ಅಪ್ಪು ಕೊನೆಯ ಕ್ಷಣಗಳ ಬಗ್ಗೆ ವೈದ್ಯ ರಮಣ ರಾವ್ ಹೇಳಿದ್ದಿಷ್ಟು...ಅಷ್ಟಕ್ಕೂ ಆಗಿದ್ದಾದರೂ ಏನು?

ಪ್ರತೀದಿನ ವ್ಯಾಯಾಮ ಮಾಡುತ್ತಾ, ಆರೋಗ್ಯಕರ ಅಭ್ಯಾಸಗಳನ್ನು ಬೆಳೆಸಿಕೊಂಡಿದ್ದ ಸ್ಯಾಂಡಲ್ ವುಡ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಹಠಾತ್ ಸಾವನ್ನಪ್ಪಿದ್ದು, ಪುನೀತ್ ಅವರ ಸಾವು ಸಾಕಷ್ಟು ಜನರನ್ನು ದಿಗ್ಭ್ರಮೆಗೊಳಿಸಿದೆ.
ಪುನೀತ್ ರಾಜ್ ಕುಮಾರ್
ಪುನೀತ್ ರಾಜ್ ಕುಮಾರ್

ಬೆಂಗಳೂರು: ಪ್ರತೀದಿನ ವ್ಯಾಯಾಮ ಮಾಡುತ್ತಾ, ಆರೋಗ್ಯಕರ ಅಭ್ಯಾಸಗಳನ್ನು ಬೆಳೆಸಿಕೊಂಡಿದ್ದ ಸ್ಯಾಂಡಲ್ ವುಡ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಹಠಾತ್ ಸಾವನ್ನಪ್ಪಿದ್ದು, ಪುನೀತ್ ಅವರ ಸಾವು ಸಾಕಷ್ಟು ಜನರನ್ನು ದಿಗ್ಭ್ರಮೆಗೊಳಿಸಿದೆ.

ನಿಜಕ್ಕೂ ಪುನೀತ್ ಅವರು ಸಾವನ್ನಪ್ಪುವ ದಿನ ಆಗಿದ್ದಾದರೂ ಏನು? ತಮ್ಮ ಸದಾಶಿವನಗರದ ನಿವಾಸದಿಂದ ಡಾ.ರಮಣ ರಾವ್ ಕ್ಲಿನಿಕ್‌ಗೆ ಬಂದ ಪುನೀತ್ ರಾಜ್‌ಕುಮಾರ್‌ಗೆ ಏನಾಗಿತ್ತು? ಹಠಾತ್ ಸಾವು ಸಂಭವಿಸಿದ್ದು ಹೇಗೆ? ಅವರ ಅಂತಿಮ ಕ್ಷಣಗಳು ಹೇಗಿತ್ತು? ಎಂಬುದರ ಬಗ್ಗೆ ಡಾ.ರಮಣ ರಾವ್ ಅವರು ವಿವರಿಸಿದ್ದಾರೆ.

ಡಾ.ರಮಣ್ ರಾವ್ ಅವರು ರಾಜ್ ಕುಮಾರ್ ಅವರ ಕುಟುಂಬದ ವೈದ್ಯರಾಗಿದ್ದಾರೆ. ಶುಕ್ರವಾರ ಬೆಳಿಗ್ಗೆ 11.30ರ ಸುಮಾರಿಗೆ ಅಪ್ಪು ಅವರ ಪತ್ನಿ ಅಶ್ವಿನಿ ಅವರೊಂದಿಗೆ ಕ್ಲಿನಿಕ್'ಗೆ ಬಂದಿದ್ದರು. 2 ಗಂಟೆಗಳ ಕಾಲ ವ್ಯಾಯಾಮ ಮಾಡಿದ ಬಳಿಕ ಪ್ರತೀನಿತ್ಯದಂತೆ ಇಂದೂ ಕೂಡ ನಿಶ್ಯಕ್ತಿ ಕಾಣಿಸಿಕೊಳ್ಳುತ್ತಿದೆ ಎಂದು ಹೇಳಿದ್ದರು. ವರ್ಕೌಟ್ ಮಾಡಿದ ಬಳಿಕ ಕಿಕ್ ಬಾಕ್ಸಿಂಗ್ ಮಾಡಿದ್ದೆ ಎಂದು ಹೇಳಿದ್ದರು. ಈ ವೇಳೆ ಅವರ ರಕ್ತದೊತ್ತಡ ಹಾಗೂ ಹೃದಯ, ಶ್ವಾಸಕೋಶವನ್ನು ಪರಿಶೀಲಿಸಿದ್ದೆ. ಎಲ್ಲವೂ ನಾರ್ಮಲ್ ಆಗಿಯೇ ಇತ್ತು . ಆದರೆ, ಬೆವರುತ್ತಿದ್ದದ್ದು ಕಂಡು ಬಂದಿತ್ತು. ಬಳಿಕ ಇಸಿಜಿ ಮಾಡಿಸುವಂತೆ ಹೇಳಿದ್ದೆ. ಈ ವೇಳೆ ಪುನೀತ್ ವರ್ಕೌಟ್ ಮಾಡಿದ್ದರಿಂದ ಬೆವರುತ್ತಿದ್ದೇನೆಂದು ಹೇಳಿದ್ದರು. ಆದರೂ ಅವರಿಗೆ ಇಸಿಜಿ ಮಾಡಲಾಗಿತ್ತು. ಕೆಲ ಸಮಸ್ಯೆಗಳಿರುವುದು ಕಂಡು ಬಂದಿತ್ತು. ಹೃದಯಾಘಾತವಾಗಿರಲಿಲ್ಲ. ಸಮಸ್ಯೆಗಳು ಕಂಡು ಬರುತ್ತಿದ್ದರಿಂದ ವಿಕ್ರಮ್ ಆಸ್ಪತ್ರೆಗೆ ದಾಖಲಿಸುವಂತೆ ಸಲಹೆ ನೀಡಿದ್ದೆ, ಆಸ್ಪತ್ರೆಯ ವೈದ್ಯರಿಗೆ ಕರೆ ಮಾಡಿ, ಮಾಹಿತಿಯನ್ನೂ ನೀಡಿದ್ದೆ. ಆಸ್ಪತ್ರೆಗೆ ನಾನೂ ಹೋಗಿದ್ದೆ.

ಈ ವೇಳೆ ಅಪ್ಪುಗೆ ಹೃದಯ ಸ್ತಂಭನ ಸಂಭವಿಸಿ ಸಾವನ್ನಪ್ಪಿದ್ದರು. ಇದು ಹಠಾತ್ ಸಾವಾಗಿದೆ. ಅಪ್ಪುಗೆ ಯಾವುದೇ ರೀತಿಯ ರಕ್ತದೊತ್ತಡವಾಗಲೀ, ಮಧುಮೇಹ ಅಥವಾ ಹೃದಯ ಸಂಬಂಧಿ ಸಮಸ್ಯೆಗಳಿರಲಿಲ್ಲ. ಕುಟುಂಬದ ಇತರೆ ಸದಸ್ಯರಿಗೆ ಹೋಲಿಕೆ ಮಾಡಿದರೆ, ಅತ್ಯಂತ ಫಿಟ್ ಆಗಿದ್ದ ವ್ಯಕ್ತಿ ಅವರು. ಫಿಟ್ನೆಸ್'ಗೆ ಮಾದರಿ ವ್ಯಕ್ತಿಯಾಗಿದ್ದರು. ನನ್ನ ಬಳಿ ಬರುವ ಸಾಕಷ್ಟು ರೋಗಿಗಳಿಗೆ ಅವರ ಉದಾಹರಣೆ ನೀಡುತ್ತಿದ್ದೆ. 10 ದಿನಗಳ ಹಿಂದೆ ಸಣ್ಣ ಸೈನಸ್ ಸಮಸ್ಯೆಗಳಿಂದಾಗಿ ನನ್ನನ್ನು ಭೇಟಿ ಮಾಡಿದ್ದರು. ನಂತರದ ದಿನ ಆರೋಗ್ಯವಾಗಿಯೇ ಇದ್ದರು ಎಂದು ಹೇಳಿದ್ದಾರೆ.

ಅಪ್ಪು ಮತ್ತು ಅಶ್ವಿನಿ ಒಮ್ಮೆ ಕ್ಲಿನಿಕ್ ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ನಾವು ಅವರಿಗೆ ಪ್ರತ್ಯೇಕವಾಗಿ ಊಟವನ್ನು ನೀಡಿದ್ದೆವು. ಆದರೆ ಇಬ್ಬರೂ ಅದನ್ನು ನಿರಾಕರಿಸಿ ರೋಗಿಗಳೊಂದಿಗೆ ಕುಳಿತುಕೊಂಡು ಸಾಂಬಾರ್-ಅನ್ನ ಊಟ ಮಾಡಿದ್ದರು. ಅಪ್ಪುವಿನಲ್ಲಿ ವಿನಯತೆ ಸಾಕಷ್ಟು ತುಂಬಿತ್ತು. ಅವರು ಇನ್ನಿಲ್ಲ ಎಂಬುದನ್ನೇ ಜೀರ್ಣಿಸಿಕೊಳ್ಳಲಾಗುತ್ತಿಲ್ಲ. ನನ್ನ ಮಗನನ್ನು ಕಳೆದುಕೊಂಡಷ್ಟು ನೋವಾಗುತ್ತಿದೆ ಎಂದು ಡಾ.ರಮಣ್ ರಾವ್ ಅವರು ಕಣ್ಣೀರಿಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com