ಬೆಂಗಳೂರು: ವಿದ್ಯಾರ್ಥಿಗೆ ಕೊರೋನಾ ಸೋಂಕು, ಶಾಲೆ ಸೀಲ್ ಡೌನ್
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಶಾಲೆಗಳು ಪೂರ್ಣ ಪ್ರಮಾಣದಲ್ಲಿ ಆರಂಭವಾದ ಬೆನ್ನಲ್ಲೇ ಪುನಃ ಮಕ್ಕಳಲ್ಲಿ ಕೋವಿಡ್ ಸೋಂಕು ವಕ್ಕರಿಸಿದ್ದು, ಖಾಸಗಿ ಶಾಲೆವೊಂದನ್ನು ಸೀಲ್‌ಡೌನ್ ಮಾಡಲಾಗಿದೆ.
Published: 30th October 2021 12:21 PM | Last Updated: 30th October 2021 07:55 PM | A+A A-

ಸಂಗ್ರಹ ಚಿತ್ರ
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಶಾಲೆಗಳು ಪೂರ್ಣ ಪ್ರಮಾಣದಲ್ಲಿ ಆರಂಭವಾದ ಬೆನ್ನಲ್ಲೇ ಪುನಃ ಮಕ್ಕಳಲ್ಲಿ ಕೋವಿಡ್ ಸೋಂಕು ವಕ್ಕರಿಸಿದ್ದು, ಖಾಸಗಿ ಶಾಲೆವೊಂದನ್ನು ಸೀಲ್‌ಡೌನ್ ಮಾಡಲಾಗಿದೆ.
ನಗರದ ಬಸವನಗುಡಿಯಲ್ಲಿರುವ ಶಾಲೆಯೊಂದರಲ್ಲಿ 8ನೇ ತರಗತಿ ವಿದ್ಯಾರ್ಥಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ಇದೀಗ ಶಾಲೆಯನ್ನು ಸೀಲ್ ಡೌನ್ ಮಾಡಲಾಗಿದೆ ಎಂದು ತಿಳಿದುಬಂದಿದೆ.
ವಿದ್ಯಾರ್ಥಿಗೆ ಸೋಂಕು ತಗುಲಿರುವ ಕುರಿತು ಮಾಹಿತಿ ನೀಡಿರುವ ಶಾಲಾ ಆಡಳಿತ ಮಂಡಳಿಯು, ವಿದ್ಯಾರ್ಥಿಗೆ ಶಾಲೆಯಲ್ಲಿ ಸೋಂಕು ತಗುಲಿಲ್ಲ. ಮನೆಯಲ್ಲಿಯೇ ಸೋಂಕು ತಗುಲಿದೆ ಎಂದು ಹೇಳಿದ್ದಾರೆ.
ವಿದ್ಯಾರ್ಥಿಯ ಅಜ್ಜಿಗೆ ಸೋಮವಾರ ಕೋವಿಡ್ ಪಾಸಿಟಿವ್ ಬಂದಿತ್ತು. ಇದಾದ ಬಳಿಕ ವಿದ್ಯಾರ್ಥಿಗೆ ಶಾಲೆಗೆ ಬರುವುದನ್ನು ನಿಲ್ಲಿಸಿದ್ದ. ಇದೀಗ ವಿದ್ಯಾರ್ಥಿ ವಿದ್ಯಾಭ್ಯಾಸ ಮಾಡುತ್ತಿದ್ದ ತರಗತಿಯನ್ನು ಸಂಪೂರ್ಣವಾಗಿ ಸ್ಯಾನಿಟೈಸ್ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಶಾಲೆಗಳಿಗೆ ಮಕ್ಕಳು ಬರುತ್ತಿರುವ ಸಂಖ್ಯೆ ಕಡಿಮೆಯೇ ಇದೆ. ಈಗಾಗಲೇ ಶಾಲೆಯ ಇತರೆ 15 ವಿದ್ಯಾರ್ಥಿಗಳ ಮಾದರಿಯನ್ನು ಸಂಗ್ರಹಿಸಲಾಗಿದ್ದು, ಪರೀಕ್ಷೆಗೆ ಕಳುಹಿಸಲಾಗಿದೆ. ವೈದ್ಯಕೀಯ ವರದಿಗಾಗಿ ಕಾಯಲಾಗುತ್ತಿದೆ. ಎರಡು ವರ್ಷಗಳ ಬಳಿಕ ಮಕ್ಕಳು ಶಾಲೆಗೆ ವಾಪಸ್ಸಾಗಿದ್ದಾರೆ. ಈ ಪ್ರಕರಣದಿಂದ ಮಕ್ಕಳಲ್ಲಿ ಆತಂಕ ಸೃಷ್ಟಿಸುವ ಕೆಲಸಗಳಾಗಬಾರದು ಎಂದು ಬಿಬಿಎಂಪಿ ಆರೋಗ್ಯ ಅಧಿಕಾರಿಗಳು ಹೇಳಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಮಡಿಕೇರಿಯ ಗಾಳಿಬೀಡು ಜವಾಹರ ನವೋದಯ ವಿದ್ಯಾಲಯದ 33 ವಿದ್ಯಾರ್ಥಿಗಳಿಗೆ ಸೋಂಕು ತಗುಲಿತ್ತು. ಘಟನೆ ಬಳಿಕ ಸಂಸ್ಥೆಯು ಸೆಪ್ಟೆಂಬರ್ 20 ರಂದು ಪುನರಾರಂಭವಾಗಿತ್ತು.