ಉಪ ಚುನಾವಣೆ: ಬೆಳಗ್ಗೆ 11 ಗಂಟೆ ವೇಳೆಗೆ ಹಾನಗಲ್ ಶೇ.24.31, ಸಿಂದಗಿ ಶೇ.32.47ರಷ್ಟು ಮತದಾನ

ಸಿಂದಗಿ ಮತ್ತು ಹಾನಗಲ್ ವಿಧಾನಸಭೆ ಕ್ಷೇತ್ರಗಳಿಗೆ ಉಪಚುನಾವಣೆಯ ಮತದಾನ ಪ್ರಕ್ರಿಯೆ ಮುಂದುವರೆದಿದ್ದು, ಈ ವರೆಗೂ ಹಾನಗಲ್ ನಲ್ಲಿ ಶೇ.24.31 ಹಾಗೂ ಸಿಂದಗಿಯಲ್ಲಿ ಶೇ.32.47ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.
ಹಾನಗಲ್ ನಲ್ಲಿ ಮತದಾನ ಪ್ರಕ್ರಿಯೆ ನಡೆಯುತ್ತಿರುವುದು.
ಹಾನಗಲ್ ನಲ್ಲಿ ಮತದಾನ ಪ್ರಕ್ರಿಯೆ ನಡೆಯುತ್ತಿರುವುದು.

ಬೆಂಗಳೂರು: ಸಿಂದಗಿ ಮತ್ತು ಹಾನಗಲ್ ವಿಧಾನಸಭೆ ಕ್ಷೇತ್ರಗಳಿಗೆ ಉಪಚುನಾವಣೆಯ ಮತದಾನ ಪ್ರಕ್ರಿಯೆ ಮುಂದುವರೆದಿದ್ದು, ಈ ವರೆಗೂ ಹಾನಗಲ್ ನಲ್ಲಿ ಶೇ.24.31 ಹಾಗೂ ಸಿಂದಗಿಯಲ್ಲಿ ಶೇ.32.47ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.

ಇಂದು ಬೆಳಿಗ್ಗೆ 7 ಗಂಟೆಯಿಂದಲೇ ಎರಡು ಕ್ಷೇತ್ರಗಳಲ್ಲಿ ಮತದಾನ ಪ್ರಕ್ರಿಯೆ ಆರಂಭಗೊಂಡಿದ್ದು, ಸಂಜೆ 5 ಗಂಟೆಯವರೆಗೆ ನಡೆಯಲಿದೆ. ಮತದಾನ ಶಾಂತಿಯುತವಾಗಿ ಆರಂಭಗೊಂಡಿದ್ದು, ಮಂದಗತಿಯಲ್ಲಿ ಮತದಾನ ಪ್ರಕ್ರಿಯೆ ಮುಂದುವರೆಯುತ್ತಿದೆ.

ಇಂದು ಬೆಳಿಗ್ಗೆ ಮತದಾನ ಪ್ರಕ್ರಿಯೆ ಆರಂಭವಾಗುತ್ತಿದ್ತಂದೆಯೇ ರಾಜಕೀಯ ಪಕ್ಷಗಳ ಕಾರ್ಯಕರ್ತರು ಮತಗಟ್ಟೆಗಳ ಬಳಿ ಬಂದು ಮತಯಂತ್ರಗಳಿಗೆ ಪೂಜೆ ಸಲ್ಲಿಸಿದರು.

ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್ ಮಾನೆ ಹಾನಗಲ್ ಪಟ್ಟಣದ ಪದವಿ ಪೂರ್ವ ಕಾಲೇಜಿನಲ್ಲಿರುವ ಮತಗಟ್ಟೆ 89ರಲ್ಲಿ ಮತದಾನ ಮಾಡಿದರು. ಪತ್ನಿ ಉಷಾ ಜೊತೆ ಆಗಮಿಸಿ ಶ್ರೀನಿವಾಸ ಮಾನೆ ತಮ್ಮ ಹಕ್ಕು ಚಲಾಯಿಸಿದರು. ಜೆಡಿಎಸ್ ಅಭ್ಯರ್ಥಿ ನಿಯಾಜ್ ಶೇಖ್ ತಮ್ಮ ಸಂಗಡಿಗರ ಜೊತೆ ಆಗಮಿಸಿ ಮತದಾನ ಮಾಡಿದರು.

ಬಿಜೆಪಿ ಅಭ್ಯರ್ಥಿ ಶಿವರಾಜ ಸಜ್ಜನರ್, ಮತಗಟ್ಟಿಗಳಿಗೆ ತೆರಳಿ ಮತದಾನ ಮಾಡುವಂತೆ ಮತದಾರರಲ್ಲಿ ಮನವಿ ಮಾಡಿದರು. ಬೆಳಗ್ಗೆ 9 ಗಂಟೆಯವರೆಗೆ ಕ್ಷೇತ್ರದಲ್ಲಿ ಶೇ.16.13ರಷ್ಟು ವಿಶೇಷಚೇತನರು ಮತ ಚಲಾಯಿಸಿದ್ದಾರೆ. 3665 ವಿಶೇಷಚೇತನ ಮತದಾರರಿಗೆ ಅನುಕೂಲವಾಗುವಂತೆ ಎಲ್ಲಾ 263 ಮತಗಟ್ಟೆಗಳಲ್ಲಿ ಗಾಲಿಕುರ್ಚಿಗಳನ್ನು ನಿಯೋಜಿಸಲಾಗಿದೆ.

ಕ್ಷೇತ್ರದ ಮೂರು ಮತಕೇಂದ್ರಗಳಲ್ಲಿ ಮತಯಂತ್ರ ಕೈಕೊಟ್ಟಿದ್ದರಿಂದ ಮತದಾನ ವಿಳಂಬವಾಗಿ ಆರಂಭವಾಯಿತು. ಕ್ಷೇತ್ರ ವ್ಯಾಪ್ತಿಯಲ್ಲಿ 239 ಮೂಲ ಹಾಗೂ 24 ಹೆಚ್ಚುವರಿ ಸೇರಿದಂತೆ ಒಟ್ಟು 263 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

ಬೆಳಗ್ಗೆ ಮೂರು ಬೂತ್ ಗಳಲ್ಲಿ ವಿದ್ಯುನ್ಮಾನ ಮತಯಂತ್ರಗಳಲ್ಲಿ ತಾಂತ್ರಿಕ ದೋಷ ಕಂಡುಬಂದಿತ್ತು. ಸೆಕ್ಟರ್ 1ರ ಬೂತ್ ಸಂಖ್ಯೆ 8, ಸೆಕ್ಟರ್ 28ರ ಬೂತ್ ಸಂಖ್ಯೆ 211 ಹಾಗೂ ಹನುಮಸಾಗರ ಗ್ರಾಮದಲ್ಲೂ ಮತಯಂತ್ರದಲ್ಲಿ ಸಮಸ್ಯೆ ಕಾಣಿಸಿಕೊಂಡಿತ್ತು.

ಸಿ.ಎಂ. ಉದಾಸಿ ನಿಧನದಿಂದ ತೆರವಾಗಿರುವ ಹಾನಗಲ್ ಮತ್ತು ಎಂ.ಸಿ. ಮನಗೂಳಿ ನಿಧನದಿಂದ ತೆರವಾದ ಸಿಂಧಗಿ ವಿಧಾನಸಭಾ ಕ್ಷೇತ್ರಗಳಿಗೆ ಇಂದು ಉಪಚುನಾವಣೆ ನಡೆಯುತ್ತಿದೆ.

ಸಿಂದಗಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ರಮೇಶ್ ಭೂಸನೂರು, ಕಾಂಗ್ರೆಸ್‌ನಿಂದ ಅಶೋಕ್. ಎಂ. ಮನಗೂಳಿ, ಜೆಡಿಎಸ್‌ನಿಂದ ನಾಜಿಯಾ ಅಂಗಡಿ ಸೇರಿದಂತೆ 6 ಅಭ್ಯರ್ಥಿಗಳು ಕಣದಲ್ಲಿ ಇದ್ದಾರೆ. ಸಿಂದಗಿ ಕ್ಷೇತ್ರದಲ್ಲಿ ಒಟ್ಟು 2,34,584 ಮತದಾರರು ಮತ ಚಲಾಯಿಸಲಿದ್ದು, ಈ ಪೈಕಿ 1,20,844 ಪುರುಷರು, 1,13,561 ಮಹಿಳೆಯರು ಹಾಗೂ 32 ಇತರೆ ಮತದಾರರು ಮತ ಚಲಾಯಿಸಲಿದ್ದಾರೆ.

ಹಾನಗಲ್ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಶಿವರಾಜ ಸಜ್ಜನರ, ಕಾಂಗ್ರೆಸ್‌ನಿಂದ ಶ್ರೀನಿವಾಸ ಮಾನೆ, ಜೆಡಿಎಸ್‌ನಿಂದ ನಿಯಾಜ್ ಶೇಖ್ ಸೇರಿದಂತೆ 13 ಅಭ್ಯರ್ಥಿಗಳು ಕಣದಲ್ಲಿ ಇದ್ದಾರೆ. ಹಾನಗಲ್ ಕ್ಷೇತ್ರದಲ್ಲಿ ಒಟ್ಟು 2,04,481 ಮತದಾರರು ಮತ ಚಲಾಯಿಸಲಿದ್ದು, ಈ ಪೈಕಿ 1,05,525 ಪುರುಷರು, 98,953 ಮಹಿಳೆಯರು ಹಾಗೂ 3 ಇತರೆ ಮತದಾರರು ಮತ ಚಲಾಯಿಸಲಿದ್ದಾರೆ.

ಜಿಲ್ಲಾಡಳಿತದ ಪ್ರಕಾರ ಹಾನಗಲ್ ನ 263 ಮತಗಟ್ಟೆಗಳ ಪೈಕಿ 33 ಸೂಕ್ಷ್ಮ ಹಾಗೂ ಎರಡು ಅತಿಸೂಕ್ಷ್ಮ ಮತಗಟ್ಟೆಗಳಿವೆ. ಚುನಾವಣಾ ಕರ್ತವ್ಯಕ್ಕೆ ಒಟ್ಟು 1155 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಶಾಂತಿಯುತವಾಗಿ ಚುನಾವಣೆ ನಡೆಸಲು ಹಾವೇರಿ ಜಿಲ್ಲಾಡಳಿತ ನಾಲ್ವರು ಡಿವೈಎಸ್ಪಿ, 11 ಸಿಪಿಐ, 29 ಪಿಎಸ್ಐ, 85 ಎಎಸ್ಐ ಸೇರಿದಂತೆ 610 ಪೊಲೀಸರನ್ನು ಭದ್ರತೆಗೆ ನಿಯೋಜಿಸಿದೆ. ಅಲ್ಲದೆ, ಸಿಆರ್‌ಪಿ, ಸಿಐಎಸ್‌ಎಫ್, ಕೆಎಸ್‌ಆರ್‌ಪಿ ಮತ್ತು ಅರೆಸೇನಾ ಪಡೆಗಳ ತಂಡ ಕೂಡ ಭದ್ರತೆ ನೀಡುತ್ತಿದೆ ಎಎಂದು ಮಾಹಿತಿ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com