ಬೆಂಗಳೂರು: ಅನಧಿಕೃತ ವೈದ್ಯಕೀಯ ತರಬೇತಿ ನೀಡುತ್ತಿದ್ದ ಸ್ಪರ್ಶ್ ಆಸ್ಪತ್ರೆಗೆ ನೋಟಿಸ್

ಫೀಟಲ್ ಮೆಡಿಸನ್ ತರಬೇತಿಯನ್ನು ಸರ್ಕಾರದ ಅನುಮತಿ ಪಡೆಯದೇ ಅನಧಿಕೃತವಾಗಿ ನಡೆಸುತ್ತಿರುವುದಲ್ಲದೇ ಕೆ.ಎಂ.ಸಿ ನೋಂದಣಿ ಇಲ್ಲದೇ ಇರುವ ಹಲವು ವಿಧ್ಯಾರ್ಥಿಗಳಿಗೆ ತರಬೇತಿ ನೀಡುತ್ತಿರುವುದು ಕಂಡುಬಂದಿರುವ ಹಿನ್ನೆಲೆಯಲ್ಲಿ...
ಅಧಿಕಾರಿಗಳ ತಂಡ
ಅಧಿಕಾರಿಗಳ ತಂಡ

ಬೆಂಗಳೂರು: ಫೀಟಲ್ ಮೆಡಿಸನ್ ತರಬೇತಿಯನ್ನು ಸರ್ಕಾರದ ಅನುಮತಿ ಪಡೆಯದೇ ಅನಧಿಕೃತವಾಗಿ ನಡೆಸುತ್ತಿರುವುದಲ್ಲದೇ ಕೆ.ಎಂ.ಸಿ ನೋಂದಣಿ ಇಲ್ಲದೇ ಇರುವ ಹಲವು ವಿಧ್ಯಾರ್ಥಿಗಳಿಗೆ ತರಬೇತಿ ನೀಡುತ್ತಿರುವುದು ಕಂಡುಬಂದಿರುವ ಹಿನ್ನೆಲೆಯಲ್ಲಿ ನಗರದ ಯಶವಂತಪುರದಲ್ಲಿರುವ ಸ್ಪರ್ಶ್ ಸೂಪರ್ ಸ್ಪೆಷ್ಯಾಲಿಟಿ ಆಸ್ಪತ್ರೆಗೆ ನೋಟಿಸ್ ನೀಡಲಾಗಿದೆ ಎಂದು ಬೆಂಗಳೂರು ನಗರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ. ಶ್ರೀನಿವಾಸ್ ಅವರು ಮಂಗಳವಾರ ತಿಳಿಸಿದ್ದಾರೆ.

ಗರ್ಭಧಾರಣಾ ಪೂರ್ವ ಮತ್ತು ಪ್ರಸವಪೂರ್ವ ಪತ್ತೆ ತಂತ್ರ ವಿಧಾನಗಳ(ಲಿಂಗ ಆಯ್ಕೆಯ ನಿಷೇಧ)ಅಧಿನಿಯಮ, (ಪಿಸಿಪಿಎನ್ ಡಿಟಿ) 1994ರನ್ವಯ ಇಂದು ಬೆಂಗಳೂರು ನಗರ ಜಿಲ್ಲಾ ಸಲಹಾ ಸಮಿತಿ ಹಾಗೂ ಜಿಲ್ಲಾ ತಪಾಸಣಾ ಮತ್ತು ಮೇಲ್ವಿಚಾರಣಾ ಸಮಿತಿ ಸದಸ್ಯರು ನಡೆಸಿದ ತಪಾಸಣಾ ಭೇಟಿ ವೇಳೆ ಡಾ.ಶ್ರೀನಿವಾಸ್ ಅವರು ಈ ಮಾಹಿತಿ ನೀಡಿದ್ದಾರೆ.

ಒಟ್ಟು 11 ಸ್ಕ್ಯಾನಿಂಗ್ ಯಂತ್ರಗಳನ್ನು ಪರವಾನಗಿ ಪಡೆದು ಬಳಸಲಾಗುತ್ತಿದೆ. ಸ್ಕ್ಯಾನಿಂಗ್ ಮಾಡುವ ಮುನ್ನ ಫಾರಂ ಎಫ್ ಅನ್ನು ಕಡ್ಡಾಯವಾಗಿ ಆನ್ ಲೈನ್ ಮೂಲಕ ಸಲ್ಲಿಸಿ ನಂತರವೇ ಸ್ಕ್ಯಾನಿಂಗ್ ಮಾಡಬೇಕು. ಆದರೆ, ಇಲ್ಲಿ ಸ್ಕ್ಯಾನಿಂಗ್ ಮಾಡಿದ ನಂತರ ಸಂಜೆ ವೇಳೆಗೆ ಆನ್ ಲೈನ್ ನಲ್ಲಿ ಮಾಹಿತಿ ಅಪ್ ಲೋಡ್ ಮಾಡಲಾಗುತ್ತಿರುವುದು ಕಂಡು ಬಂದಿದೆ. ಅಲ್ಲದೇ, ಸ್ಕ್ಯಾನಿಂಗ್ ಕೊಠಡಿಯಲ್ಲಿ ಭ್ರೂಣದ ಚಿತ್ರವನ್ನು ದೊಡ್ಡ ಟಿ.ವಿಯಲ್ಲಿ ಬಿತ್ತರಿಸಿ ತೋರಿಸುವ ವ್ಯವಸ್ಥೆ ಮಾಡಲಾಗಿರುವುದು ಕಾನೂನು ಬಾಹಿರವಾಗಿದೆ. ಈ ಎಲ್ಲಾ ಅಂಶಗಳನ್ನು ಉಲ್ಲೇಖಿಸಿ ಆಸ್ಪತ್ರೆಗೆ ನೋಟಿಸ್ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.

ತಪಾಸಣಾ ಭೇಟಿಯಲ್ಲಿ ಸಮಿತಿ ಸದಸ್ಯರಾದ ಕೆ ಆರ್ ಪುರಂ ಸಾರ್ವಜನಿಕ ಆಸ್ಪತ್ರೆ ರೇಡಿಯಾಲಜಿಸ್ಟ್ ಡಾ. ಲೀಲಾ, ಡಾ. ವಿಜಯ್ ಸಾರಥಿ, ಡಾ. ಶಿಲ್ಪ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪ ನಿರ್ದೇಶಕರಾದ ಪಲ್ಲವಿ ಹೊನ್ನಾಪುರ, ಬೆಂಗಳೂರು ಉತ್ತರ ತಾಲ್ಲೂಕು ಆರೋಗ್ಯಾಧಿಕಾರಿ ಡಾ. ರಮೇಶ್ ಹಾಗೂ ವಿಝನ್ ಬೆಂಗಳೂರು ಟ್ರಸ್ಟ್‌ನ ವಸಂತ ಕುಮಾರ್ ಅವರು ಉಪಸ್ಥಿತರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com