ಉಪಚುನಾವಣೆ: ಸಿಂದಗಿಯಲ್ಲಿ ಶೇ.69, ಹಾನಗಲ್ ಶೇ.83ರಷ್ಟು ಮತದಾನ

ಮಾಜಿ ಸಚಿವ, ಜೆಡಿಎಸ್ ಶಾಸಕ ಮನಗೂಳಿ ಅವರ ಅಕಾಲಿಕ ನಿಧನದಿಂದಾಗಿ ತೆರವಾಗಿದ್ದ ಸಿಂದಗಿ ಮತ್ತು ಬಿಜೆಪಿ ಶಾಸಕ ಸಿಎಂ ಉದಾಸಿ ನಿಧನದಿಂದ ತೆರವಾಗಿದ್ದ ಹಾನಗಲ್ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಮತದಾರರು ಶನಿವಾರ ಉತ್ಸಾಹದಿಂದ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಮಾಜಿ ಸಚಿವ, ಜೆಡಿಎಸ್ ಶಾಸಕ ಮನಗೂಳಿ ಅವರ ಅಕಾಲಿಕ ನಿಧನದಿಂದಾಗಿ ತೆರವಾಗಿದ್ದ ಸಿಂದಗಿ ಮತ್ತು ಬಿಜೆಪಿ ಶಾಸಕ ಸಿಎಂ ಉದಾಸಿ ನಿಧನದಿಂದ ತೆರವಾಗಿದ್ದ ಹಾನಗಲ್ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಮತದಾರರು ಶನಿವಾರ ಉತ್ಸಾಹದಿಂದ ತಮ್ಮ ಮತ ಹಕ್ಕು ಚಲಾಯಿಸಿದರು. ಒಂದೆರಡು ಸಣ್ಣಪುಟ್ಟ ಗೊಂದಲ, ವ್ಯಾತ್ಯಾಸ ಹೊರತುಪಡಿಸಿ ಮತದಾನ ಶಾಂತಿಯುತವಾಗಿ ನಡೆಯಿತು.

ಹಾನಗಲ್ ನಲ್ಲಿ ಶೇ.83.44 ಮತ್ತು ಸಿಂಗದಿಯಲ್ಲಿ ಶೇ.69.41ರಷ್ಟು ಮತದಾನವಾಗಿದೆ. ಎರಡೂ ಕ್ಷೇತ್ರಗಳ ಒಟ್ಟು 19 ಅಭ್ಯರ್ಥಿಗಳ ರಾಜಕೀಯ ಭವಿಷ್ಯ ಮತಪಟ್ಟಿಗೆಯಲ್ಲಿ ಭದ್ರವಾಗಿದ್ದು, ನ.2ರಂದು ಮತ ಎಣಿಕೆ ಕಾರ್ಯ ನಡೆಯಲಿದೆ.

ರಾಜ್ಯದ ಮುಖ್ಯಮಂತ್ರಿಗಳಾಗಿ ಬೊಮ್ಮಾಯಿ ಅಧಿಕಾರಕ್ಕೆ ಬಂದು 100 ದಿನಗಳು ಪೂರ್ಣಗೊಂಡಿದ್ದು, ಈಗಾಗಲೇ ಬಿಜೆಪಿ ಹೈಕಮಾಂಡ್ 2023ರ ರಾಜ್ಯ ವಿಧಾನಸಭಾ ಚುನಾವಣೆಗೆ ಬೊಮ್ಮಾಯಿಯವರೇ ನೇತೃತ್ವ ವಹಿಸಲಿದ್ದಾರೆಂದು ಘೋಷಿಸಿದೆ. ಹೀಗಾಗಿ ತವರು ಜಿಲ್ಲೆ ಹಾವೇರಿಯಲ್ಲಿರುವ ಹಾನಗಲ್ ಅನ್ನು ಉಳಿಸಿಕೊಳ್ಳುವುದು ಮಾತ್ರವಲ್ಲದೆ ಸಿಂದಗಿಯಲ್ಲಿಯೂ ಗೆಲುವು ಸಾಧಿಸಬೇಕಾದ ಅನಿವಾರ್ಯತೆ ಬೊಮ್ಮಾಯಿಯವರಿಗೆ ಎದುರಾಗಿದೆ.

2023ರ ರಾಜ್ಯ ವಿಧಾನಸಭಾ ಚುನಾವಣೆಗೆ ಹಾನಗಲ್ ಹಾಗೂ ಸಿಂದಗಿ ಉಪಚುನಾವಣೆಯ ಫಲಿತಾಂಶ ದಿಕ್ಸೂಚಿಯಾಗಲಿದೆ ಎಂದೇ ಹೇಳಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಾಳಯದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಸಾಕಷ್ಟು ಪ್ರಮುಖ ನಾಯಕರು ಎರಡೂ ಕ್ಷೇತ್ರಗಳಲ್ಲಿ ಪರಿಣಾಮಕಾರಿಯಾಗಿ ಪ್ರಚಾರ ನಡೆಸಿದ್ದರು. 2018 ರಲ್ಲಿ ಹಾನಗಲ್ ನಲ್ಲಿ ಆಗಿದ್ದ ಶೇ.84.4% ರಷ್ಟು ಹೆಚ್ಚಿನ ಮತದಾನವು ಬಿಜೆಪಿ ಅಭ್ಯರ್ಥಿ ದಿವಂಗತ ಸಿ ಎಂ ಉದಾಸಿಗೆ ಅವರ ಗೆಲುವಿಗೆ ಸಹಾಯ ಮಾಡಿತ್ತು. ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ವಿ ಮಾನೆ ಅವರನ್ನು 6,514 ಮತಗಳ ಅಂತರದಿಂದ ಸೋಲಿಸಿದ್ದರು.

ಈ ಬಾರಿಯ ಉಪಚುನಾವಣೆಯಲ್ಲಿ ಬಿಜೆಪಿ ಶಿವರಾಜ್ ಸಜ್ಜನರ್ ಮತ್ತು ಜೆಡಿಎಸ್ ನಿಯಾಜ್ ಶೇಖ್ ಅವರನ್ನು ಕಣಕ್ಕಿಳಿಸಿದೆ.

ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಭಾರೀ ಸ್ಪರ್ಧೆ ಏರ್ಪಟ್ಟಿದ್ದು, ಅಲ್ಪಸಂಖ್ಯಾತ ಸಮುದಾಯದ ಅಭ್ಯರ್ಥಿಯನ್ನು ಕಣಕ್ಕಿಳಿಸಿರುವುದು ಕಾಂಗ್ರೆಸ್'ಗೆ ತಲೆನೋವು ಹೆಚ್ಚಾಗುವಂತೆ ಮಾಡಿದೆ. ಅಲ್ಪಸಂಖ್ಯಾತರ ಮತಗಳು ವಿಭಜನೆಯಾಗುವ ಸಾಧ್ಯತೆಗಳಿದ್ದು, ಇದು ಬಿಜೆಪಿಗೆ ಸಹಾಯ ಮಾಡಬಹುದು ಎಂಬ ಚಿಂತೆ ಕಾಂಗ್ರೆಸ್'ಗೆ ಶುರುವಾಗಿದೆ.

ಕಾಂಗ್ರೆಸ್ ನಾಯಕರಿಗೆ ಪ್ರಚಾರಕ್ಕೆ ಪ್ರತಿಯಾಗಿ ಬಿಜೆಪಿಯ ನಾಯಕರೂ ಕೂಡ ಎರಡೂ ಕ್ಷೇತ್ರಗಳಲ್ಲಿ ಭರ್ಜರಿ ಪ್ರಚಾರ ನಡೆಸಿದ್ದರು. ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ, ಮುರುಗೇಶ್ ನಿರಾಣಿ, ಜೆಸಿ ಮಾಧುಸ್ವಾಮಿ, ಸಂಸದ ಶಿವಕುಮಾರ್ ಉದಾಸಿ ಸೇರಿದಂತೆ ಹಲವಾರು ನಾಯಕರು ಪ್ರಚಾರ ನಡೆಸಿದ್ದರು.

ಸಿಂದಗಿಯಲ್ಲಿ ಸಿಎಂ ಬೊಮ್ಮಾಯಿ, ಯಡಿಯೂರಪ್ಪ ಸಚಿವರಾದ ಶಶಿಕಲಾ ಜೊಲ್ಲೆ, ವಿ ಸೋಮಣ್ಣ ಮತ್ತು ಗೋವಿಂದ ಕಾರಜೋಳ ಸೇರಿದಂತೆ ಹಲವು ಸಚಿವರು ಬಿಜೆಪಿ ಅಭ್ಯರ್ಥಿ ರಮೇಶ್ ಭೂಸನೂರು ಪರವಾಗಿ ಪ್ರಚಾರ ನಡೆಸಿದ್ದರು.

ಈ ಕ್ಷೇತ್ರದಲ್ಲಿ ಕಾಂಗ್ರೆಸ್ ದಿವಂಗತ ಎಂ.ಸಿ.ಮನಗೂಳಿ ಅವರ ಪುತ್ರ ಅಶೋಕ್ ಮನಗೂಳಿ ಅವರನ್ನು ಕಣಕ್ಕಿಳಿಸಿದ್ದು, ಜೆಡಿಎಸ್ ನಿಂದ ನಾಜಿಯಾ ಅಂಗಡಿ ಅವರನ್ನು ಕಣಕ್ಕಿಳಿದಿದ್ದಾರೆ, ಅವರ ಪರ ಮಾಜಿ ಪ್ರಧಾನಿ ಹಾಗೂ ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡರು ಭರ್ಜರಿ ಪ್ರಚಾರ ನಡೆಸಿದ್ದಾರೆ. ನವೆಂಬರ್ 2 ರಂದು ಉಪಚುನಾವಣೆ ಫಲಿತಾಂಶ ಹೊರಬೀಳಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com