ಧಾರವಾಡ: ಆರ್‌ಎಸ್‌ಎಸ್‌ ಬೈಠಕ್‌ ಆರಂಭ, ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದಾಳಿಗೆ ಖಂಡನೆ

ಧಾರವಾಡದ ಗರಗ ರಸ್ತೆಯಲ್ಲಿರುವ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರದಲ್ಲಿ ಮೂರು ದಿನಗಳ ಕಾಲ ನಡೆಯುತ್ತಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತ ಕಾರ್ಯಕಾರಿ ಮಂಡಳಿಯ ಸಭೆಗೆ ಗುರುವಾರ ಚಾಲನೆ ದೊರೆಯಿತು.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಧಾರವಾಡ: ಧಾರವಾಡದ ಗರಗ ರಸ್ತೆಯಲ್ಲಿರುವ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರದಲ್ಲಿ ಮೂರು ದಿನಗಳ ಕಾಲ ನಡೆಯುತ್ತಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತ ಕಾರ್ಯಕಾರಿ ಮಂಡಳಿಯ ಸಭೆಗೆ ಗುರುವಾರ ಚಾಲನೆ ದೊರೆಯಿತು.

ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ಆರಂಭವಾದ ಬೈಠಕ್‌ಗೆ ಸಂಘದ ಮುಖ್ಯಸ್ಥ ಡಾ. ಮೋಹನ ಭಾಗವತ ಹಾಗೂ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅವರು ಭಾರತಮಾತೆಯ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಬೈಠಕ್‌ಗೆ ಚಾಲನೆ ನೀಡಿದರು.

ಸಭೆಯ ಆರಂಭದಲ್ಲಿ ಇತ್ತೀಚೆಗೆ ಅಗಲಿದ ಗಣ್ಯರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಇದರಲ್ಲಿ ಪ್ರಮುಖವಾಗಿ ಸಂಸ್ಕಾರ ಭಾರತಿಯ ಅಖಿಲ ಭಾರತ ಪ್ರಧಾನ ಕಾರ್ಯದರ್ಶಿ ಅಮೀರ್ ಚಂದ್, ಕನ್ನಡ ನಿಘಂಟು ತಜ್ಞ ಜಿ.ವೆಂಕಟಸುಬ್ಬಯ್ಯ, ಸ್ವಾತಂತ್ರ್ಯ ಹೋರಾಟಗಾರ ಮತ್ತು ಪತ್ರಕರ್ತ ಎಚ್.ಎಸ್.ದೊರೆಸ್ವಾಮಿ, ಕವಿ ಡಾ. ಎಚ್.ಸಿದ್ದಲಿಂಗಯ್ಯ, ಕಾಂಗ್ರೆಸ್‌ ಮುಖಂಡ ಆಸ್ಕರ್ ಫರ್ನಾಂಡಿಸ್, ಸ್ವಾಮಿ ಅಧ್ಯಾತ್ಮಾನಂದ, ಸ್ವಾಮಿ ಓಂಕಾರಾನಂದ, ಸ್ವಾಮಿ ಅರುಣಗಿರಿ, ಹಿರಿಯ ಪತ್ರಕರ್ತ ಶ್ಯಾಮ್ ಖೋಸ್ಲಾ, ದೈನಿಕ್ ಜಾಗರಣ್ ಮಾಲೀಕ ಯೋಗೇಂದ್ರ ಮೋಹನ್ ಗುಪ್ತಾ, ಗೀತಾ ಪ್ರೆಸ್ ಗೋರಖಪುರ ಅಧ್ಯಕ್ಷ ರಾಧೇಶ್ಯಾಮ್ ಖೆಮ್ಕಾ, ಲೇಖಕರು ನರೇಂದ್ರ ಕೊಹ್ಲಿ, ರಾಜೇಶ್ ಸತವ್, ರಾಜ್ಯಸಭಾ ಸದಸ್ಯ ಸೋಲಿ ಸೊರಾಬ್ಜಿ, ಮಾಜಿ ರಾಜ್ಯಪಾಲ ಜಗಮೋಹನ್, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್, ಪತ್ರಕರ್ತ ರೋಹಿತ್ ಸರ್ದಾನ,  ಚಿಪ್ಕೋ ಚಳವಳಿಯ ಸುಂದರ್ ಲಾಲ್ ಬಹುಗುಣ, ಅಖಾಡಾ ಪರಿಷತ್ತಿನ ಅಧ್ಯಕ್ಷ ಮಹಂತ್ ನರೇಂದ್ರ ಗಿರಿ ಮಹಾರಾಜ್, ಹಿಮಾಚಲ ಪ್ರದೇಶದ ಮಾಜಿ ಮುಖ್ಯಮಂತ್ರಿ ವೀರಭದ್ರ ಸಿಂಗ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಸಭೆಯಲ್ಲಿ ಸಂಘದ ಕಾರ್ಯದ ಪ್ರಸ್ತುತ ಸ್ಥಿತಿಗತಿ, ಕಾರ್ಯ ವಿಸ್ತಾರ ಹಾಗೂ ಕಾರ್ಯಕರ್ತರ ವಿಕಾಸದ ಯೋಜನೆಗಳ ಕುರಿತು ಚರ್ಚೆ ನಡೆಯಿತು. ಬಾಂಗ್ಲಾದೇಶದಲ್ಲಿ ಇತ್ತೀಚಿಗೆ ನಡೆದ ಹಿಂದೂಗಳ ಮೇಲಿನ ಹಿಂಸಾಚಾರದ ಬಗ್ಗೆ ನಿರ್ಣಯವನ್ನು ಅಂಗೀಕರಿಸುವ ಕುರಿತು ಚರ್ಚೆ ನಡೆಯಿತು.

ದೇಶದ ಎಲ್ಲಾ ಪ್ರದೇಶಗಳಿಂದ ಬಂದ ಸಂಘದ ಸುಮಾರು 350 ಕಾರ್ಯಕರ್ತರು ಈ ಬೈಠಕ್‌ನಲ್ಲಿ ಪಾಲ್ಗೊಂಡಿದ್ದಾರೆ. ಅ. 30ರವರೆಗೆ ಸಭೆ ನಡೆಯಲಿದೆ.

ಸಭೆಯಲ್ಲಿ ವಿಐಪಿ ಹಾಗೂ ಝೆಡ್ ಪ್ಲಸ್ ಭದ್ರತೆಯನ್ನು ಹೊಂದಿರುವ ಅಧಿಕಾರಿಗಳು ಭಾಗವಹಿಸುತ್ತಿರುವ ಹಿನ್ನೆಲೆಯಲ್ಲಿ ಕೆಎಸ್ಆರ್'ಪಿ ಸಿಬ್ಬಂದಿಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ. ಭದ್ರತಾ ಸಿಬ್ಬಂದಿಗಳು ಬೆಳಿಗ್ಗೆ, ಮಧ್ಯಾಹ್ನ, ರಾತ್ರಿಯಂತೆ ಮೂರು ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com