ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಡ್ರಗ್ ಪೆಡ್ಲರ್ ಆಸ್ತಿ ಜಪ್ತಿ!

ರಾಜ್ಯದಲ್ಲಿ ಭಾರೀ ಸದ್ದು ಮಾಡುತ್ತಿರುವ ಮಾದಕ ವಸ್ತು ಜಾಲದ ವಿರುದ್ಧ ದಾಳಿ ತೀವ್ರಗೊಳಿಸಿರುವ ಪೊಲೀಸರು, ಡ್ರಗ್ಸ್ ದಂಧೆಯಿಂದಲೇ ಪೆಡ್ಲರ್ ವೊಬ್ಬ ಕೆಲವೇ ವರ್ಷಗಳ ಅಂತರದಲ್ಲಿ ಸಂಪಾದಿಸಿದ್ದ ಕೋಟಿಗಟ್ಟಲೆ ಆಸ್ತಿಯನ್ನು ಜಪ್ತಿ ಮಾಡಿದ್ದಾರೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ರಾಜ್ಯದಲ್ಲಿ ಭಾರೀ ಸದ್ದು ಮಾಡುತ್ತಿರುವ ಮಾದಕ ವಸ್ತು ಜಾಲದ ವಿರುದ್ಧ ದಾಳಿ ತೀವ್ರಗೊಳಿಸಿರುವ ಪೊಲೀಸರು, ಡ್ರಗ್ಸ್ ದಂಧೆಯಿಂದಲೇ ಪೆಡ್ಲರ್ ವೊಬ್ಬ ಕೆಲವೇ ವರ್ಷಗಳ ಅಂತರದಲ್ಲಿ ಸಂಪಾದಿಸಿದ್ದ ಕೋಟಿಗಟ್ಟಲೆ ಆಸ್ತಿಯನ್ನು ಜಪ್ತಿ ಮಾಡಿದ್ದಾರೆ. 

ಮಾದಕ ವಸ್ತು ಸಾಗಣೆದಾರನಿಂದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡ ರಾಜ್ಯದ ಮೊದಲ ಪ್ರಕರಣ ಇದಾಗಿದೆ. 

ಆನೇಕಲ್ ತಾಲೂಕಿನ ಬ್ಯಾಗಡ ದೇವನಹಳ್ಳಿ ನಿವಾಸಿ. ಬಿಹಾರ ಮೂಲಕ ಅಜಯ್ ಕುಮಾರ್ ಸಿಂಗ್ (54) ಎಂಬಾತನಿಗೆ ಸೇರಿದ ಆಸ್ತಿಯನ್ನು ವಶಪಡಿಸಿಕೊಳ್ಳಲಾಗಿದೆ. ಇದೀಗ ಜಪ್ತಿ ಮಾಡಲಾಗಿರು ಆಸ್ತಿಯ ಮೊತ್ತ ಸರ್ಕಾರಿ ಮಾರ್ಗಸೂಚಿ ದರ ರೂ.1.68 ಕೋಟಿ ಇದೆ. ಇನ್ನು ಮಾರುಕಟ್ಟೆ ಮೊಲ್ಯ ರೂ.3 ಕೋಟಿಗಿಂತಲೂ ಹೆಚ್ಚಾಗಿದೆ ಎಂದು ಅಂದಾಜಿಸಲಾಗಿದೆ. 

ಬೆಂಗಳೂರಿನಲ್ಲಿ 3 ನಿವೇಶನ ಹಾಗೂ 1 ಫ್ಲ್ಯಾಟ್ ನ್ನು ಈತ ಖರೀದಿ ಮಾಡಿದ್ದ. ಆದರೆ, ಎಲ್ಲವನ್ನೂ ಪತ್ನಿ ಶೀಲಾದೇವಿ ಹೆಸರಿನಲ್ಲಿ ನೋಂದಣಿ ಮಾಡಿಸಿದ್ದ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆ ಸೂರ್ಯ ನಗರ ಪೊಲೀಸರು ಮಾಹಿತಿ ನೀಡಿದ್ದಾರೆ. ಈತನಿಂದ ಸ್ಕಾರ್ಪಿಯೋ ಕಾರನ್ನು ಕೂಡ ವಶಪಡಿಸಿಕೊಳ್ಳಲಾಗಿದೆ. 

ಆರೋಪಿ ಸಂಪೂರ್ಣವಾಗಿ ಡ್ರಗ್ಸ್ ದಂಧೆಯಿಂದಲೇ ಅಕ್ರಮವಾಗಿ ಚರಾಸ್ತಿ ಹಾಗೂ ಸ್ಥಿರಾಸ್ತಿ ಖರೀದಿ ಮಾಡಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಆರ್ಥಿಕ ವಂಚನೆ ತನಿಖಾ ಕಾಯ್ದೆಯಡಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ  ನೀಡಿದ್ದಾರೆ. 

ರೂ.2 ಲಕ್ಷ ಮೌಲ್ಯದ ಹೆರಾಯಿನ್ ವಶ: ಮಣಿಪುರ ಮೂಲದ ವ್ಯಕ್ತಿ ಬಂಧನ
ಡ್ರಗ್ಸ್ ಮಾರಾಟ ಆರೋಪದಡಿ ಸೊರೈಸಂ ಬೋರಿಶ್ ಸಿಂಗ್ (21) ಎಂಬಾತನನ್ನು ಬಂಧಿಸಿರುವ ಕಾಡುಗೊಂಡನಹಳ್ಳಿ (ಕೆ.ಜಿ.ಹಳ್ಳಿ) ಠಾಣೆ ಪೊಲೀಸರು, ಪೌಡರ್‌ ಹಬ್ಬಿಯಲ್ಲಿ ಹೆರಾಯಿನ್ ಡ್ರಗ್ಸ್ ಬಚ್ಚಿಟ್ಟು ನಗರಕ್ಕೆ ತಂದು ಮಾರುತ್ತಿದ್ದನೆಂಬ ಸಂಗತಿಯನ್ನು ಪತ್ತೆ ಮಾಡಿದ್ದಾರೆ.

‘ಎಚ್‌ಬಿಆರ್ ಲೇಔಟ್‌ಗೆ ಬಂದಿದ್ದ ಆರೋಪಿ, ಹೆರಾಯಿನ್ ಪೊಟ್ಟಣಗಳನ್ನು ಗ್ರಾಹಕರಿಗೆ ಮಾರಲು ಯತ್ನಿಸುತ್ತಿದ್ದ. ಈ ಬಗ್ಗೆ ಮಾಹಿತಿ ಬರುತ್ತಿದ್ದಂತೆ ದಾಳಿ ಮಾಡಿ ಆತನನ್ನು ಬಂಧಿಸಲಾಗಿದೆ. ಇನ್ನೊಬ್ಬ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ’ ಎಂದೂ ಮೂಲಗಳು ಹೇಳಿವೆ.

ರೂ.2 ಲಕ್ಷ ಮೌಲ್ಯದ ಹೆರಾಯಿನ್ ಹಾಗೂ ಪೌಡರ್‌ ಡಬ್ಬಿಯನ್ನು ಜಪ್ತಿ ಮಾಡಲಾಗಿದೆ. ಆರೋಪಿ ಹಲವು ತಿಂಗಳಿನಿಂದ ಕೃತ್ಯ ಎಸಗುತ್ತಿದ್ದನೆಂಬುದು ತನಿಖೆಯಿಂದ ಗೊತ್ತಾಗಿದೆ' ಎಂದೂ ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com