ಮನೆ-ಮನೆಗೆ ಸಮೀಕ್ಷೆಯಿಂದಾಗಿ ನಗರದ ಆರೋಗ್ಯ ಸ್ಥಿತಿ ಕುರಿತು ಸ್ಪಷ್ಟ ಚಿತ್ರಣ ದೊರೆಯುತ್ತಿದೆ: ಸಚಿವ ಆರ್ ಅಶೋಕ

ಪಾಲಿಕೆ ವೈದ್ಯರು ನಿಮ್ಮ ಮನೆ ಬಾಗಿಲಿಗೆ' ಎಂಬ ಯೋಜನೆಯಡಿ ನಗರದಲ್ಲಿನ ಮನೆ ಮನೆಗೆ ತೆರಳಿ ನಡೆಸಲಾಗುತ್ತಿರುವ ಸಮೀಕ್ಷೆಯು ಆರೋಗ್ಯ ಸ್ಥಿತಿ ಕುರಿತು ಸ್ಪಷ್ಟ ಚಿತ್ರಣಗಳು ಸರ್ಕಾರಕ್ಕೆ ದೊರೆಯುತ್ತಿದೆ ಎಂದು ಸಚಿವ ಆರ್. ಅಶೋಕ್ ಅವರು ಸೋಮವಾರ ಹೇಳಿದ್ದಾರೆ. 
ಸಚಿವ ಆರ್. ಅಶೋಕ್ ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ
ಸಚಿವ ಆರ್. ಅಶೋಕ್ ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ

ಬೆಂಗಳೂರು: 'ಪಾಲಿಕೆ ವೈದ್ಯರು ನಿಮ್ಮ ಮನೆ ಬಾಗಿಲಿಗೆ' ಎಂಬ ಯೋಜನೆಯಡಿ ನಗರದಲ್ಲಿನ ಮನೆ ಮನೆಗೆ ತೆರಳಿ ನಡೆಸಲಾಗುತ್ತಿರುವ ಸಮೀಕ್ಷೆಯು ಆರೋಗ್ಯ ಸ್ಥಿತಿ ಕುರಿತು ಸ್ಪಷ್ಟ ಚಿತ್ರಣಗಳು ಸರ್ಕಾರಕ್ಕೆ ದೊರೆಯುತ್ತಿದೆ ಎಂದು ಸಚಿವ ಆರ್. ಅಶೋಕ್ ಅವರು ಸೋಮವಾರ ಹೇಳಿದ್ದಾರೆ. 

ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಪಾಲಿಕೆ ವೈದ್ಯರು ನಿಮ್ಮ ಮನೆ ಬಾಗಿಲಿಗೆ ಎಂಬ ಯೋಜನೆಯಡಿ ನಗರದಲ್ಲಿ ಮನೆ-ಮನೆ ತೆರಳಿ ಆರೋಗ್ಯ ಸಮೀಕ್ಷೆ ನಡೆಸಲಾಗುತ್ತಿದ್ದು, ಯೋಜನೆ ಅಡಿ 60 ದಿನಗಳ ಸಮೀಕ್ಷೆ ಕೈಗೊಳ್ಳಲಾಗಿದೆ. ಕಳೆದ 21 ದಿನಗಳಲ್ಲಿ 2,48,280 ಮನೆಗೆ ಭೇಟಿ ನಿಡಿ 7,11,648 ಮಂದಿಗೆ ಆರೋಗ್ಯ ಪರೀಕ್ಷೆ ಮಾಡಲಾಗಿದೆ. ಅದರಲ್ಲಿ 22,362 ಮಂದಿಗೆ ಕೋವಿಡ್ ದೃಢಪಟ್ಟವರಾಗಿದ್ದಾರೆಂದು ತಿಳಿದುಬಂದಿದೆ. 

4,39,777 ಮಂದಿ ಮೊದಲನೇ ಡೋಸ್ ಪಡೆದವರು, 1,67,081 ಮಂದಿ ಎರಡನೇ ಡೋಸ್ ಲಸಿಕೆ ಪಡೆದುಕೊಂಡಿದ್ದಾರೆಂದು ತಿಳಿದುಬಂದಿದೆ. ಸಮೀಕ್ಷೆ ಮಾಡಿದವರಲ್ಲಿ 57,528 ಮಂದಿ ದೀರ್ಘಕಾಲಿಕ ರೋಗಗಳಿರುವವರಿದ್ದು, ಶೇ. 50.8 ರಷ್ಟು ಮಂದಿಗೆ ಡಯಾಬಿಟಿಸ್, ಶೇ. 35.82 ರಷ್ಟು ಮಂದಿಗೆ ರಕ್ತದೊತ್ತಡ, 2.48 ರಷ್ಟು ಮಂದಿಗೆ ಹೃದಯ ಸಂಬಂಧಿ ಖಾಯಿಲೆ, 2.99 ರಷ್ಟು ಮಂದಿಗೆ ಥೈರಾಯ್ಡ್ ಖಾಯಿಲೆಯಿರುವುದು ತಿಳಿದುಬಂದಿದೆ.

ಮನೆ-ಮನೆ ಆರೋಗ್ಯ ಸಮೀಕ್ಷೆಯನ್ನು ಶೇ.90 ರಷ್ಟು ಗುರಿ ಸಾಧಿಸಿದ್ದು, ನಿಗದಿತ ಸಮಯದಲ್ಲಿ ಮನೆ-ಮನೆ ಆರೋಗ್ಯ ಸಮೀಕ್ಷೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ. 

ಈ ಸಮೀಕ್ಷೆಯು ಕೇವಲ ಲಸಿಕೆಯ ಸ್ಥಿತಿಗತಿಯನ್ನಷ್ಟೇ ತಿಳಿದುಕೊಳ್ಳಲ್ಲದೆ, ಜನರ ಆರೋಗ್ಯ ಸ್ಥಿತಿಗತಿ ತಿಳಿದುಕೊಳ್ಳಲು ಸಹಾಯಕವಾಗಿದೆ. ವೈದ್ಯಕೀಯ ತುರ್ತು ಪರಿಸ್ಥಿತಿಯಲ್ಲಿ ಈ ಸಮೀಕ್ಷಾ ವರದಿ ಸಹಾಯ ಮಾಡಲಿದೆ ಎಂದಿದ್ದಾರೆ. 

ಸಮೀಕ್ಷಾ ವರದಿಯು ಕೊರೋನಾ 3ನೇ ಅಲೆ ಎದುರಿಸಲು ಸಹಾಯ ಮಾಡಲಿದೆ. ಮೂರನೇ ಅಲೆ ಎದುರಿಸಲು ಮುಖ್ಯಮಂತ್ರಿಗಳು ಸಮಿತಿಯನ್ನು ರಚನೆ ಮಾಡಿದ್ದಾರೆ. ಈಗಗಾಲೇ ರೂ.120 ಕೋಟಿ ಬಿಡುಗಡೆಗೂ ಒಪ್ಪಿಗೆ ನೀಡಿದ್ದು, ವೈದ್ಯಕೀಯ ನೆರವಿಗೆ ಈ ಹಣವನ್ನು ಮೀಸಲಿಡಲಾಗಿದೆ. ಜನರು ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕಿದ್ದು, ಜನದಟ್ಟಣೆ ಹೆಚ್ಚಿರುವ ಪ್ರದೇಶಗಳಿಗೆ ಭೇಟಿ ನೀಡುವುದನ್ನು ನಿಯಂತ್ರಿಸಬೇಕು ಎಂದು ಸಲಹೆ ನೀಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com