ದೇವರ ಚಿತ್ರಗಳಿರುವ ಪಟಾಕಿ ಮಾರಾಟ, ಬಳಕೆಗೆ ವಿಹೆಚ್'ಪಿ ವಿರೋಧ

ದೇವರ ಹೆಸರಿರುವ ಹಾಗೂ ದೇವಲ ಭಾವಚಿತ್ರಗಳಿರುವ ಪಟಾಕಿಗಳ ಮಾರಾಟ ಮಾಡದಂತೆ ಹಾಗೂ ಸಾರ್ವಜನಿಕರೂ ಕೂಡ ಅವುಗಳನ್ನು ಸಿಡಿಸದಂತೆ ವಿಶ್ವ ಹಿಂದೂ ಪರಿಷತ್ ಮನವಿ ಮಾಡಿಕೊಂಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮೈಸೂರು: ದೇವರ ಹೆಸರಿರುವ ಹಾಗೂ ದೇವಲ ಭಾವಚಿತ್ರಗಳಿರುವ ಪಟಾಕಿಗಳ ಮಾರಾಟ ಮಾಡದಂತೆ ಹಾಗೂ ಸಾರ್ವಜನಿಕರೂ ಕೂಡ ಅವುಗಳನ್ನು ಸಿಡಿಸದಂತೆ ವಿಶ್ವ ಹಿಂದೂ ಪರಿಷತ್ ಮನವಿ ಮಾಡಿಕೊಂಡಿದೆ.

ವಿಶ್ವ ಹಿಂದೂ ಪರಿಷತ್'ನ ಜಿಲ್ಲಾಧ್ಯಕ್ಷ ಬಿ.ಎಸ್ ಪ್ರಶಾಂತ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದು, ಪಟಾಕಿಗಳ ಮೇಲೆ ದೇವರ ಹೆಸರು ಹಾಗೂ ದೇವರ ಭಾವಚಿತ್ರ ಬಳಕೆ ಮಾಡುತ್ತಿರುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

ದೀಪಾವಳಿ ಬೆಳಕಿನ ಹಬ್ಬ, ಸಡಗರಗಳಿಂದ ಆಚರಿಸುವ ಹಬ್ಬವಾಗಿದೆ. ಈ ಹಬ್ಬದಲ್ಲಿ ಲಕ್ಷ್ಮೀ ಪೂಜೆ ಹಾಗೂ ಗೋವು ಪೂಜೆ ಮಾಡುವುದು ಅನಾದಿ ಕಾಲದಿಂದಲೂ ನಡೆದುಬಂದಿರುವ ಪ್ರತೀತಿಯಾಗಿದೆ. ದೀಪ ಹಚ್ಚುವುದರ ಜೊತೆಗೆ ಪಟಾಕಿ ಸಿಡಿಸುವುದು ಕೂಡ ದೀಪಾವಳಿಯ ಪ್ರಮುಖ ಭಾಗ.

ದೀಪಾವಳಿಯಂದು ಲಕ್ಷ್ಮೀಯನ್ನು ಪೂಜಿಸುವ ನಾವು ಅದೇ ದೇವರ ಹೆಸರಿನಲ್ಲಿ ಪಟಾಕಿಗಳನ್ನು ಸಿಡಿಸಿ ಅದನ್ನು ಕಸವನ್ನಾಗಿ ಮಾಡಿ ಎಸೆಯುತ್ತೇವೆ . ಹೀಗೆ ವಿವಿಧ ಹಿಂದೂ ದೇವರುಗಳ ಹೆಸರಿನಲ್ಲಿ ಪಟಾಕಿಗಳಿವೆ. ದೇವರ ಚಿತ್ರವನ್ನು ಪಟಾಕಿ ಮೇಲೆ ಹಾಕಿ ಸಿಡಿಸಲಾಗುತ್ತದೆ. ದೇವರ ಚಿತ್ರ ಛಿದ್ರವಾಗಿ ಕಸವಾಗಿರುತ್ತದೆ. ಮಾರನೆಯ ದಿನ ನಾವು ಅದನ್ನೇ ತುಳಿಯುತ್ತೇವೆ, ಗುಡಿಸುತ್ತೇವೆ, ಕಸದೊಂದಿಗೆ ವಿಲೇವಾರಿ ಮಾಡುತ್ತೇವೆ. ಇದು ವಿರೋಧಾಭಾಸವಲ್ಲದೆ ಮತ್ತೇನು?... ಇದರಿಂದಾಗಿ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುತ್ತಿದೆ.

ಇನ್ನೇನು ಕೆಲವೇ ದಿನಗಳಲ್ಲಿ ದೀಪಾವಳಿ ಬರಲಿದೆ ಎಲ್ಲರೂ ದೀಪ ಹಚ್ಚಿ, ಪಟಾಕಿ ಸಿಡಿಸಿ ಸಂಭ್ರಮಿಸಿ. ಆದರೆ, ಪಟಾಕಿ ಮಾರಾಟಗಾರರು ದೇವರ ಹೆಸರಿನ ದೇವರ ಚಿತ್ರಗಳಿರುವ ಪಟಾಕಿಗಳನ್ನು ಮಾರಾಟ ಮಾಡಬಾರದು ಹಾಗೂ ಸಾರ್ವಜನಿಕರು ದೇವರ ಹೆಸರಿರುವ ಪಟಾಕಿಗಳನ್ನು ಕೊಂಡು ಸಿಡಿಸಬಾರದು ಎಂದು ಮನವಿ ಮಾಡಿಕೊಂಡಿದ್ದಾರೆ.

ಇದರಿಂದಾಗಿ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುತ್ತದೆ ಎಂಬುದನ್ನು ಅರಿತು ಎಲ್ಲರೂ ದೇವರ ಹೆಸರಿರುವ ಪಟಾಕಿಗಳ ಬಳಕೆಯನ್ನು ತ್ಯಜಿಸಲಿ ಸಾಮಾನ್ಯ ಪಟಾಕಿಗಳನ್ನು ಮಾತ್ರ ಸಿಡಿಸಿ ಸಂಭ್ರಮಿಸಲಿ ಎಂಬುದು ನಮ್ಮ ಆಶಯ. ನಮ್ಮೆಲ್ಲರಿಗೂ ತಿಳಿದಿರುವಂತೆ ನಮ್ಮ ನೆರೆಯ ಚೀನಾ ದೇಶ ನಮ್ಮ ವೈರಿ ರಾಷ್ಟ್ರ ಪಾಕಿಸ್ತಾನದೊಂದಿಗೆ ಸೇರಿ ಭಾರತದ ವಿರುದ್ಧ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸುತ್ತಿದೆ ಆದ್ದರಿಂದ ನಾವು ಚೀನಾ ಪಟಾಕಿಗಳನ್ನು ನಿಷೇಧಿಸಬೇಕು.

ಚೀನಾ ಪಟಾಕಿಗಳನ್ನು ಕೊಂಡರೆ ಸ್ವತಃ ನಾವೇ ಅವರ ಭಯೋತ್ಪಾದಕ ಚಟುವಟಿಕೆಗಳಿಗೆ ಆರ್ಥಿಕ ಸಹಾಯ ಮಾಡಿದಂತಾಗುತ್ತದೆ. ಯಾರೂ ಚೀನಾ ಪಟಾಕಿ ಕೊಳ್ಳಬೇಡಿ. ಭಾರತದ ಪಟಾಕಿಗಳಿಗೆ ಆದ್ಯತೆ ನೀಡಿ. ಬಲಿಪಾಡ್ಯಮಿ ದಿನದಂದು ಸಂಜೆ ದೇವಸ್ಥಾನಗಳಲ್ಲಿ ಗೋಪೂಜೆ ಮಾಡಬೇಕೆಂದು ಸರ್ಕಾರ ಮಾಡಿರುವ ಆದೇಶವನ್ನು ನಾವು ಸ್ವಾಗತಿಸುತ್ತೇವೆ. ಗೋವು ನಮ್ಮ ಸಂಸ್ಕೃತಿಯ ಸಂಕೇತಯ ಎಲ್ಲ ಬಾಂಧವರೂ ಆ ಶುಭದಿನದಂದು ಸಾಧ್ಯವಾದಷ್ಟು ನಾಟಿ ಗೋವನ್ನು ಪೂಜಿಸಬೇಕೆಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com