ಚಿತ್ರದುರ್ಗ: ಒಂದೇ ಕುಟುಂಬದ ನಾಲ್ವರ ಸಾವಿಗೆ ಟ್ವಿಸ್ಟ್: ಅಪ್ರಾಪ್ತ ಮಗಳಿಂದಲೇ ಮನೆಮಂದಿಗೆಲ್ಲಾ ವಿಷಪ್ರಾಶನ!
ಕಳೆದ ಮೂರು ತಿಂಗಳ ಹಿಂದೆ ಚಿತ್ರದುರ್ಗ ಜಿಲ್ಲೆಯಲ್ಲಿ ವಿಷ ಆಹಾರ ಸೇವಿಸಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ.
Published: 19th October 2021 08:35 AM | Last Updated: 19th October 2021 08:35 AM | A+A A-

ಸಾಂದರ್ಭಿಕ ಚಿತ್ರ
ಚಿತ್ರದುರ್ಗ: ಕಳೆದ ಮೂರು ತಿಂಗಳ ಹಿಂದೆ ಚಿತ್ರದುರ್ಗ ಜಿಲ್ಲೆಯಲ್ಲಿ ವಿಷ ಆಹಾರ ಸೇವಿಸಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ.
ನಾಲ್ವರು ಊಟ ಮಾಡಿದ್ದ ಆಹಾರವನ್ನ ಪರೀಕ್ಷೆ ಮಾಡಿದ ಎಫ್ಎಸ್ಎಲ್ ಆಹಾರದಲ್ಲಿ ವಿಷ ಬೆರೆತಿರುವ ಕುರಿತು ವರದಿ ನೀಡಿದೆ. ತಂದೆ, ತಾಯಿ, ತಂಗಿ, ಅಜ್ಜಿ ಸಾವಿನ ಹಿಂದೆ ಅಪ್ರಾಪ್ತ ಪುತ್ರಿಯ ಕೈವಾಡ ಇರೋದು ಪೋಲೀಸರ ತನಿಖೆಯಲ್ಲಿ ಬಯಲಾಗಿದೆ.
ಪ್ರಕರಣ ಸಂಬಂಧ ಪೊಲೀಸರು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ತಂದೆ ತಾಯಿ ಕೂಲಿ ಕೆಲಸಕ್ಕೆ ಕಳುಹಿಸುತ್ತಿದ್ದರು, ಬೈಯುತ್ತಿದ್ದರು ಅನ್ನೋ ಕಾರಣಕ್ಕೆ ತಿನ್ನುವ ಮುದ್ದೆಗೆ ವಿಷ ಹಾಕಿದ್ದನ್ನ ಆರೋಪಿ ಒಪ್ಪಿಕೊಂಡಿದ್ದಾಳೆ.
ಚಿತ್ರದುರ್ಗ ತಾಲ್ಲೂಕಿನ ಭರಮ ಸಾಗರ ಹೋಬಳಿಯ ಗೊಲ್ಲರಹಟ್ಟಿಯಲ್ಲಿ ವಿಷಾಹಾರ ಸೇವಿಸಿ ನಾಲ್ವರು ಸಾವನ್ನಪಿದ ಘಟನೆ ಜುಲೈ 12 ರಂದು ನಡೆದಿತ್ತು. ಈ ಘಟನೆಯಲ್ಲಿ ಒಂದೇ ಕುಟುಂಬದ ತಿಪ್ಪೇಶ್ ನಾಯ್ಕ, ಪತ್ನಿ ಸುಧಾ ಭಾಯಿ, ರಮ್ಯ, ತಿಪ್ಪೇಶ್ ನಾಯ್ಕ್ ತಾಯಿ ಗುಂಡಿಭಾಯಿ ಸಾವನ್ನಪ್ಪಿದ್ದರು. ಉಳಿದಂತೆ ತಿಪ್ಪೇಶ್ ನಾಯ್ಕ್ ಪುತ್ರ ರಾಹುಲ್ ಆಸ್ಪತ್ರೆಯಲ್ಲಿ ದಾಖಲಾಗಿ ಸಾವು-ಬದುಕಿನ ನಡುವೋ ಹೋರಾಟ ನಡೆಸುತ್ತಿದ್ದ. ತಿಪ್ಪೇಶ್ ನಾಯ್ಕನ ಓರ್ವ ಪುತ್ರಿ ಮಾತ್ರ ಏನೂ ಆಗದೇ ಬದುಕಿ ಉಳಿದಿದ್ದಳು.
ಸ್ಥಳಕ್ಕೆ ಭೇಟಿ ನೀಡಿದ ಆರೋಗ್ಯ ಇಲಾಖೆ ಅಧಿಕಾರಿಗಳು ರಾತ್ರಿ ಊಟಮಾಡಿದ್ದ ಆಹಾರವನ್ನ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿದ್ದರು. ಮಾಡಿದ್ದರು. ಅದೇ ಸಮಯದಲ್ಲಿ ಪೋಲೀಸರು ಆಕೆ ಬಳಿ ಘಟನೆ ಕುರಿತು ಮಾಹಿತಿ ಪಡೆದುಕೊಂಡಿದ್ದರು. ವಿಪರ್ಯಾಸ ಅಂದ್ರೆ ರಾತ್ರಿ ಊಟದೊಳಗೆ ವಿಷ ಹಾಕಿದ್ದ ಆಕೆ, ಬರಿ ಅನ್ನ ಸಾಂಬರ್ ಮಾತ್ರ ಊಟ ಮಾಡಿದ್ದಳು. ಉಳಿದವರೆಲ್ಲಾ ಮುದ್ದೆ, ಅನ್ನ, ಸಾಂಬಾರ್ ಊಟ ಮಾಡಿದ್ರು, ಅಂತ ಏನೂ ಅರಿಯದವಳಂತೆ ಮಾಹಿತಿ ನೀಡಿದ್ದಳು. ಅಲ್ಲದೇ ಅವರು ಮನೆಯ ಹೊರಗಡೆ ಮುದ್ದೆ ಮಾಡಿದ್ದಾಗಿ ಹೇಳಿದ್ದು, ಬೇರೆ ಯಾರೋ ವಿಷ ಹಾಕಿರಬಹುದು ಅನ್ನುವ ಶಂಕೆ ವ್ಯಕ್ತವಾಗಿತ್ತು.
ಈ ಕುರಿತು ಪ್ರಕರಣ ದಾಖಲಿಸಿಕೊಂಡ ಭರಮಸಾಗರ ಪೋಲೀಸರು ತನಿಖೆ ಆರಂಭ ಮಾಡಿದ್ದರು. ಬಳಿಕ ಅದೃಷ್ಟವಶಾತ್ ಆಸ್ಪತ್ರೆಯಲ್ಲಿ ಸಾವು-ಬದುಕಿನ ಮಧ್ಯೆ ಹೋರಾಟ ಮಾಡುತ್ತಿದ್ದ ತಿಪ್ಪೇಶನಾಯ್ಕ್ ಪುತ್ರ ರಾಹುಲ್ ಚಿಕಿತ್ಸೆ ಫಲಿಸಿ ಗುಣಮುಖನಾಗಿ ಬಂದಿದ್ದ. ಆದರೆ ಈ ಘಟನೆಗೆ ಮೂಲ ಕಾರಣ ಏನು ಅನ್ನೋದು ಮಾತ್ರ ಯಾರಿಗೂ ತಿಳಿದಿರಲಿಲ್ಲ.
ಇದನ್ನೂ ಓದಿ: ಚಿತ್ರದುರ್ಗ: ವಿಷಾಹಾರ ಸೇವಿಸಿ ಒಂದೇ ಕುಟುಂಬದ ನಾಲ್ವರ ಸಾವು
ಕೆಲ ದಿನಗಳ ಬಳಿಕ ಈ ಪ್ರಕರಣದ ಎಫ್ ಎಸ್ ಎಲ್ ವರದಿ ಬಂದಿದ್ದು, ಮುದ್ದೆಯಲ್ಲಿ ಕ್ರಿಮಿನಾಶಕ ಬೆರೆತಿದೆ ಅನ್ನೋದು ಖಾತ್ರಿಯಾಗಿತ್ತು. ಅಂದಿನಿಂದಲೇ ತನಿಖೆ ಮತ್ತಷ್ಟು ಚುರುಕುಗೊಳಿಸಿದ್ದರು. ಪ್ರಕರಣದಲ್ಲಿ ಬದುಕಿ ಉಳಿದಿದ್ದ ರಾಹುಲ್ ಗೆ ತಂಗಿಯ ಮೇಲೆ ಅನುಮಾನ ಮೂಡಿ ಪೋಲೀಸರಿಗೆ ದೂರು ನೀಡಿದ್ದ. ರಾಹುಲು ದೂರಿನ ಮೇರೆಗೆ ಆಕೆಯನ್ನು ವಿಚಾರಣೆಗೆ ಒಳಪಡಿಸಿದಾಗ ಸತ್ಯ ಬಾಯಿ ಬಿಟ್ಟಿದ್ದಾಳೆ.
ತಿಪ್ಪೇಶ್ ನಾಯ್ಕಗೆ ಮೂರು ಜನ ಮಕ್ಕಳಿದ್ದು ಅವರಲ್ಲಿ ರಾಹುಲ್ ಮತ್ತು ರಮ್ಯಾ ಓದು-ಬರಹದಲ್ಲಿ ಚುರುಕಾಗಿದ್ದರು. ಆದ್ದರಿಂದಲೇ ಅವರಿಬ್ಬರನ್ನ ತಂದೆ-ತಾಯಿ ಪ್ರೀತಿಯಿಂದ ಮುದ್ದಿಸುತ್ತಿದ್ದರು. ಆದರೆ ಓದಿನಲ್ಲಿ ಹಿಂದುಳಿದಿದ್ದ ಆರೋಪಿನ್ನ ಕೂಲಿ ಕೆಲಸಕ್ಕೆ ಕಳುಹಿಸುವುದು, ಆಗಾಗ ಬೈಯುವುದು ಮಾಡುತ್ತಿದ್ದು, ಇದು ಆಕೆಗೆ ಪೋಷಕರ ಮೇಲೆ ದ್ವೇಷ ಹುಟ್ಟಿಸಿತ್ತು. ಇದರಿಂದಲೇ ಮುದ್ದೆಯಲ್ಲಿ ವಿಷ ಬೆರೆಸಿದ್ದೆ ಎಂದು ಒಪ್ಪಿಕೊಂಡಿದ್ದಾಳೆ. ಇದೀಗ ಆಕೆಯ ಮೇಲೆ ಕೊಲೆ ಪ್ರಕರಣವನ್ನ ದಾಖಲಿಸಿ ಕಾನೂನು ಕ್ರಮಕೈಗೊಳ್ಳಲಾಗಿದೆ.