ನರ್ಸಿಂಗ್ ಕಾಲೇಜಿನ 25 ಮಂದಿ ವಿದ್ಯಾರ್ಥಿಗಳಲ್ಲಿ ಕೊರೋನಾ ಪತ್ತೆ: ಬೆಂಗಳೂರಿನಲ್ಲಿ ಮತ್ತೊಂದು ಕ್ಲಸ್ಟರ್!
ಹೊರಮಾವು ನರ್ಸಿಂಗ್ ಕಾಲೇಜು ಬಳಿಕ ನಗರದ ದಾಸರಹಳ್ಳಿ ನರ್ಸಿಂಗ್ ಕಾಲೇಜಿನಲ್ಲೂ ಕ್ಲಸ್ಚರ್ ಮಾದರಿಯ ಮತ್ತೊಂದು ಕೇಸ್ ಶನಿವಾರ ಪತ್ತೆಯಾಗಿದೆ.
Published: 05th September 2021 02:09 PM | Last Updated: 06th September 2021 03:09 PM | A+A A-

ಸಂಗ್ರಹ ಚಿತ್ರ
ಬೆಂಗಳೂರು: ಹೊರಮಾವು ನರ್ಸಿಂಗ್ ಕಾಲೇಜು ಬಳಿಕ ನಗರದ ದಾಸರಹಳ್ಳಿ ನರ್ಸಿಂಗ್ ಕಾಲೇಜಿನಲ್ಲೂ ಕ್ಲಸ್ಚರ್ ಮಾದರಿಯ ಮತ್ತೊಂದು ಕೇಸ್ ಶನಿವಾರ ಪತ್ತೆಯಾಗಿದೆ.
ದಾಸರಹಳ್ಳಿಯ ಧನ್ವಂತರಿ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಯೊಬ್ಬರಿಗೆ ಆಗಸ್ಟ್ 30ರಂದು ಕೊರೋನಾ ಸೋಂಕು ದೃಢಪಟ್ಟಿತ್ತು. ಕಾಲೇಜಿನಲ್ಲಿ ಒಟ್ಟು 450 ವಿದ್ಯಾರ್ಥಿಗಳಿದ್ದು, ವಿದ್ಯಾರ್ಥಿಯಲ್ಲಿ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಸಿಬ್ಬಂದಿಗಳೂ ಸೇರಿ ಕಾಲೇಜಿನಲ್ಲಿ ಒಟ್ಟು 470 ಮಂದಿಗೆ ಆರ್'ಟಿ-ಪಿಸಿಆರ್ ಪರೀಕ್ಷೆ ನಡೆಸಲಾಗಿತ್ತು. ಈ ಪೈಕಿ 14 ಮಂದಿ ವಿದ್ಯಾರ್ಥಿನಿಯರು ಹಾಗೂ 7 ಮಂದಿ ವಿದ್ಯಾರ್ಥಿಗಳು, ಮೂವರು ಶಿಕ್ಷಕರಲ್ಲಿ ಕೋವಿಡ್ ಸೋಂಕು ತಗಲುರುವುದು ದೃಢಪಟ್ಟಿದೆ.
ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಅಧಿಕಾರಿಗಳು ಕಾಲೇಜು ಹಾಸ್ಟೆಲ್'ನ ವಿದ್ಯಾರ್ಥಿಗಳ 18 ಹಾಗೂ ವಿದ್ಯಾರ್ಥಿನಿಯರ 11 ಕೊಠಡಿಗಳನ್ನು ಕಂಟೈನ್ಮೆಂಟ್ ಜೋನ್ ಎಂದು ಘೋಷಣೆ ಮಾಡಲಾಗಿದೆ.
ಸೋಂಕಿಗೆ ಅಂತರ್ ರಾಜ್ಯ ಸಂಪರ್ಕ ಇರುವ ಕುರಿತು ಯಾವುದೇ ಮಾಹಿತಿಗಳು ಲಭ್ಯವಾಗಿಲ್ಲ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದರೆ.
ವಿದ್ಯಾರ್ಥಿಗಳು ಸ್ಥಳೀಯ ಮಾರುಕಟ್ಟೆ ಹಾಗೂ ಅಂಗಡಿಗಳಿಗೆ ತೆರಳಿದ್ದು, ಈ ವೇಳೆ ಸೋಂಕು ತಗುಲಿರುವ ಸಾಧ್ಯತೆಗಳಿವೆ. ಕಾಲೇಜಿನ ಶೇ.90ರಷ್ಟು ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳು ಮೊದಲ ಡೋಸ್ ಲಸಿಕೆ ಹಾಗೂ ಶೇ.10ರಷ್ಟು ಸಿಬ್ಬಂದಿಗಳು ಎರಡು ಡೋಸ್ ಲಸಿಕೆಯನ್ನು ಪಡೆದುಕೊಂಡಿದ್ದಾರೆಂದು ತಿಳಿಸಿದ್ದಾರೆ.
ಪಾಲಿಕೆ ವಿಶೇಷ ಆಯುಕ್ತ ರಣದೀಪ್ ಅವರು ಮಾತನಾಡಿ, ಹೆಚ್ಚು ಸಂಖ್ಯೆಯಲ್ಲಿ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಪರೀಕ್ಷೆ ಹೆಚ್ಚಾಗಿ ನಡೆಸುತ್ತಿರುವುದರಿಂದ ಸೋಂಕಿತರನ್ನು ಶೀಘ್ರದಲ್ಲಿ ಪತ್ತೆ ಹಚ್ಚಲು ಸಹಾಯವಾಗುತ್ತದೆ. ಆತಂಕ ಪಡುವ ಅಗತ್ಯವಿಲ್ಲ. ನಾಗರೀಕ ಪ್ರದೇಶಗಳಿಗಿಂತಲೂ ಹಾಸ್ಟೆಲ್ ಗಳಲ್ಲಿ ಸೋಂಕು ನಿಯಂತ್ರಿಸುವುದು ಸುಲಭ ಎಂದು ಹೇಳಿದ್ದಾರೆ.
ಸೋಂಕು ತಗುಲಿದ 20 ವಿದ್ಯಾರ್ಥಿಗಳನ್ನು ಕೋವಿಡ್ ಕೇರ್ ಕೇಂದ್ರಗಳಿಗೆ ಕಳುಹಿಸಲಾಗಿದೆ. ಒಬ್ಬ ವಿದ್ಯಾರ್ಥಿ ರಾಜಾಜಿನಗರದ ಇಎಸ್ಐ ಆಸ್ಪತ್ರೆಯ ಐಸಿಯುವಿನಲ್ಲಿ ವೆಂಟಿಲೇಟರ್ ಸಪೋರ್ಟ್ ನಲ್ಲಿದ್ದಾರೆ. ಇನ್ನು ಸೋಂಕು ತಗುಲಿದ ಮೂವರು ಶಿಕ್ಷಕರು ಮನೆಗಳಲ್ಲಿ ಕ್ವಾರಂಟೈನ್ ಗೊಳಗಾಗಿದ್ದಾರೆಂದು ತಿಳಿದುಬಂದಿದೆ.
ಒಂದೇ ಸ್ಥಳದಲ್ಲಿ ಇನ್ನಷ್ಟು ಜನರಿಗೆ ಸೋಂಕು ತಗುಲಿದ್ದೇ ಆದರೆ, ಸೋಂಕು ತಗುಲಿದವರಿಗೆ ಸಾಂಸ್ಥಿಕ ಕ್ವಾರಂಟೈನ್ ಗೊಳಪಡಿಸಲಾಗುತ್ತದೆ. ಇದೀಗ ಸೋಂಕಿತರು ತಮ್ಮಷ್ಟಕ್ಕೆ ತಾವೇ ಮನೆಗಳಲ್ಲಿ ಕ್ವಾರಂಟೈನ್ ಗೊಳಗಾಗಲು ನಾವು ಅವಕಾಶ ನೀಡುತ್ತಿಲ್ಲ. ವೈದ್ಯಕೀಯ ಪರೀಕ್ಷಾ ವರದಿ ನೆಗೆಟಿವ್ ಬಂದವರಿಗಷ್ಟೇ ಕಾಲೇಜು ಪ್ರವೇಶಕ್ಕೆ ಅವಕಾಶ ನೀಡಲಾಗುತ್ತಿದೆ ಎಂದು ರಣದೀಪ್ ಅವರು ತಿಳಿಸಿದ್ದಾರೆ.