ಡಾ.ಕೆ.ಸುಧಾಕರ್
ಡಾ.ಕೆ.ಸುಧಾಕರ್

ಒಂದೇ ದಿನ 12 ಲಕ್ಷ ಕೋವಿಡ್ ಲಸಿಕೆ: ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್

ಮೊದಲ ಲಸಿಕಾ ಉತ್ಸವದ ದಿನ ಗುರಿಯನ್ನು ಮೀರಿ 12 ಲಕ್ಷ ಲಸಿಕೆ ಡೋಸ್ ನೀಡಲಾಗಿದೆ. ಈ ಮೂಲಕ ಇಡೀ ದೇಶದಲ್ಲೇ ಕರ್ನಾಟಕ ಮೊದಲ ಸ್ಥಾನದಲ್ಲಿತ್ತು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

ಬೆಂಗಳೂರು: ಮೊದಲ ಲಸಿಕಾ ಉತ್ಸವದ ದಿನ ಗುರಿಯನ್ನು ಮೀರಿ 12 ಲಕ್ಷ ಲಸಿಕೆ ಡೋಸ್ ನೀಡಲಾಗಿದೆ. ಈ ಮೂಲಕ ಇಡೀ ದೇಶದಲ್ಲೇ ಕರ್ನಾಟಕ ಮೊದಲ ಸ್ಥಾನದಲ್ಲಿತ್ತು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಬುಧವಾರದ ಲಸಿಕಾ ಉತ್ಸವದಲ್ಲಿ 10 ಲಕ್ಷ ಲಸಿಕೆ ನೀಡುವ ಗುರಿ ಇತ್ತು. ಆರೋಗ್ಯ ಇಲಾಖೆಯ ಅಧಿಕಾರಿಗಳು, ಜಿಲ್ಲಾಡಳಿತ ಪರಿಣಾಮಕಾರಿಯಾಗಿ ಕೆಲಸ ಮಾಡಿದ್ದಾರೆ. ಹಾಗೆಯೇ ಜನರು ಕೂಡ ಸ್ವಯಂಪ್ರೇರಿತರಾಗಿ ಬಂದು ಲಸಿಕೆ ಪಡೆದಿದ್ದಾರೆ. ಇದರಿಂದಾಗಿ ಗುರಿ ಮೀರಿ ಸಾಧನೆಯಾಗಿದ್ದು, ಒಂದೇ ದಿನ ಒಟ್ಟು 12,04,402 ಲಸಿಕೆ ನೀಡಲಾಗಿದೆ. ದೇಶದಲ್ಲಿ ನಿನ್ನೆ ಕರ್ನಾಟಕ ಮೊದಲ ಸ್ಥಾನದಲ್ಲಿತ್ತು. ಬಿಬಿಎಂಪಿ ವ್ಯಾಪ್ತಿಯಲ್ಲಿ 1,85,488 ಡೋಸ್ ನೀಡಲಾಗಿದೆ. ಬೆಳಗಾವಿ ಜಿಲ್ಲೆ ಮೊದಲ ಸ್ಥಾನದಲ್ಲಿದ್ದು, 99,973 ಡೋಸ್ ನೀಡಲಾಗಿದೆ. ಕೊಡಗು, ಗದಗ, ಚಾಮರಾಜನಗರ, ಯಾದಗಿರಿ ಜಿಲ್ಲೆಯಲ್ಲಿ ಅತಿ ಕಡಿಮೆಯಾಗಿದೆ. ಈ ಜಿಲ್ಲೆಗಳಲ್ಲಿ 20 ಸಾವಿರಕ್ಕಿಂತ ಕಡಿಮೆ ಇದೆ ಎಂದು ತಿಳಿಸಿದರು.

ಚಿಕ್ಕಬಳ್ಳಾಪುರದಲ್ಲಿ 50 ಸಾವಿರ, ಚಿಕ್ಕಮಗಳೂರಿನಲ್ಲಿ 44,000, ಮಂಡ್ಯದಲ್ಲಿ 72,000, ಮೈಸೂರಿನಲ್ಲಿ 51,000 ಹೀಗೆ ಲಸಿಕಾ ಉತ್ಸವದಿಂದ ವೇಗ ಬಂದಿದೆ. ದಿನಕ್ಕೆ 5 ಲಕ್ಷ ಲಸಿಕೆ ನೀಡುವ ಗುರಿ ಇದ್ದು, ಆಗಸ್ಟ್ ತಿಂಗಳಲ್ಲಿ 1.12 ಕೋಟಿ ಡೋಸ್ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಕೇರಳದಲ್ಲಿ ಇನ್ನೂ ಸೋಂಕು ಇದ್ದು, ಪ್ರಕರಣಗಳ ಸಂಖ್ಯೆ ಕಡಿಮೆಯಾಗಿಲ್ಲ. ಇದಕ್ಕಾಗಿ ಸಾಂಸ್ಥಿಕ ಕ್ವಾರಂಟೈನ್ ನಿಯಮ ತರಲಾಗಿದೆ. ನೀಟ್ ಪರೀಕ್ಷೆ ಸಮಯದಲ್ಲಿ ಇದು ಕಷ್ಟ ಎಂಬ ಅಭಿಪ್ರಾಯ ಬಂದಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಶಿಕ್ಷಣ ಸಂಸ್ಥೆಗಳೇ ಕ್ವಾರಂಟೈನ್ ವ್ಯವಸ್ಥೆ ಮಾಡಬೇಕೆಂದು ಸೂಚಿಸಲಾಗಿದೆ. ಕೈಗಾರಿಕೆ, ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗ ಮಾಡುವವರಿಗೆ ಕ್ವಾರಂಟೈನ್ ಗೆ ಅದೇ ಸಂಸ್ಥೆ ವ್ಯವಸ್ಥೆ ಮಾಡಬೇಕು. ಸದ್ಯಕ್ಕೆ ಜನರು ಮನೆಯಲ್ಲೇ ಕ್ವಾರಂಟೈನ್ ಆಗಲು ಅವಕಾಶವಿದೆ. ಪ್ರತಿ ದಿನ ಕೇರಳದಿಂದ ರಾಜ್ಯಕ್ಕೆ ಬರುವವರು ಪ್ರತಿ ವಾರ ಆರ್ ಟಿಪಿಸಿಆರ್ ನೆಗೆಟಿವ್ ವರದಿ ತೋರಿಸಬೇಕು ಎಂದರು.

ಕ್ಷಯ ನಿರ್ಮೂಲನೆ-ಕೇಂದ್ರ ಸಚಿವರ ಸಭೆ

ಕೇಂದ್ರ ಆರೋಗ್ಯ ಸಚಿವ ಮನ್‍ಸುಖ್ ಮಾಂಡವೀಯ ಅವರು ಎಲ್ಲಾ ರಾಜ್ಯಗಳ ಆರೋಗ್ಯ ಸಚಿವರೊಂದಿಗೆ ಸಭೆ ನಡೆಸಿದರು. ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಡಾ.ಕೆ.ಸುಧಾಕರ್, 2025 ಕ್ಕೆ ಕ್ಷಯ ನಿರ್ಮೂಲನೆ ಮಾಡುವುದು ಪ್ರಧಾನಿಯವರ ಗುರಿ. ಇದಕ್ಕಾಗಿ ಕೋವಿಡ್ ಸಮಯದಲ್ಲಿ ಕ್ಷಯ ಪರೀಕ್ಷೆ ಕೈಗೊಳ್ಳಲಾಗಿದೆ. ಕೋವಿಡ್ ನಿಂದ 29 ಲಕ್ಷ ಮಂದಿ ಗುಣಮುಖರಾಗಿದ್ದು, ಎಲ್ಲರಿಗೂ ಕ್ಷಯ ಪರೀಕ್ಷೆ ಮಾಡಲಾಗುತ್ತಿದೆ. ಈವರೆಗೆ ಸುಮಾರು 7 ಲಕ್ಷ ಜನರಿಗೆ ಪರೀಕ್ಷೆ ಮಾಡಿದ್ದು, 157 ಪ್ರಕರಣಗಳಲ್ಲಿ ಕ್ಷಯ ಕಂಡುಬಂದಿದೆ. ಈ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ತಿಳಿಸಿದರು. 

ಸಾರಿ, ಐಎಲ್ ಐ ಇರುವವರಿಗೆ ಕ್ಷಯ ಹಾಗೂ ಕೋವಿಡ್ ಪರೀಕ್ಷೆ ಮಾಡಬೇಕು. ಕೋವಿಡ್ ಇದ್ದರೆ ಕ್ಷಯ ಪರೀಕ್ಷೆಯನ್ನೂ ಮಾಡಬೇಕು. ಈ ರೀತಿ ಪರೀಕ್ಷೆ ಮಾಡಿದರೆ ಉತ್ತಮ ಎಂದು ಕೇಂದ್ರ ಸಚಿವರು ಹೇಳಿದ್ದಾರೆ. ಜೊತೆಗೆ ಸಾರ್ವಜನಿಕರು ಕೋವಿಡ್ ಸುರಕ್ಷತಾ ಕ್ರಮ ಪಾಲಿಸಬೇಕು ಎಂದು ಸಚಿವರು ತಿಳಿಸಿದ್ದಾರೆ. ಜೊತೆಗೆ ರಾಜ್ಯದಲ್ಲಿ ನಡೆದ ಲಸಿಕಾ ಉತ್ಸವದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದರು.

ಒಂದು ತಿಂಗಳಿಂದ ಗಡಿಭಾಗಗಳಲ್ಲಿ ಎಚ್ಚರ ವಹಿಸಲಾಗಿದೆ. ಗಡಿಭಾಗದ 20 ಕಿ.ಮೀ. ವ್ಯಾಪ್ತಿಯಲ್ಲಿ ಲಸಿಕೆ ನೀಡಬೇಕು ಎಂದು ಸೂಚಿಸಲಾಗಿದೆ. ಕೆಜಿಎಫ್ ನ ನರ್ಸಿಂಗ್ ಸಂಸ್ಥೆಯಲ್ಲಿ ಕೇರಳದಿಂದ ಬಂದ ವಿದ್ಯಾರ್ಥಿಗಳಲ್ಲಿ ಸೋಂಕು ಬಂದಿದೆ. ಈ ಬಗ್ಗೆ ಕ್ರಮ ಕೈಗೊಳ್ಳಲಾಗಿದೆ ಎಂದರು.

Related Stories

No stories found.

Advertisement

X
Kannada Prabha
www.kannadaprabha.com