ಕೊರೋನಾ 3ನೇ ಅಲೆ: ರಾಜ್ಯದಲ್ಲಿ ಮಕ್ಕಳ ಮೇಲಿನ ಪರೀಕ್ಷೆ ಸಂಖ್ಯೆ ಹೆಚ್ಚಳ!
ಕೊರೋನಾ ಸಾಂಕ್ರಾಮಿಕ ರೋಗದ ಸಂಭಾವ್ಯ ಮೂರನೇ ಅಲೆ ಆತಂಕ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮಕ್ಕಳ ಮೇಲಿನ ಪರೀಕ್ಷೆಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ ಎಂದು ತಿಳಿದುಬಂದಿದೆ.
Published: 25th October 2021 12:41 PM | Last Updated: 25th October 2021 12:41 PM | A+A A-

ಸಂಗ್ರಹ ಚಿತ್ರ
ಬೆಂಗಳೂರು: ಕೊರೋನಾ ಸಾಂಕ್ರಾಮಿಕ ರೋಗದ ಸಂಭಾವ್ಯ ಮೂರನೇ ಅಲೆ ಆತಂಕ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮಕ್ಕಳ ಮೇಲಿನ ಪರೀಕ್ಷೆಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ ಎಂದು ತಿಳಿದುಬಂದಿದೆ.
ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ಸೆಪ್ಟೆಂಬರ್ 21 ಮತ್ತು ಅಕ್ಟೋಬರ್ 21 ರ ನಡುವೆ ನಡೆಸಿದ ಒಟ್ಟು ಪರೀಕ್ಷೆಗಳಲ್ಲಿ ಶೇಕಡಾ 20.8 ರಷ್ಟು ಮಕ್ಕಳಿಗೆ ನಡೆಸಲಾಗಿದೆ ಎಂದು ತಿಳಿಸಿದೆ.
ಕೊರೋನಾ ಮೂರನೇ ಅಲೆ ಮಕ್ಕಳ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಹೇಳಲಾಗುತ್ತಿರುವ ಹಿನ್ನೆಲೆಯಲ್ಲಿ ಈಗಾಗಲೇ ರಾಜ್ಯ ಸರ್ಕಾರ ರಾಜ್ಯದಲ್ಲಿ ಒಟ್ಟು ಪರೀಕ್ಷೆಗಳಲ್ಲಿ ಶೇ.10ರಷ್ಟು ಪರೀಕ್ಷೆಯನ್ನು 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಕಡ್ಡಾಯವಾಗಿ ಮಾಡಬೇಕು ಎಂದು ನಿರ್ದೇಶಿಸಿದೆ. ಲಸಿಕೆ ಪಡೆದುಕೊಳ್ಳಲು ಮಕ್ಕಳು ಅರ್ಹರಲ್ಲ ಕಾರಣ ಹಾಗೂ ಈಗಾಗಲೇ ಶಾಲೆಗಳು ಕೂಡ ಪುನರಾರಂಭಗೊಂಡಿರುವ ಹಿನ್ನೆಲೆಯಲ್ಲಿ ಮಕ್ಕಳಿಗೆ ಕೋವಿಡ್ ಪರೀಕ್ಷೆಗಳನ್ನು ಹೆಚ್ಚಿಸಲಾಗಿದೆ ಎಂದು ಇಲಾಖೆ ಮಾಹಿತಿ ನೀಡಿದೆ.
ರಾಜ್ಯದಲ್ಲಿ 5,00,31,061 ಪರೀಕ್ಷೆಗಳನ್ನು ನಡೆಸಲಾಗಿದ್ದು, ಇದರಲ್ಲಿ ಶೇ.81 ಕ್ಕಿಂತ ಹೆಚ್ಚು ರಿವರ್ಸ್ ಟ್ರಾನ್ಸ್‌ಕ್ರಿಪ್ಷನ್ ಪಾಲಿಮರೇಸ್ ಚೈನ್ ರಿಯಾಕ್ಷನ್ (ಆರ್‌ಟಿ-ಪಿಸಿಆರ್) ವಿಧಾನವನ್ನು ಬಳಕೆ ಮಾಡಲಾಗಿದೆ ಎಂದು ತಿಳಿಸಿದೆ.
ಸರ್ಕಾರಿ ಪ್ರಯೋಗಾಲಯಗಳಲ್ಲಿ 3,51,78,814 ಪರೀಕ್ಷೆಗಳನ್ನು ನಡೆಸಲಾಗಿದ್ದರೆ, ಖಾಸಗಿ ಪ್ರಯೋಗಾಲಯಗಳಲ್ಲಿ 1,49,91,638 ಪರೀಕ್ಷೆಗಳನ್ನು ನಡೆಸಲಾಗಿದೆ. ರಾಜ್ಯದಲ್ಲಿ ಆರ್‌ಟಿ-ಪಿಸಿಆರ್ ಸಾಮರ್ಥ್ಯ 1,83,780ಕ್ಕೆ ಹೆಚ್ಚಾಗಿದೆ. ಸೋಂಕನ್ನು ಶೀಘ್ರಗತಿಯಲ್ಲಿ ಪತ್ತೆ ಮಾಡುವುದು, ಹಾಟ್ ಸ್ಪಾಟ್ ಗಳ ಗುರ್ತಿಸಲು ಪರೀಕ್ಷೆ ನಡೆಸುವುದು ಅತ್ಯಂತ ಮುಖ್ಯವಾಗಿದೆ. ದಿನನಿತ್ಯದ ಪರೀಕ್ಷೆಗಳ ಸಂಖ್ಯೆಯನ್ನು ಗಮನಿಸಲಾಗುತ್ತಿದೆ. ಸಕ್ರಿಯ ಪ್ರಕರಣಗಳ ಪತ್ತೆಗೆ ಆಶಾ ಕಾರ್ಯಕರ್ತೆಯರು ಪ್ರತೀ ಮನೆಗೆ ಭೇಟಿ ನೀಡುತ್ತಿದ್ದಾರೆಂದು ಮಾಹಿತಿ ನೀಡಿದೆ.