ರಾಣಾನ ಸ್ಥಾನ ತುಂಬಲು ಬಂಡೀಪುರ ತಲುಪಿದ ಮುಧೋಳ ತಳಿಯ ಶ್ವಾನ: ಕಾರ್ಯಾಚರಣೆಗೆ ಸಿದ್ಧ

ಹಲವಾರು ಅರಣ್ಯ ಅಪರಾಧ ಪ್ರಕರಣಗಳನ್ನು ಭೇದಿಸುವಲ್ಲಿ ಯಶಸ್ವಿಯಾಗಿರುವ ಬಂಡೀಪುರದ ಶ್ವಾನ ರಾಣಾ ನಿವೃತ್ತಿಯ ಅಂಚಿನಲ್ಲಿದ್ದು, ರಾಣಾನ ಸ್ಥಾನ ತುಂಬಲು ತರಬೇತಿ ಪಡೆದ ಮುಧೋಳ ತಳಿಯ ಶ್ವಾನ ಇದೀಗ ಬಂಡೀಪುರ ತಲುಪಿದೆ.
ಮುಧೋಳ
ಮುಧೋಳ

ಬೆಂಗಳೂರು: ಹಲವಾರು ಅರಣ್ಯ ಅಪರಾಧ ಪ್ರಕರಣಗಳನ್ನು ಭೇದಿಸುವಲ್ಲಿ ಯಶಸ್ವಿಯಾಗಿರುವ ಬಂಡೀಪುರದ ಶ್ವಾನ ರಾಣಾ ನಿವೃತ್ತಿಯ ಅಂಚಿನಲ್ಲಿದ್ದು, ರಾಣಾನ ಸ್ಥಾನ ತುಂಬಲು ತರಬೇತಿ ಪಡೆದ ಮುಧೋಳ ತಳಿಯ ಶ್ವಾನ ಇದೀಗ ಬಂಡೀಪುರ ತಲುಪಿದೆ.

ಅರಣ್ಯ ಅಪರಾಧಗಳ ಪತ್ತೆಗಾಗಿ ಅಧಿಕಾರಿಗಳಿಗೆ ನೆರವಾಗುವುದಕ್ಕಾಗಿ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಅಧಿಕಾರಿಗಳು ಕಳೆದ ವರ್ಷ ಖರೀದಿಸಿದ್ದ ಮುಧೋಳ ತಳಿಯ ಎರಡು ಶ್ವಾನಗಳ ಪೈಕಿ ಒಂದು ಶ್ವಾನವು ತರಬೇತಿ ಪಡೆದು ಕಾರ್ಯಾಚರಣೆಗೆ ಸಿದ್ಧವಾಗಿದೆ.

ಶೆಫರ್ಡ್‌ ತಳಿಯ ರಾಣಾ ಎಂಬ ಶ್ವಾನ ನಿವೃತ್ತಿ ಅಂಚಿಗೆ ಬಂದಿರುವುದರಿಂದ ಅದರ ಜಾಗದಲ್ಲಿ ಇನ್ನೆರಡು ಶ್ವಾನಗಳನ್ನು ನಿಯೋಜಿಸಲು ಅಧಿಕಾರಿಗಳು ಬಯಸಿದ್ದರು. ಇದಕ್ಕಾಗಿ ಬಾಗಲಕೋಟೆ ಜಿಲ್ಲೆಯ ಮುಧೋಳ ಸಮೀಪದ ತಿಮ್ಮಾಪುರದ ಮುಧೋಳ ಶ್ವಾನ ಸಂಶೋಧನಾ ಕೇಂದ್ರದಿಂದ ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಗಂಡು, ಹೆಣ್ಣು ಮರಿಗಳನ್ನು ತರಲಾಗಿತ್ತು.

ಗಂಡು ಮರಿಗೆ ಕಾಲಿನಲ್ಲಿ ದೋಷ ಇದ್ದುದರಿಂದ ಅದನ್ನು ತರಬೇತಿಗೆ ಕಳುಹಿಸಿಲ್ಲ. ಆ ಶ್ವಾನವನ್ನು ಪಶು ವೈದ್ಯಕೀಯ ಇಲಾಖೆಗೆ ಹಸ್ತಾಂತರಿಸಲಾಗಿದೆ. ಇನ್ನು ಹೆಣ್ಣು ಮರಿಗೆ ಮಾರ್ಗರೇಟ್‌ ಎಂದು ಹೆಸರು ಇಡಲಾಗಿದ್ದು, ಮಾರ್ಗಿ ಎಂದು ಕರೆಯಲಾಗುತ್ತಿದೆ.

ಏಳು ತಿಂಗಳ ತರಬೇತಿಗಾಗಿ ಅದನ್ನು ಬೆಂಗಳೂರಿನ ಪೊಲೀಸ್‌ ಶ್ವಾನ ತರಬೇತಿ ಕೇಂದ್ರಕ್ಕೆ ಕಳುಹಿಸಲಾಗಿತ್ತು. ತರಬೇತಿ ಮುಗಿಸಿಕೊಂಡು ಐದು ದಿನದ ಹಿಂದೆ ಮಾರ್ಗಿ ಬಂಡೀಪುರಕ್ಕೆ ಹಿಂದಿರುಗಿದ್ದು, ಈಗ ರಾಣಾ ಶ್ವಾನದೊಂದಿಗೆ ಸೇರಿ ಕಾರ್ಯಾಚರಣೆಯ ಪಟ್ಟುಗಳನ್ನು ಕಲಿಯುತ್ತಿದೆ.

ನಿವೃತ್ತಿ ಅಂಚಿ ರಾಣಾ ಇದ್ದು, ಈ ಹಂತದಲ್ಲಿಯು ತನ್ನ ಚುರುಕುತನದಿಂದ ಈಗಲೂ ಅಪರಾಧ ಪತ್ತೆ ಕಾರ್ಯಾಚರಣೆಯಲ್ಲಿ ಪರಿಣಾಮಕಾರಿಯಾಗಿ ತೊಡಗಿಸಿಕೊಳ್ಳುತ್ತಿದೆ. ಅದು ನಿವೃತ್ತಿಯಾಗುವ ಮುಂಚೆ ಹೊಸದಾಗಿ ಸೇರ್ಪಡೆಗೊಂಡಿರುವ ಮುಧೋಳ ತಳಿಯ ಶ್ವಾನವನ್ನು ಪೂರ್ಣವಾಗಿ ಕಾರ್ಯಾಚರಣೆಗೆ ಜ್ಜುಗೊಳಿಸುವ ಗುರಿಯನ್ನು ಬಂಡೀಪುರದ ಅಧಿಕಾರಿಗಳು ಹೊಂದಿದ್ದಾರೆ.  

ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ನಿರ್ದೇಶಕ ಎಸ್.ಆರ್. ನಟೇಶ್ ಅವರು ಮಾತನಾಡಿ, ರಾಣಾ ಸದ್ಯಕ್ಕೆ ನಿವೃತ್ತಿ ಹೊಂದುತ್ತಿಲ್ಲ. ಮಾರ್ಗಿ 15 ದಿನಗಳ ಹಿಂದೆ ನಮ್ಮ ಜೊತೆಗೂಡಿದ್ದಾಳೆ. ಇದೀಗ ತರಬೇತಿ ನೀಡಲಾಗುತ್ತಿದೆ. ಈ ಪ್ರದೇಶಕ್ಕೆ ಒಗ್ಗಿಕೊಳ್ಳುತ್ತಿದ್ದಾಳೆ. ರಾಣಾ ಮಾಡುತ್ತಿದ್ದ ಕೆಲಸವನ್ನು ಮಾಡುತ್ತಿದ್ದಾಳೆಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com