ಕೊನೆಗೂ ಎಚ್ಚರಿಕೆಗೆ ಮಣಿದ ಗದಗ ಜಿಲ್ಲೆಯ ದಾವಲ್ ಮಲಿಕ್ ಗ್ರಾಮಸ್ಥರು: ಕೊರೋನಾ ಲಸಿಕೆ ಹಾಕಿಸಿಕೊಂಡ ಮಂದಿ

ಜಿಲ್ಲೆಯ ದಾವಲ್ ಮಲಿಕ್ ಗ್ರಾಮದ ನಿವಾಸಿಗಳು ಕೊನೆಗೂ ಕೋವಿಡ್-19 ವಿರುದ್ಧ ಲಸಿಕೆ ಪಡೆದಿದ್ದಾರೆ.
ಕೋವಿಡ್ ಲಸಿಕೆ ಹಾಕಿಸಿಕೊಳ್ಳುತ್ತಿರುವ ಗ್ರಾಮಸ್ಥರು
ಕೋವಿಡ್ ಲಸಿಕೆ ಹಾಕಿಸಿಕೊಳ್ಳುತ್ತಿರುವ ಗ್ರಾಮಸ್ಥರು

ಗದಗ: ಜಿಲ್ಲೆಯ ದಾವಲ್ ಮಲಿಕ್ ಗ್ರಾಮದ ನಿವಾಸಿಗಳು ಕೊನೆಗೂ ಕೋವಿಡ್-19 ವಿರುದ್ಧ ಲಸಿಕೆ ಪಡೆದಿದ್ದಾರೆ. ಲಸಿಕೆ ಹಾಕಿಸಿಕೊಳ್ಳದಿದ್ದರೆ ಇದು ಸುರಕ್ಷಿತ ಸ್ಥಳವಲ್ಲ ಎಂದು ಘೋಷಿಸುತ್ತೇವೆ ಎಂಬುದಾಗಿ ಆರೋಗ್ಯ ಇಲಾಖೆಯ ಅಧಿಕಾರಿಗಳು ಎಚ್ಚರಿಕೆ ನೀಡಿದ ನಂತರ ಗ್ರಾಮಸ್ಥರು ಬೇರೆ ವಿಧಿಯಿಲ್ಲದೆ ಹೋಗಿ ಲಸಿಕೆ ಹಾಕಿಸಿಕೊಳ್ಳುತ್ತಿದ್ದಾರೆ. ಆರೋಗ್ಯಾಧಿಕಾರಿಗಳ ಎಚ್ಚರಿಕೆ ಫಲ ಕೊಟ್ಟಂತೆ ಕಂಡುಬರುತ್ತಿದ್ದು ನಿನ್ನೆ 90 ಗ್ರಾಮಸ್ಥರು ಆರೋಗ್ಯ ಕೇಂದ್ರಕ್ಕೆ ಹೋಗಿ ಲಸಿಕೆ ಹಾಕಿಸಿಕೊಂಡಿದ್ದಾರೆ.

ಜೂನ್ ಮೊದಲ ವಾರದಲ್ಲಿ ಆರೋಗ್ಯಾಧಿಕಾರಿಗಳು, ಆಶಾ ಕಾರ್ಯಕರ್ತರು, ತಾಲ್ಲೂಕು ಕಚೇರಿ ಅಧಿಕಾರಿಗಳು ಗ್ರಾಮದಲ್ಲಿ ಲಸಿಕಾ ಶಿಬಿರ ನಡೆಸಿದ್ದರು. ಆದರೆ ಗ್ರಾಮದ ಯಾವೊಬ್ಬರೂ ಲಸಿಕೆ ಹಾಕಿಸಿಕೊಳ್ಳಲು ಮುಂದೆ ಬಂದಿರಲಿಲ್ಲ. ಸಿಬ್ಬಂದಿ ಮನೆ ಮನೆಗೆ ಹೋಗಿ ಹಿರಿಯರಿಗೆ, ಮಹಿಳೆಯರಿಗೆ ಲಸಿಕೆ ಹಾಕಿಸಿಕೊಳ್ಳುವಂತೆ ಮನವೊಲಿಸಲು ಪ್ರಯತ್ನಿಸಿದ್ದರು. ಆದರೂ ಗ್ರಾಮಸ್ಥರು ಕೂತಲ್ಲಿಂದ ಅಲುಗಲಿಲ್ಲ, ನಾವು ಸುತಾರಾಂ ಲಸಿಕೆ ಹಾಕಿಸಿಕೊಳ್ಳುವುದೇ ಇಲ್ಲ ಎಂದು ಹಠ ಹಿಡಿದುಬಿಟ್ಟಿದ್ದರು.

ದಾವಲ್ ಮಲಿಕ್ ಎಂಬ ಸೂಫಿ ಸಂತನ ದರ್ಗಾ ಗ್ರಾಮದಲ್ಲಿದ್ದು ಆತ ಕೊರೋನಾದಿಂದ ತಮ್ಮನ್ನು ಕಾಪಾಡುತ್ತಾನೆ, ತಮಗೆ ಲಸಿಕೆಯ ಅವಶ್ಯಕತೆಯಿಲ್ಲ ಎಂಬುದು ಗ್ರಾಮಸ್ಥರ ವಾದವಾಗಿತ್ತು. ತಾಲ್ಲೂಕಿನ ಬೇರೆ ಗ್ರಾಮಗಳಲ್ಲಿ ಈಗಾಗಲೇ ಶೇಕಡಾ 70ರಷ್ಟು ಮಂದಿಗೆ ಲಸಿಕೆ ಹಾಕಲಾಗಿದೆ. ಈ ಗ್ರಾಮದ ಜನರು ಹಠ ಹಿಡಿಯುತ್ತಿದ್ದುದು ಕಂಡು ತಾಲ್ಲೂಕು ಅಧಿಕಾರಿಗಳಿಗೂ ಆತಂಕವಾಗಿತ್ತು. ಇವರನ್ನು ಹೇಗಪ್ಪಾ ಮನವೊಲಿಸುವುದು ಎಂಬ ಚಿಂತೆ ಹತ್ತಿತ್ತು. ಇದುವರೆಗೆ ಗ್ರಾಮದಲ್ಲಿ ಶೇಕಡಾ 4ರಷ್ಟು ಲಸಿಕೆಯಾಗಿದೆಯಷ್ಟೆ.

ಮೊನ್ನೆ ಆಗಸ್ಟ್ 25ರಂದು ಅಧಿಕಾರಿಗಳು ಮತ್ತೆ ಗ್ರಾಮಕ್ಕೆ ಭೇಟಿ ನೀಡಿ, ನೀವು ಲಸಿಕೆ ಹಾಕಿಸಿಕೊಳ್ಳದಿದ್ದರೆ ಈ ಗ್ರಾಮ ಸುರಕ್ಷಿತ ಪ್ರದೇಶವಲ್ಲ, ಇಲ್ಲಿಗೆ ಯಾರೂ ಬರಬೇಡಿ ಎಂದು ಬೋರ್ಡ್ ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿ ಹೋಗಿದ್ದರು. ದಾವಲ್ ಮಲಿಕ್ ನ ಭಕ್ತರನ್ನು ಕೂಡ ಗ್ರಾಮಕ್ಕೆ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದರು. ಯೋಚನೆ ಮಾಡಿ ಎಂದು ಅಧಿಕಾರಿಗಳು ಗ್ರಾಮಸ್ಥರಿಗೆ ವಾರದ ಸಮಯ ನೀಡಿದ್ದರು. ಕೊನೆಗೂ ಗ್ರಾಮಸ್ಥರು ತಮ್ಮ ಹಠ ಬಿಟ್ಟಿದ್ದು ಕಳೆದೆರಡು ದಿನಗಳಲ್ಲಿ 130 ಮಂದಿ ಕೊರೋನಾ ಲಸಿಕೆ ಪಡೆದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com