ಅಕ್ರಮ ಕಟ್ಟಡ ತೆರವುಗೊಳಿಸುವಲ್ಲಿ ವಿಳಂಬ ನೀತಿ: ಬಿಬಿಎಂಪಿಯನ್ನು ತರಾಟೆಗೆ ತೆಗೆದುಕೊಂಡ ಹೈಕೋರ್ಟ್
ನಗರದಲ್ಲಿರುವ ಅಕ್ರಮ ಕಟ್ಟಡಗಳ ತೆರಲವುಗೊಳಿಸುವಲ್ಲಿ ವಿಳಂಬ ನೀತಿ ಅನುಸರಿಸುತ್ತಿರುವ ಬಿಬಿಎಂಪಿಯನ್ನು ಬುಧವಾರ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿತ್ತು.
Published: 28th October 2021 10:37 AM | Last Updated: 28th October 2021 10:37 AM | A+A A-

ಸೋಮಶೆಟ್ಟಿ ಹಳ್ಳಿಯಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದ್ದ ವಾಣಿಜ್ಯ ಮಳಿಗೆ ನೆಲಸಮಗೊಳಿಸುತ್ತಿರುವ ಬಿಬಿಎಂಪಿ.
ಬೆಂಗಳೂರು: ನಗರದಲ್ಲಿರುವ ಅಕ್ರಮ ಕಟ್ಟಡಗಳ ತೆರಲವುಗೊಳಿಸುವಲ್ಲಿ ವಿಳಂಬ ನೀತಿ ಅನುಸರಿಸುತ್ತಿರುವ ಬಿಬಿಎಂಪಿಯನ್ನು ಬುಧವಾರ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿತ್ತು.
ಅಕ್ರಮ ಕಟ್ಟಡ ತೆರವು ಸಂಬಂಧ ದಾಖಲಿಸಿಕೊಂಡಿರುವ ಸ್ವಯಂ ಪ್ರೇರಿತ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಅವರ ನೇತೃತ್ವದ ವಿಭಾಗೀಯ ಪೀಠ ಬುಧವಾರ ವಿಚಾರಣೆ ನಡೆಸಿತು. ಪ್ರಕರಣದ ವಿಚಾರಣೆ ವೇಳೆ ಹೈಕೋರ್ಟ್ಗೆ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಹಾಜರಾಗಿದ್ದರು.
ಈ ವೇಳೆ ಪಾಲಿಕೆ ಪರ ವಕೀಲರು ಪ್ರಮಾಣ ಪತ್ರ ಸಲ್ಲಿಸಿ, 2020ರ ನಂತರ ನಿರ್ಮಾಣವಾದ 5,905 ಕಟ್ಟಡಗಳ ಸಮೀಕ್ಷೆ ಮಾಡಲಾಗಿದೆ. ಈ ಪೈಕಿ 4,279 ಕಟ್ಟಡಗಳು ನಕ್ಷೆ ಉಲ್ಲಂಘಿಸಿ ನಿರ್ಮಾಣವಾಗಿವೆ. ಈ ಕಟ್ಟಡಗಳಿಗೆ ನೋಟಿಸ್ ನೀಡುವ ಪ್ರಕ್ರಿಯೆ ನಡೆಯುತ್ತಿದೆ. ಇನ್ನೂ 2,591 ಕಟ್ಟಡಗಳ ಸರ್ವೆ ಬಾಕಿಯಿದೆ. ನಕ್ಷೆಯಿಲ್ಲದೆ ನಿರ್ಮಾಣವಾದ ಕಟ್ಟಡಗಳ ಸರ್ವೆ ಆರಂಭವಾಗಿಲ್ಲ. ಅಕ್ರಮ ಸಕ್ರಮ ಕಾಯ್ದೆ ಸುಪ್ರೀಂಕೋರ್ಟ್‌ನಲ್ಲಿ ಬಾಕಿಯಿವೆ ಎಂದು ವಿವರಿಸಿದರು.
ಆದರೆ ಬಿಬಿಎಂಪಿ ನೀಡಿರುವ ಪ್ರಮಾಣಪತ್ರ ತೃಪ್ತಿಕರವಾಗಿಲ್ಲ ಎಂದ ಹೈಕೋರ್ಟ್, 2019ರಲ್ಲಿ ಪಿಐಎಲ್ ದಾಖಲಾದ ಮೇಲೂ ಕ್ರಮ ಕೈಗೊಂಡಿಲ್ಲ. ನಕ್ಷೆಯಿಲ್ಲದ ಕಟ್ಟಡಗಳ ಮೇಲೆ ಏಕೆ ಕ್ರಮ ಕೈಗೊಂಡಿಲ್ಲ. ಅಕ್ರಮ ಕಟ್ಟಡ ನೆಲಸಮ ಮಾಡಿಲು ಹೆದರುತ್ತಿರುವುದೇಕೆ? ಇದು ತೀರಾ ಆಘಾತಕಾರಿ ವಿಚಾರ ಎಂದು ಹೇಳಿತು. ಅಲ್ಲದೆ, ಕೋರ್ಟ್ ಆದೇಶವಿದೆ. ಹಾಗಾಗಿ ಅನಧಿಕೃತ ಕಟ್ಟಡಗಳ ವಿರುದ್ಧ ಬೇಗ ಕ್ರಮ ಕೈಗೊಂಡರೆ ನಿಮಗೂ ಒಳ್ಳೆಯದು ಎಂದು ಎಚ್ಚರಿಕೆ ನೀಡಿದ ನ್ಯಾಯಪೀಠ, ಪಾರ್ಕ್, ರಸ್ತೆ, ಉದ್ಯಾನವನ ಮತ್ತಿತರ ಸಾರ್ವಜನಿಕ ಪ್ರದೇಶಗಳಲ್ಲಿನ ಅಕ್ರಮ ಕಟ್ಟಡ ತೆರವುಗೊಳಿಸಲೇಬೇಕು. ತೆರವುಗೊಳಿಸಿದ ಫೋಟೋ ಸಹಿತ ವರದಿ ಸಲ್ಲಿಸಬೇಕು ಎಂದು ಸೂಚಿಸಿತು.
ನಕ್ಷೆ ಪಡೆದು ನಿಯಮ ಉಲ್ಲಂಘಿಸಿರುವ ಕಟ್ಟಡಗಳ ಸಮೀಕ್ಷೆಯನ್ನು ಆದಷ್ಟು ಶೀಘ್ರ ಪೂರ್ಣಗೊಳಿಸಬೇಕು, ಈಗಾಗಲೇ ಗುರುತಿಸಿರುವ ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು. ನಕ್ಷೆ ಇಲ್ಲದ ಕಟ್ಟಡಗಳ ಸರ್ವೆ ಕಾರ್ಯವನ್ನೂ ಪೂರ್ಣಗೊಳಿಸಿ ಒಟ್ಟಾರೆ ಅನಧಿಕೃತ ಕಟ್ಟಡಗಳ ತೆರವು ಕುರಿತು ಕ್ರಮ ಕೈಗೊಂಡಿರುವ ಬಗ್ಗೆ ಡಿ.9 ರೊಳಗೆ ವರದಿ ನೀಡಬೇಕು ಎಂದು ಹೈಕೋರ್ಟ್ ತಾಕೀತು ಮಾಡಿತು.