊಮ್ಮಾಯಿ ಪುಸ್ತಕ ಲೋಕಾರ್ಪಣೆ ಮಾಡಿದರು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಸಿಎಂ ಯಡಿಯೂರಪ್ಪ ಅವರಿಗೆ ಅನುಕ್ರಮವಾಗಿ ಬಸವಶ್ರೀ ಹಾಗೂ ಶರಣಶ್ರೀ ಪ್ರಶಸ್ತಿಗಳನ್ನು ನೀಡಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಬೆಂಗಳೂರು ವಿಭಾಗದ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನ ಹಿರಿಯ ಪ್ರಧಾನ ವ್ಯವಸ್ಥಾಪಕ ಪಿ.ಸುರೇಶ್ ಕುಮಾರ್, ಬೆಂಗಳೂರು ವಿಭಾಗದ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನ ರೆಸಿಡೆಂಟ್ ಎಡಿಟರ್ ಸಾಂತ್ವನ ಭಟ್ಟಾಚಾರ್ಯ, ಶರಣ ಸಂಸ್ಕೃತಿ ಉತ್ಸವ ಸಮಿತಿಯ ಕಾರ್ಯಾಧ್ಯಕ್ಷ ಕೆ.ಎಸ್ ನವೀನ್ ಭಾಗವಹಿಸಿದ್ದರು.

ಚಿತ್ರದುರ್ಗಕ್ಕೆ ಇಂಡಸ್ಟ್ರಿಯಲ್ ಟೌನ್ ಶಿಪ್: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಚಿತ್ರದುರ್ಗ ಜಿಲ್ಲೆಯಲ್ಲಿ ಇಂಡಸ್ಟ್ರಿಯಲ್ ಟೌನ್ ಶಿಪ್ ಸ್ಥಾಪಿಸುವ ಮುಖಾಂತರ ಮುಂಬೈ, ಚೆನ್ನೈ ಕಾರಿಡಾರ್ ಗೆ ಚಿತ್ರದುರ್ಗವನ್ನೂ ಸೇರಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು  ಶರಣ ಸಂಸ್ಕೃತಿ ಉತ್ಸವ - 2021 ಕಾರ್ಯಕ್ರಮದಲ್ಲಿ  ಮುರುಘಾಮಠದ ವತಿಯಿಂದ ಬಸವಭೂಷಣ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು. ಟೌನ್ ಶಿಪ್ ಉದ್ದೇಶಕ್ಕಾಗಿ 1000 ದಿಂದ 2000 ಎಕರೆ ಭೂಮಿಯ ಅವಶ್ಯಕತೆ ಇದೆ ಎಂದರು.‌


ವೈಚಾರಿಕ ಕ್ರಾಂತಿಯೇ ಶರಣ ಸಂಸ್ಕೃತಿ

ವೈಚಾರಿಕ ಕ್ರಾಂತಿಯೇ ಶರಣ ಸಂಸ್ಕೃತಿ. ಭಕ್ತಿ ಎಂದರೆ ಉತ್ಕೃಷ್ಟವಾದ ಕಾರಾರು ರಹಿತ ಪ್ರೀತಿ. ಅದು ಇದ್ದಲ್ಲಿ ಭಕ್ತಿ ಇರುತ್ತದೆ. ಸಮರ್ಪಣಾ ಭಾವದ ಬತ್ತಿ ಇಟ್ಟು, ತ್ಯಾಗದ ಜ್ಯೋತಿ ಬೆಳಗಿಸಿ ಅದರಲ್ಲಿ ಲೀನವಾಗಿ, ಕರಗುವುದೇ ನಿಜವಾದ ಭಕ್ತಿ. ಅಂತಹ ಅಪರೂಪದ ಸನ್ನೆವೇಶಕ್ಕೆ  ಸಾಕ್ಷಿಯಾಗಿರುವುದಕ್ಕೆ ನಾವೆಲ್ಲರೂ ಧನ್ಯರು ಎಂದರು. 

ಮನುಷ್ಯನನ್ನು ಮನುಷ್ಯನಂತೆ ಕಾಣುವ ಪ್ರಾಣಿಗಳನ್ನೂ ದಯೆಯಿಂದ ಕಾಣುವುದು ಶರಣ ಸಂಸ್ಕೃತಿ. ಶರಣರ ಬದುಕು ನಿಂತಿರುವುದು ಕಾಯಕವೇ ಕೈಲಾಸ ಎಂಬದ ತತ್ವದ ಮೇಲೆ. ಕಾಯಕಕ್ಕೆ ಉನ್ನತ ಸ್ಥಾನವನ್ನು ನೀಡಲಾಗಿದೆ. 
ದಯವೇ ಧರ್ಮದ  ಮೂಲ ಎಂದು ಎಲ್ಲರನ್ನೂ ಒಪ್ಪಿಕೊಳ್ಳುವ ಅನನ್ಯ ಸಂಸ್ಕೃತಿ ಶರಣರದ್ದು ಎಂದು ತಿಳಿಸಿದರು. 

ಸಂಗ್ರಹಕ್ಕೆ ಶರಣ ಸಂಸ್ಕೃತಿ ಒಪ್ಪುವುದಿಲ್ಲ. ಇದನ್ನೇ ಮುರುಘಾ ಶರಣರು ನಾಡಿನಲ್ಲಿ, ಸಮಾಜದಲ್ಲಿ ಬಿತ್ತುವ ಕೆಲಸವನ್ನು ಮಾಡುತ್ತಿದ್ದಾರೆ ಎಂದರು.

ಬಸವಣ್ಣ ಇಂದಿಗೂ ಪ್ರಸ್ತುತ ಎಂದು ಹೇಳುತ್ತೇವೆ. ಅಂದರೆ, 12 ನೇ ಶತಮಾನದಲ್ಲಿ ಇದ್ದ ಅಸಮಾನತೆ, ಲಿಂಗ ಬೇಧ, ಮೌಢ್ಯಗಳು ಇಂದಿಗೂ ಪ್ರಸ್ತುತ ಎನ್ನುವುದು ಸ್ಪಷ್ಟವಾಗುತ್ತದೆ. ಹೀಗಾಗಿ ಬಸವಣ್ಣ ಕಂಡ ಕಲ್ಪನೆಯ ಸಮಾಜ   ಇನ್ನೂ ನಿರ್ಮಾಣವಾಗದಿರುವುದಕ್ಕೆ ಇಂದು ಮುರುಘಾ ಶರಣರು ಮತ್ತೆ ಹುಟ್ಟಿ ಬಂದು ಅಪೂರ್ಣ ಕೆಲಸವನ್ನು ಪೂರ್ಣ ಮಾಡುತ್ತಿದ್ದಾರೆ ಎಂದರು. ಅವರು ಮಾತ್ರವಲ್ಲದೆ ಭಕ್ತ ಸಮೂಹವೂ ಇದನ್ನು ಮಾಡಿದಾಗ ಈ ಸತ್ಕಾರ್ಯ  ಯಶಸ್ವಿಯಾಗುತ್ತದೆ. ಮೌಢ್ಯಗಳ ವಿರುದ್ದದ ಅವರ ಹೋರಾಟ, ದೀನದಲಿತರ ಮೇಲಿನ ಪ್ರೀತಿಯ  ಅನನ್ಯ  ಅನುಭವದ ಬುತ್ತಿ  ಸಮಾಜಕ್ಕೆ ಸಿಗಲಿ ಎಂದರು. 

ಸುಭಿಕ್ಷ ಕರ್ನಾಟಕ ನಿರ್ಮಾಣ 
ಜನಶಕ್ತಿಯ ಮೂಲಕ ಬದಲಾವಣೆಗೆ ದಾರಿ ದೊರಕುತ್ತದೆ. ಕರ್ನಾಟಕವನ್ನು  ಸುರಕ್ಷಿತ, ಸುಭಿಕ್ಷ ನಾಡನ್ನು ಕಟ್ಟುವ ಸಂಕಲ್ಪವನ್ನು ಮಾಡಿದ್ದೇನೆ. ಈ ಕೆಲಸಕ್ಕೆ ಮೂರು ಶತಮಾನಗಳಿಗಿಂತ ಹೆಚ್ಚಿರುವ ಮಠದ ಪರಂಪರೆ ನನಗೆ ಪ್ರೇರಣೆ ನೀಡಿದೆ ಎಂದರು. 

ಸಮಾನತೆಯ ದಿನ
ಡಾ: ಶಿವಮುರುಘಾ ಸ್ವಾಮೀಜಿಗಳ ಜನ್ಮದಿನವನ್ನು ಸಮಾನತೆಯ ದಿನವನ್ನಾಗಿ ಆಚರಿಸಲು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡಿ ತೀರ್ಮಾನ ಪ್ರಕಟಿಸಲಾಗುವುದು ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com