19 ವರ್ಷದ ನಂತರ ಅಂಜನಾಪುರದ ಬಿಡಿಎ ಲೇಔಟ್ ನಲ್ಲಿ ಬರಲಿದೆ ಪೂರ್ಣ ಪ್ರಮಾಣದ ರಸ್ತೆ!

ಅಂಜನಾಪುರ ನಿವೇಶನಗಳ ಮಾಲೀಕರ ಪದೇ ಪದೇ ಬೇಡಿಕೆಯ ಹಿನ್ನೆಲೆಯಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಲೇಔಟ್ ನಲ್ಲಿ 80 ಅಡಿ ರಸ್ತೆ ನಿರ್ಮಿಸಲು ಮುಂದಾಗಿದೆ.
ಅಂಜನಾಪುರ ರಸ್ತೆ
ಅಂಜನಾಪುರ ರಸ್ತೆ

ಬೆಂಗಳೂರು: ಅಂಜನಾಪುರ ನಿವೇಶನಗಳ ಮಾಲೀಕರ ಪದೇ ಪದೇ ಬೇಡಿಕೆಯ ಹಿನ್ನೆಲೆಯಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಲೇಔಟ್ ನಲ್ಲಿ 80 ಅಡಿ ರಸ್ತೆ ನಿರ್ಮಿಸಲು ಮುಂದಾಗಿದೆ. ಈ ಲೇಔಟ್ ನಿವಾಸಿಗಳಿಗೆ 19 ವರ್ಷದ ಹಿಂದೆಯೇ ನಿವೇಶನ ಹಂಚಿಕೆ ಮಾಡಲಾಗಿತ್ತು.

ಸುಮಾರು 23 ಕೋಟಿ ರು ವೆಚ್ಚದಲ್ಲಿ 6-8 ಕಿಮೀ ರಸ್ತೆ ನಿರ್ಮಾಣ ಮಾಡಲಾಗುವುದು, ಇದು ನಾಲ್ಕು ಪಥಗಳ ರಸ್ತೆಯಾಗಿದ್ದು, ಕನಕಪುರದಿಂದ ಗೊಟ್ಟಿಗೆರೆ ಮೂಲಕ ಅಂಜನಾಪುರ ಲೇಔಟ್ ತಲುಪಲಿದೆ. ಒಂದು ತಿಂಗಳ ಒಳಗಾಗಿ ಟೆಂಡರ್ ಕರೆಯಲಾಗುವುದು ಎಂದು ಬಿಡಿಎ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರಸ್ತೆ ನಿರ್ಮಾಣ ವಿಳಂಬಕ್ಕೆ ಕಾರಣವೇನು ಎಂಬ ಪ್ರಶ್ನೆಗೆ ಉತ್ತರಿಸಿದ ಬಿಡಿಎ ಅಧಿಕಾರಿ, ಇದನ್ನು ಆಗಸ್ಟ್ 2020 ರಲ್ಲಿ ನಿರ್ಮಿಸಲು ನಿರ್ಧರಿಸಿದ್ದಾರೆ ಎಂದು ಹೇಳಿದರು. ಆದರೆ ಬಿಡಿಎ ಆರ್ಥಿಕವಾಗಿ ಸಂಕಷ್ಟದಲ್ಲಿ ಸಿಲುಕಿದೆ. ಉತ್ತಮ ಸಂಖ್ಯೆಯ ಸೈಟ್‌ಗಳ ಮಾರಾಟದ ನಂತರ ನಮ್ಮ ಪರಿಸ್ಥಿತಿ ಈಗ ಸುಧಾರಿಸಿದೆ.  ಸದ್ಯ ರಾಷ್ಟ್ರೀಯ ಹೆದ್ದಾರಿ ಗುಣಮಟ್ಟವನ್ನು ಹೊಂದಿರುವ ರಸ್ತೆ ನಿರ್ಮಿಸಲು ನಮ್ಮಲ್ಲಿ ಸಂಪನ್ಮೂಲಗಳಿವೆ ಎಂದು ಹೇಳಿದ್ದಾರೆ.

ಬಿಡಿಎ ಅಧ್ಯಕ್ಷ ಎಸ್.ಆರ್. ವಿಶ್ವನಾಥ್,  ಬೆಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಎಂ.ಕೃಷ್ಣಪ್ಪ, ಬಡಾವಣೆ ನಿವಾಸಿಗಳು ಮತ್ತು ಅಧಿಕಾರಿಗಳ ಜತೆ ವಿಶ್ವನಾಥ್ ಗುರುವಾರ ಸಭೆ ನಡೆಸಿದರು. ಕುಡಿಯುವ ನೀರಿನ  ಸಂಪರ್ಕ ಕಲ್ಪಿಸಲು ಜಲ ಮಂಡಳಿಯಿಂದ ರಸ್ತೆ ಅಗೆದಿದ್ದರಿಂದ ಗುಂಡಿ ಬಿದ್ದು ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದಾರೆ. ಅಂಜನಾಪುರ ಬಡಾವಣೆಯಲ್ಲಿ ರಸ್ತೆ, ಒಳಚರಂಡಿ,  ಬೀದಿ ದೀಪ ಸೇರಿ ಮೂಲಸೌಕರ್ಯ ಕೊರತೆ ಇದೆ ಎಂದು ಶಾಸಕ ಕೃಷ್ಣಪ್ಪ ಮತ್ತು ನಿವಾಸಿಗಳು ಅಧ್ಯಕ್ಷರ ಗಮನಕ್ಕೆ ತಂದರು. ಗಣೇಶ ಚತುರ್ಥಿಯ ನಂತರ 15 ದಿನಗಳಲ್ಲಿ ಟೆಂಡರ್ ಕರೆಯಲಾಗುವುದು ಎಂದು ವಿಶ್ವನಾಥ್ ಹೇಳಿದ್ದಾರೆ.

ಸುಮಾರು 8,000 ಜನರಿಗೆ ನಿವೇಶನ ಹಂಚಿಕೆದಾರರನ್ನು ಒಳಗೊಂಡ ಲೇಔಟ್‌ನಲ್ಲಿ 40x60 ಚದರ ಅಡಿ ಸೈಟ್‌ನ ಮಾಲೀಕನಾಗಿದ್ದೇನೆ. ಇಲ್ಲಿ ಮೂಲಸೌಕರ್ಯದ ಕೊರತೆಯಿಂದಾಗಿ ಸುಮಾರು 500 ಮಾಲೀಕರು ಮಾತ್ರ ಮನೆಗಳನ್ನು ನಿರ್ಮಿಸಿದ್ದಾರೆ ಎಂದು ಅಂಜನಾಪುರ ಎಕ್ಸ್ ಟೆನ್ಸನ್ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಪಿ.ಸಂಪತ್ ಕುಮಾರ್ ಲೇಔಟ್ ಅಭಿವೃದ್ಧಿಯ ಬಗ್ಗೆ ಸಮಾಧಾನ ವ್ಯಕ್ತಪಡಿಸಿದರು.

ಅಂಜನಾಪುರ ಬಡಾವಣೆಯ ಇತರೆ ಭಾಗಗಳು ಮತ್ತು ಈ ಬಡಾವಣೆಗೆ ಹೊಂದಿಕೊಂಡಿರುವ ಜೆ.ಪಿ. ನಗರ 8 ಮತ್ತು 9ನೇ ಬ್ಲಾಕ್‌ ರಸ್ತೆಗಳ ದುರಸ್ತಿ ಕಾಮಗಾರಿಯನ್ನು ಹಂತ–ಹಂತವಾಗಿ ಕೈಗೆತ್ತಿಕೊಳ್ಳಲಾಗುತ್ತದೆ. ಇದಕ್ಕಾಗಿ 40 ಕೋಟಿ ರು. ನಿಗದಿ ಮಾಡಲಾಗಿದೆ ಎಂದು ಹೇಳಿದರು. ಕುಡಿಯುವ ನೀರು ಮತ್ತು ಒಳಚರಂಡಿ ಸಂಪರ್ಕಕ್ಕೆ ಸಂಬಂಧಿಸಿದಂತೆ ಜಲಮಂಡಳಿಗೆ ಬಿಡಿಎ ನೀಡಬೇಕಾಗಿರುವ ಹಣವನ್ನು ಆದ್ಯತೆ ಮೇರೆಗೆ ನೀಡಲಾಗುತ್ತದೆ ಎಂದು ತಿಳಿಸಿದರು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com