ಸಾರ್ವಜನಿಕ ಸಭೆ-ಸಮಾರಂಭಗಳಿಗೂ ಕೊರೋನಾ ನಿಯಮ, ಪ್ರವಾಹ ಪರಿಸ್ಥಿತಿ ಕುರಿತು ಕೇಂದ್ರ ತಂಡದಿಂದ ಅಧ್ಯಯನ: ಸಿಎಂ
ಉತ್ತರ ಕರ್ನಾಟಕ, ಉತ್ತರ ಕನ್ನಡ ಜಿಲ್ಲೆಗಳು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳ ಪ್ರವಾಹ ಪರಿಸ್ಥಿತಿ ನಂತರದ ಪರಿಸ್ಥಿತಿ, ಆಗಿರುವ ನಷ್ಟಗಳ ಅಂದಾಜನ್ನು ಪರಿಶೀಲನೆ ಮಾಡಲು ಕೇಂದ್ರದ ತಂಡ ಬಂದಿದೆ. ಅವರ ಜೊತೆ ಮತ್ತು ನಮ್ಮ ಅಧಿಕಾರಿಗಳ ಜೊತೆ ಚರ್ಚೆ ನಡೆಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
Published: 04th September 2021 11:08 AM | Last Updated: 04th September 2021 03:09 PM | A+A A-

ಸಿಎಂ ಬಸವರಾಜ ಬೊಮ್ಮಾಯಿ
ಬೆಂಗಳೂರು: ಉತ್ತರ ಕರ್ನಾಟಕ, ಉತ್ತರ ಕನ್ನಡ ಜಿಲ್ಲೆಗಳು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳ ಪ್ರವಾಹ ಪರಿಸ್ಥಿತಿ ನಂತರದ ಪರಿಸ್ಥಿತಿ, ಆಗಿರುವ ನಷ್ಟಗಳ ಅಂದಾಜನ್ನು ಪರಿಶೀಲನೆ ಮಾಡಲು ಕೇಂದ್ರದ ತಂಡ ಬಂದಿದೆ. ಅವರ ಜೊತೆ ಮತ್ತು ನಮ್ಮ ಅಧಿಕಾರಿಗಳ ಜೊತೆ ಸುದೀರ್ಘ ಚರ್ಚೆ ನಡೆಸಿ ಸಭೆ ನಡೆಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು ನಮ್ಮಲ್ಲಿರುವ ಮಾಹಿತಿಗಳು ಮತ್ತು ವರದಿಗಳನ್ನು ಕೇಂದ್ರದ ಅಧ್ಯಯನ ತಂಡಕ್ಕೆ ನೀಡಲಿದ್ದು, ಅವರ ಜೊತೆಗೆ ನಮ್ಮ ಅಧಿಕಾರಿಗಳು ಕೂಡ ಪ್ರವಾಸ ಮಾಡುತ್ತಾರೆ ಎಂದು ಹೇಳಿದರು.
ಅತಿ ಹೆಚ್ಚು ಪ್ರವಾಹದಿಂದ ತೊಂದರೆಗೊಳಗಾಗಿರುವ ಪ್ರದೇಶಗಳಿಗೆ ಕೇಂದ್ರದ ತಂಡ ಮತ್ತು ನಮ್ಮ ಅಧಿಕಾರಿಗಳು ಭೇಟಿ ನೀಡಿ ವರದಿಯನ್ನು ತರಲಿದ್ದಾರೆ. ಎನ್ ಡಿಆರ್ ಎಫ್ ನಿಯಮದಡಿ ನಮ್ಮ ರಾಜ್ಯದ ಬೇಡಿಕೆಯನ್ನು ಕೇಂದ್ರ ಈಡೇರಿಸಲಿದೆ ಎಂಬ ವಿಶ್ವಾಸ ನನಗಿದೆ ಎಂದು ಹೇಳಿದರು.
ಶಾಲೆಗಳ ಪುನರಾರಂಭ: ಸದ್ಯ ನಾಡಿದ್ದು ಸೋಮವಾರದಿಂದ 6ನೇ ತರಗತಿಯಿಂದ 8ನೇ ತರಗತಿಯವರೆಗೆ ಶಾಲೆಗಳು ಆರಂಭವಾಗುತ್ತಿದ್ದು, ಯಾವ ರೀತಿ ನಡೆಯುತ್ತದೆ, ಕೊರೋನಾ ಪರಿಸ್ಥಿತಿ ಹೇಗಿರುತ್ತದೆ ಎಂದು ನೋಡಿಕೊಂಡು ಪರಿಶೀಲಿಸಿ ಮುಂದಿನ ದಿನಗಳಲ್ಲಿ 1ನೇ ತರಗತಿಯಿಂದ ಶಾಲೆ ಆರಂಭಿಸುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ಸಾರ್ವಜನಿಕ ಸಭೆ, ಸಮಾರಂಭ, ರ್ಯಾಲಿಗಳನ್ನು ಆಯೋಜಿಸಲಾಗುತ್ತದೆ, ಬೃಹತ್ ಸಂಖ್ಯೆಯಲ್ಲಿ ಜನರು ಸೇರುತ್ತಾರೆ, ಅದೇ ಗಣೇಶೋತ್ಸವಕ್ಕೆ ಮಾತ್ರ ಸರ್ಕಾರ ನಿಯಮ ತರುತ್ತದೆ ಎಂದು ಟೀಕೆಗಳು ಕೇಳಿಬರುತ್ತಿವೆಯಲ್ಲವೇ ಎಂದು ಕೇಳಿದ್ದಕ್ಕೆ ಹೌದು ಕೆಲವು ಘಟನೆಗಳು ನಡೆದಿರುವುದು ನನ್ನ ಗಮನಕ್ಕೂ ಬಂದಿದೆ. ಮುಂದಿನ ದಿನಗಳಲ್ಲಿ ಸಭೆ-ಸಮಾರಂಭಗಳನ್ನು ನಡೆಸುವುದಕ್ಕೂ ಮಾರ್ಗಸೂಚಿಗಳನ್ನು ಸರ್ಕಾರ ಹೊರಡಿಸುತ್ತದೆ ಎಂದರು.