ಬೆಂಗಳೂರಿನ ಮತ್ತೊಂದು ಕಾಲೇಜಿನಲ್ಲಿ ಕೊರೋನಾ ಸ್ಫೋಟ: 34 ವಿದ್ಯಾರ್ಥಿಗಳಿಗೆ ಸೋಂಕು, 100 ಮೀ. ಬಫರ್ ಝೋನ್ ಘೋಷಣೆ

ಬೆಂಗಳೂರಿನ ಮತ್ತೊಂದು ಕಾಲೇಜಿನಲ್ಲಿ ಕೊರೋನಾ ಸಾಂಕ್ರಾಮಿಕ ಸ್ಫೋಟವಾಗಿದ್ದು, ಒಂದೇ ಕಾಲೇಜಿನ 34 ಮಂದಿಗೆ ಸೋಂಕು ಒಕ್ಕರಿಸಿದೆ.
ನರ್ಸಿಂಗ್ ಕಾಲೇಜಿಗೆ ಭೇಟಿ ನೀಡಿದ ಸಚಿವ ಸುಧಾಕರ್
ನರ್ಸಿಂಗ್ ಕಾಲೇಜಿಗೆ ಭೇಟಿ ನೀಡಿದ ಸಚಿವ ಸುಧಾಕರ್

ಬೆಂಗಳೂರು: ಬೆಂಗಳೂರಿನ ಮತ್ತೊಂದು ಕಾಲೇಜಿನಲ್ಲಿ ಕೊರೋನಾ ಸಾಂಕ್ರಾಮಿಕ ಸ್ಫೋಟವಾಗಿದ್ದು, ಒಂದೇ ಕಾಲೇಜಿನ 34 ಮಂದಿಗೆ ಸೋಂಕು ಒಕ್ಕರಿಸಿದೆ.

ಬೆಂಗಳೂರು ನಗರದ ಹೊರಮಾವು ಕ್ರಿಸ್ಟಿಯನ್ ನರ್ಸಿಂಗ್ ಕಾಲೇಜಿನಲ್ಲಿ 300 ಮಂದಿ ಪೈಕಿ 34 ವಿದ್ಯಾರ್ಥಿಗಳಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದು, ಕಾಲೇಜಿನ ಸುತ್ತಮುತ್ತಲಿನ ಸುಮಾರು 100 ಮೀಟರ್ ಪ್ರದೇಶವನ್ನು ಬಫರ್ ಝೋನ್ ಎಂದು ಘೋಷಣೆ ಮಾಡಲಾಗಿದೆ.

ಸೋಂಕು ಹಿನ್ನಲೆಯಲ್ಲಿ ನರ್ಸಿಂಗ್ ಕಾಲೇಜನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದು, ಕಾಲೇಜಿನ ಸುತ್ತ-ಮುತ್ತ ಇರುವ ಸುಮಾರು 800 ಜನರಿಗೆ ಕೋವಿಡ್ ಪರೀಕ್ಷೆ ಮಾಡಲಾಗಿದೆ.  ಆಗಸ್ಟ್ 27 ರಿಂದ ಸೆಪ್ಟೆಂಬರ್ 1 ರವರೆಗೆ 34 ವಿದ್ಯಾರ್ಥಿಗಳಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ. ಈ 34 ವಿದ್ಯಾರ್ಥಿಗಳಲ್ಲಿ 23 ಮಂದಿ ಕೇರಳದವರು ಮತ್ತು 11 ಮಂದಿ ಪಶ್ಚಿಮ ಬಂಗಾಳದವರಾಗಿದ್ದಾರೆ. 12 ಹುಡುಗರು ಮತ್ತು 22 ಹುಡುಗಿಯರಲ್ಲಿ 16 ಮಂದಿಯನ್ನು ಎಚ್‌ಎಎಲ್ ಕೋವಿಡ್ ಕೇರ್ ಸೆಂಟರ್‌ಗೆ ಮತ್ತು 18 ಇತರರನ್ನು ವಾರ್ಡ್ ಸಂಖ್ಯೆ 82 ರಲ್ಲಿರುವ ಜಿಂಕ್ ಹೋಟೆಲ್ ಸಿಸಿಸಿಗೆ ವರ್ಗಾಯಿಸಲಾಗಿದೆ.

ಆಗಸ್ಟ್ 27 ರಂದು ಮೊದಲ ಪ್ರಕರಣಗಳು ವರದಿಯಾಗಿದ್ದು, ನಾಲ್ಕು ಜನರಲ್ಲಿ ರೋಗಲಕ್ಷಣಗಳು ಕಂಡಬಂದಿತ್ತು. ಆಗಸ್ಟ್ 28 ರಂದು ಒಂದು RAT ಪರೀಕ್ಷೆ ಮಾಡಲಾಗಿತ್ತು. ಈ ಪೈಕಿ ಐದು ವಿದ್ಯಾರ್ಥಿಗಳಲ್ಲಿ ಸೋಂಕು ದೃಢಪಟ್ಟಿತ್ತು. ಬಳಿಕ ಆರ್‌ಟಿ-ಪಿಸಿಆರ್ ಪರೀಕ್ಷೆಯನ್ನು ಮಾಡಲಾಗಿತ್ತು. ಈ ವೇಳೆಯೂ ಐದು ಮಂದಿಯಲ್ಲಿ ಸೋಂಕು ಇರುವುದು ಕಂಡುಬಂದಿತ್ತು. ಆಗಸ್ಟ್ 28 ರಂದು ಇನ್ನೂ 10 ವಿದ್ಯಾರ್ಥಿಗಳ ಪರೀಕ್ಷೆ ಪಾಸಿಟಿವ್ ಬಂದಿತ್ತು. ಆಗಸ್ಟ್ 29 ರಂದು 12ಕ್ಕೂ ಹೆಚ್ಚು ಸೋಂಕು ದೃಢಪಟ್ಟಿತ್ತು. ಆಗಸ್ಟ್ 30 ರಂದು, ಸೋಂಕು ದೃಢಪಟ್ಟಿದ್ದ ಎಲ್ಲರ ಮಾದರಿಗಳನ್ನು ಜೀನೋಮ್ ಸೀಕ್ವೆನ್ಸಿಂಗ್‌ಗೆ ಕಳುಹಿಸಲಾಗಿತ್ತು. ಸಂಗ್ರಹಿಸಿದ 580 ಮಾದರಿಗಳಲ್ಲಿ 480 ವಿದ್ಯಾರ್ಥಿಗಳು ಹಾಸ್ಟೆಲ್‌ಗಳಲ್ಲಿ ಮತ್ತು 100 ಮಂದಿ ಹೊರಗಡೆ ಉಳಿದುಕೊಂಡಿದ್ದರು.

ಶುಕ್ರವಾರ ಕಾಲೇಜಿಗೆ ಭೇಟಿ ನೀಡಿದ ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಅವರು, 'ಹೊರ ರಾಜ್ಯದಿಂದ ವಿದ್ಯಾರ್ಥಿಗಳು ಬರುವುದರಿಂದ ಶಿಕ್ಷಣ ಸಂಸ್ಥೆಗಳು ಎಚ್ಚರ ವಹಿಸಬೇಕು. ಹೊರಮಾವು ಕಾಲೇಜಿನ ಎಲ್ಲ ವಿದ್ಯಾರ್ಥಿಗಳು ಕೇರಳ ಮತ್ತು ಪಶ್ಚಿಮ ಬಂಗಾಳದಿಂದ ಬಂದವರಾಗಿದ್ದಾರೆ. ಕೋವಿಡ್‌ ದೃಢಪಟ್ಟವರಲ್ಲಿ ಬಹುತೇಕರು ಕೊರೊನಾ ಸೋಂಕು ಲಕ್ಷಣರಹಿತರಾಗಿದ್ದಾರೆ. ಇವರ ಮಾದರಿಯನ್ನು ವೈರಾಣು ಅನುಕ್ರಮಣಿಕೆಗೆ ಕಳುಹಿಸಲಾಗುವುದು ಎಂದರು. 

‘ಸೋಂಕಿತ ವಿದ್ಯಾರ್ಥಿಗಳನ್ನು ಕೋವಿಡ್ ಆರೈಕೆ ಕೇಂದ್ರ, ಹೋಟೆಲ್ ಮೊದಲಾದ ಕಡೆ ಪ್ರತ್ಯೇಕವಾಗಿರಿಸಲಾಗುವುದು. ಹಲವರನ್ನು ಸಂಸ್ಥೆಯಲ್ಲೇ ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗುವುದು. ಒಂದು ವಾರ ಸಂಸ್ಥೆಯನ್ನು ಮುಚ್ಚಿ, ಬಳಿಕ ಮತ್ತೆ ಪರೀಕ್ಷೆ ಮಾಡಲಾಗುವುದು. ಈ ಕಾಲೇಜು ಇರುವ ಪ್ರದೇಶವನ್ನು ಸೂಕ್ಷ್ಮ ಕಂಟೈನ್‌ಮೆಂಟ್‌ ವಲಯ ಎಂದು ಘೋಷಿಸಲಾಗಿದೆ’ ಎಂದರು.  

ಬಿಬಿಎಂಪಿಯ ಆರೋಗ್ಯ ವಿಶೇಷ ಆಯುಕ್ತ ಡಿ.ರಂದೀಪ್, ರಾಜ್ಯಕ್ಕೆ ಬಂದವರೆಲ್ಲರೂ ನೆಗೆಟಿವ್ ಪರೀಕ್ಷಾ ವರದಿಯನ್ನು ಹೊಂದಿದ್ದಾರೆ. ಆದರೆ ಈ ಆದೇಶಕ್ಕೂ ಮೊದಲು ಬಂದವರಲ್ಲಿ ಹಲವರು ಸೋಂಕಿಗೆ ತುತ್ತಾಗಿದ್ದಾರೆ. ಇಲ್ಲಿಯವರೆಗೆ, ಸೋಂಕಿಗೆ ತುತ್ತಾದವರ ಭಾಷಾ ವಿಭಜನೆ ಮಾಡಿಲ್ಲ ಎಂದು ಹೇಳಿದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com