ರಾಜ್ಯ ಸರ್ಕಾರದಿಂದ ವೀಸಾ ಅವಧಿ ಮುಗಿದ ವಿದೇಶಿಗರ ಸರ್ವೆ

ಅಫ್ಘಾನ್ ರಾಜಕೀಯ ಬೆಳವಣಿಗೆಯಿಂದಾಗಿ ಎಚ್ಚೆತ್ತುಕೊಂಡಿರುವ ಕರ್ನಾಟಕ ಸರ್ಕಾರ ವೀಸಾ ಅವಧಿ ಮುಗಿದರೂ ಅನಧಿಕೃತವಾಗಿ ವಾಸಿಸುತ್ತಿರುವ ವಿದೇಶಿಗರ ಸಂಪೂರ್ಣ ಮಾಹಿತಿ ಕಲೆ ಹಾಕಲು ಸರ್ವೆಗೆ ಮುಂದಾಗಿದೆ.
ಗೃಹ ಸಚಿವ ಆರಗ ಜ್ಞಾನೇಂದ್ರ
ಗೃಹ ಸಚಿವ ಆರಗ ಜ್ಞಾನೇಂದ್ರ

ಬೆಂಗಳೂರು: ಅಫ್ಘಾನ್ ರಾಜಕೀಯ ಬೆಳವಣಿಗೆಯಿಂದಾಗಿ ಎಚ್ಚೆತ್ತುಕೊಂಡಿರುವ ಕರ್ನಾಟಕ ಸರ್ಕಾರ ವೀಸಾ ಅವಧಿ ಮುಗಿದರೂ ಅನಧಿಕೃತವಾಗಿ ವಾಸಿಸುತ್ತಿರುವ ವಿದೇಶಿಗರ ಸಂಪೂರ್ಣ ಮಾಹಿತಿ ಕಲೆ ಹಾಕಲು ಸರ್ವೆಗೆ ಮುಂದಾಗಿದೆ.

ಬೆಂಗಳೂರು ಸೇರಿದಂತೆ ರಾಜ್ಯದ ವಿವಿದೆಡೆ ವಿದೇಶಿಗರು ವೀಸಾ ನವೀಕರಣವಾಗದೇ ಇದ್ದರೂ ಇನ್ನೂ ಅನಧಿಕೃತವಾಗಿ ನೆಲೆಸಿದ್ದಾರೆ. ಹೀಗೆ ಅಕ್ರಮವಾಗಿ ನೆಲೆಸಿರುವವರಲ್ಲಿ ಕೆಲವರು ಡ್ರಗ್ಸ್ ಸೇರಿದಂತೆ ಅಪರಾಧಿಕ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿರುವುದು ಹೆಚ್ಚುತ್ತಿದೆ. ಹೀಗಾಗಿ ವಿದೇಶಿಗರ ವೀಸಾ ಪರಿಶೀಲನೆ ನಡೆಸಿ, ವಿದೇಶಿಗರು ಏನು ಕೆಲಸ ಮಾಡುತ್ತಿದ್ದಾರೆ? ಅವರ ಹಿನ್ನೆಲೆ ಏನು? ಎಂದು ಸಂಪೂರ್ಣ ಮಾಹಿತಿ ಕಲೆ ಹಾಕಲು ಗೃಹ ಇಲಾಖೆಗೆ ಸರ್ವೆ ನಡೆಸಲು ಸೂಚನೆ ನೀಡಲಾಗಿದೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಸೋಮವಾರ ಖುದ್ದು ಸ್ಪಷ್ಟಪಡಿಸಿದ್ದಾರೆ. 

ವೀಸಾ ಅವಧಿ ಮುಗಿದ ಬಳಿಕವೂ ಹಲವು ವಿದೇಶಿಗರು ರಾಜ್ಯದಲ್ಲಿ ಇದ್ದಾರೆ. ಅವರ ಸಂಪೂರ್ಣ ಮಾಹಿತಿ ಸಂಗ್ರಹಿಸಿ, ಬಳಿಕ ಅವರನ್ನು ವಾಪಸ್ ಕಳಿಸಲು ಸಂಬಂಧ ಪಟ್ಟ ಅಧಿಕಾರಿಗಳ ಜತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಗೃಹ ಸಚಿವರು ತಿಳಿಸಿದರು.

ಇನ್ನು ಕರಾವಳಿ ಪ್ರದೇಶದಲ್ಲಿ ತುಂಬಾ ವಿಚಿತ್ರಕಾರಕ ಶಕ್ತಿಗಳು ತಲೆಎತ್ತುವ ಮುನ್ಸೂಚನೆಯಿಂದ ಗೋವಾದಿಂದ ಕೇರಳ ಗಡಿಯವರೆಗೆ ಕಾವಲು ಪಡೆಯನ್ನು ಬಲಗೊಳಿಸಲು ಗೃಹ ಸಚಿವರು ಸೂಚಿಸಿದ್ದಾರೆ. 

ಕರಾವಳಿ ಕಾವಲು ಪಡೆ ಸ್ಪೀಡ್ ಬೋಟ್ ಗಳನ್ನು ಇನ್ನಷ್ಟು ಒದಗಿಸಲು ಗೃಹ ಇಲಾಖೆ ಸಜ್ಜಾಗಿದೆ. ದೇಶ ವಿರೋಧಿ ಕೃತ್ಯ, ದಂಧೆ ನಡೆಸುವವರ ಮೇಲೆ ಕಣ್ಗಾವಲು ಇಡಲಾಗಿದೆ. ಮೀನುಗಾರರ ವೇಷದಲ್ಲಿ ಬಂದು ಬಾಂಬೆಯಲ್ಲಿ ಆದ ಕೃತ್ಯ ಎಲ್ಲರಿಗೂ ಗೊತ್ತಿದೆ. ಹೀಗಾಗಿ ಕರಾವಳಿ ಕಾವಲು ಪಡೆ ಇನ್ನಷ್ಟು ಬಲಗೊಳ್ಳಬೇಕು ಎಂದು ಸೂಚನೆ ನೀಡಿರುವುದಾಗಿ ವಿಕಾಸಸೌಧದಲ್ಲಿ ಸುದ್ದಿಗಾರರಿಗೆ ಗೃಹ ಸಚಿವ ಅರಗ ಜ್ಞಾನೇಂದ್ರ ಮಾಹಿತಿ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com