ದಕ್ಷಿಣ ಭಾರತ ರಾಜ್ಯಗಳ ಪ್ರವಾಸೋದ್ಯಮ ಸಮ್ಮೇಳನದಲ್ಲಿ ಕನ್ನಡ ಕಡೆಗಣಿಸಿದ ಅಧಿಕಾರಿಗಳು!
66ನೇ ಕನ್ನಡ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ಕನ್ನಡಕ್ಕಾಗಿ ನಾವು ವಿಶೇಷ ಅಭಿಯಾನ ನಡೆಯುತ್ತಿರುವ ಹೊತ್ತಿನಲ್ಲೇ ನಗರದಲ್ಲಿ ಆಯೋಜಿಸಿದ್ದ ದಕ್ಷಿಮ ಭಾರತ ರಾಜ್ಯಗಳ ಪ್ರವಾಸೋದ್ಯಮ ಸಚಿವರ ಸಮ್ಮೇಳನದಲ್ಲಿ ಕನ್ನಡ ಕಡೆಗಣನೆ ಮಾಡಿದ ಘಟನೆ ನಡೆದಿದೆ.
Published: 29th October 2021 11:17 AM | Last Updated: 29th October 2021 11:17 AM | A+A A-

ಸಂಗ್ರಹ ಚಿತ್ರ
ಬೆಂಗಳೂರು: 66ನೇ ಕನ್ನಡ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ಕನ್ನಡಕ್ಕಾಗಿ ನಾವು ವಿಶೇಷ ಅಭಿಯಾನ ನಡೆಯುತ್ತಿರುವ ಹೊತ್ತಿನಲ್ಲೇ ನಗರದಲ್ಲಿ ಆಯೋಜಿಸಿದ್ದ ದಕ್ಷಿಮ ಭಾರತ ರಾಜ್ಯಗಳ ಪ್ರವಾಸೋದ್ಯಮ ಸಚಿವರ ಸಮ್ಮೇಳನದಲ್ಲಿ ಕನ್ನಡ ಕಡೆಗಣನೆ ಮಾಡಿದ ಘಟನೆ ನಡೆದಿದೆ.
ದಕ್ಷಿಣ ಭಾರತದ 8 ರಾಜ್ಯಗಳಾದ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳ, ಲಕ್ಷದ್ವೀಪ, ಪುದುಚೇರಿ ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿನ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಅರ್ಥ ಮಾಡಿಕೊಳ್ಳುವ ನಿಟ್ಟಿನಲ್ಲಿ ಕೇಂದ್ರ ಪ್ರವಾಸೋದ್ಯಮ ಸಚಿವಾಲಯ ಈ ಸಮ್ಮೇಳನವನ್ನು ಆಯೋಜಿಸಿದೆ. ಆದರೆ, ಬೆಂಗಳೂರನಲ್ಲಿ ಹಮ್ಮಿಕೊಳ್ಳಲಾದ ಈ ಸಮ್ಮೇಳನದಲ್ಲಿಯೇ ಕನ್ನಡ ಮಾಯವಾಗಿರುವುದು ಕಂಡು ಬಂದದ್ದು ಕನ್ನಡಿಗರ ಕಣ್ಣು ಕೆಂಪಗಾಗುವಂತೆ ಮಾಡಿತ್ತು.
ಸಮಾರಂಭದ ಬ್ಯಾನರ್ ನಲ್ಲಿ ಹಿಂದಿ ಮತ್ತು ಇಂಗ್ಲೀಷ್ ಮಾತ್ರ ಬಳಕೆ ಮಾಡಿರುವ ಕುರಿತು ಮಾಧ್ಯಮಗಳಲ್ಲಿ ಸುದ್ದಿ ಪ್ರಕಟಗೊಳ್ಳುತ್ತಿದ್ದಂತೆಯೇ ಎಚ್ಚೆತ್ತ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಅವರು, ಕಾರ್ಯಕ್ರಮವನ್ನು ಆಯೋಜಿಸಿದ್ದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಈ ಕುರಿತು ಕೇಂದ್ರ ಪ್ರವಾಸೋದ್ಯಮ ಸಚಿವಾಲಯದ ಗಮನಕ್ಕೂ ತರುವ ಕೆಲಸ ಮಾಡಿದರು. ಪದೇ ಪದೇ ಪ್ರಾದೇಶಿಕ ಭಾಷೆಗಳನ್ನು ಕಡೆಗಣಿಸಲಾಗುತ್ತಿದೆ, ಪ್ರಾದೇಶಿಕ ಭಾಷೆಗಳಿಗೆ ಪ್ರಾಮುಖ್ಯತೆ ನೀಡಬೇಕೆಂದು ತಿಳಿಸಿದರು.
ಘಟನೆ ಬಳಿಕ ಪ್ರತಿಕ್ರಿಯೆ ನೀಡಿದ ಕೇಂದ್ರ ಪ್ರವಾಸೋದ್ಯಮ ಸಚಿವ ಕಿಶನ್ ರೆಡ್ಡಿ ಅವರು, ತಪ್ಪೊಪ್ಪಿಕೊಂಡು, ಅಧಿಕಾರಿಗಳಿಂದ ತಪ್ಪಾಗಿದೆ. ಮುಂದೆ ಹೀಗಾಗದಂತೆ ಎಚ್ಚರಿಕೆ ವಹಿಸಲಾಗುವುದು ಎಂದು ಹೇಳಿದರು.
ಬಳಿಕ ಮಾತನಾಡಿದ ಕರ್ನಾಟಕದ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಅವರು, ಇದು ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ನಡೆಯುತ್ತಿರುವ ಕಾರ್ಯಕ್ರಮ. ಹಾಗಾಗಿ ಅಧಿಕಾರಿಗಳಿಂದ ಇಂಥ ಲೋಪವಾಗಿದೆ. ನನ್ನ ಗಮನಕ್ಕೆ ಬಂದ ತಕ್ಷಣ ಡಿಜಿಟಲ್ ಬೋರ್ಡ್ ಬದಲಾವಣೆ ಮಾಡಲಾಗಿದೆ. ಈಗ ಬ್ಯಾನರ್ ಕೂಡ ಬದಲಾವಣೆ ಮಾಡುತ್ತಿದ್ದೇವೆ. ಕನ್ನಡ ಕಡೆಗಣನೆ ಮಾಡಿಲ್ಲ ಎಂದರು.
ಆದರೆ, ರಾಜ್ಯ ಸಚಿವನಾಗಿ ಆಗಿರುವ ತಪ್ಪನ್ನು ಒಪ್ಪಲು ಸಾಧ್ಯವಿಲ್ಲ. ಪ್ರಾದೇಶಿಕ ಭಾಷೆಗೆ ಪ್ರಾಮುಖ್ಯತೆ ನೀಡಬೇಕು. ಇದು ನಮ್ಮ ಜವಾಬ್ದಾರಿಯಾಗಿದೆ. ಕೇಂದ್ರ ಸಚಿವಾಲಯ ಈ ಕುರಿತು ಒಂದು ದಿನಕ್ಕೂ ಮುನ್ನವೇ ನಮಗೆ ಮಾಹಿತಿ ನೀಡಬೇಕೆಂದು ನಮಗೇ ಹೇಳುತ್ತಿದೆ. ಆದರೆ, ಕಾರ್ಯಕ್ರಮದಲ್ಲಿ ಆಯೋಜನೆಯಲ್ಲಿ ನಾವು ಪಾಲ್ಗೊಂಡಿರಲಿಲ್ಲ. ಕಾರ್ಯಕ್ರಮದ ಪ್ರತಿನಿಧಿಗಳಾಗಿ ಬಂದಿದ್ದೇವೆ ಎಂದು ತಿಳಿಸಿದರು.