ಸಮುದಾಯ ಆರೋಗ್ಯ ಸೇವೆಗೆ ಪ್ರತ್ಯೇಕ ಸಿಬ್ಬಂದಿ ಅಗತ್ಯ: ಸಿಎಂ ಬಸವರಾಜ ಬೊಮ್ಮಾಯಿ

ಸಮುದಾಯ ಆರೋಗ್ಯ ಸೇವೆಗೆ ಪ್ರತ್ಯೇಕವಾದ ಸಿಬ್ಬಂದಿ ಅಗತ್ಯವಿದೆ. ಇದಕ್ಕಾಗಿ ರಾಜ್ಯದ ಆರೋಗ್ಯ ಇಲಾಖೆಯಲ್ಲಿ ಪ್ರತ್ಯೇಕ ವೃಂದ ರಚಿಸಬೇಕಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭಾನುವಾರ ಹೇಳಿದ್ದಾರೆ. 
ಆಂಬುಲೆನ್ಸ್‌ಗಳನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸೇವೆಗೆ ಹಸ್ತಾಂತರಿಸಿದ ಸಿಎಂ ಬೊಮ್ಮಾಯಿ
ಆಂಬುಲೆನ್ಸ್‌ಗಳನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸೇವೆಗೆ ಹಸ್ತಾಂತರಿಸಿದ ಸಿಎಂ ಬೊಮ್ಮಾಯಿ

ಬೆಂಗಳೂರು: ಸಮುದಾಯ ಆರೋಗ್ಯ ಸೇವೆಗೆ ಪ್ರತ್ಯೇಕವಾದ ಸಿಬ್ಬಂದಿ ಅಗತ್ಯವಿದೆ. ಇದಕ್ಕಾಗಿ ರಾಜ್ಯದ ಆರೋಗ್ಯ ಇಲಾಖೆಯಲ್ಲಿ ಪ್ರತ್ಯೇಕ ವೃಂದ ರಚಿಸಬೇಕಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭಾನುವಾರ ಹೇಳಿದ್ದಾರೆ. 

ವಿಧಾನಸೌಧದ ಆವರಣದಲ್ಲಿ ಇಂದು ಬೆಳಿಗ್ಗೆ ನಡೆದ ಸಮಾರಂಭದಲ್ಲಿ ಸಿಎಂ ಬೊಮ್ಮಾಯಿಯವರು, ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ 108 ಆರೋಗ್ಯ ಕವಚ ತುರ್ತು ವೈದ್ಯಕೀಯ ‌ಸೇವೆಗೆ ನೂತನ 120 ಆಂಬ್ಯುಲೆನ್ಸ್ ಗಳನ್ನು ಲೋಕಾರ್ಪಣೆ ಮಾಡಿದರು. 

ಬಳಿಕ ಮಾತನಾಡಿದ ಮುಖ್ಯಮಂತ್ರಿಗಳು, ಅಪೌಷ್ಟಿಕತೆಯಿಂದ ಮಕ್ಕಳಲ್ಲಿ ಅಂಧತ್ವ ಸಮಸ್ಯೆ ಕಾಣಿಸಿಕೊಳ್ಳುತ್ತಿರುವ ದೇಶಗಳಲ್ಲಿ ಭಾರತವೂ ಒಂದಾಗಿದೆ. ಇಂತಹ ಸಮಸ್ಯೆಗಳನ್ನು ನೋಡಿದಾಗ ಕರುಳು ಕಿತ್ತು ಬಂದಷ್ಟು ವೇದನೆಯಾಗುತ್ತಿದೆ. ಈ ರೀತಿಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಸಮುದಾಯ ಆರೋಗ್ಯ ಸೇವೆಗೆ ಅಗತ್ಯ ಸಿಬ್ಬಂದಿ ಒದಗಿಸಬೇಕು. ಇದಕ್ಕಾಗಿಯೇ ಸಮುದಾಯ ಆರೋಗ್ಯ ಸೇವೆಯ ಡಿಪ್ಲೊಮಾ ಕೋರ್ಸ್‌ ಆರಂಭಿಸುವ ಅಗತ್ಯವಿದೆ ಎಂದು ಹೇಳಿದರು. 

ಬೆಂಗಳೂರಿನಲ್ಲಿ ಒಂದೇ ಪ್ರಾಧಿಕಾರದ ಅಡಿಯಲ್ಲಿ ಆರೋಗ್ಯ ಸೇವೆಗಳನ್ನು ಒದಗಿಸಬೇಕಿದೆ. ನಗರದಲಿ ಜನಸಾಂದ್ರತೆ ಹೆಚ್ಚಿರುವ ಕಾರಣದಿಂದ ಸೂಕ್ತವಾದ ವ್ಯವಸ್ಥೆ ಮಾಡಬೇಕಿದೆ. ಈ ಕುರಿತು ಮುಂದಿನ ದಿನಗಳಲ್ಲಿ ಗಮನಹರಿಸಲಾಗುವುದು ಎಂದು ತಿಳಿಸಿದರು. 

ಬಹಳ ಹಿಂದಿನಿಂದಲೂ ಆ್ಯಂಬುಲೆನ್ಸ್‌ ವ್ಯವಸ್ಥೆ ಇತ್ತು. ಆದರೆ, ಹಿಂದೆ ರೋಗಿಗಳ ಸಾಗಣೆಗೆ ಮಾತ್ರ ಬಳಕೆಯಾಗುತ್ತಿತ್ತು. ಈಗ ಆ್ಯಂಬುಲೆನ್ಸ್‌ನಲ್ಲೇ ಚಿಕಿತ್ಸೆ ನೀಡುವ ವ್ಯವಸ್ಥೆಯೂ ಇದೆ. ಈ ಸೇವೆ ಮತ್ತಷ್ಟು ಸದೃಢವಾಗಿ ಬೆಳೆಯಬೇಕು. ಆಲಸ್ಯ, ಬೇಜವಾಬ್ದಾರಿತನ ಇಲ್ಲದೆ ಜನರಿಗೆ ಸೇವೆ ನೀಡುವುದನ್ನು ಆ್ಯಂಬುಲೆನ್ಸ್‌ ಸಿಬ್ಬಂದಿ ಮೈಗೂಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಇದೇ ವೇಳೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರನ್ನು ಶ್ಲಾಘಿಸಿರುವ ಅವರು, ಕೋವಿಡ್‌ ನಿರ್ವಹಣೆಯಲ್ಲಿ ಸಚಿವ ಸುಧಾಕರ್‌ ಮತ್ತು ಹಿಂದಿನ ಆರೋಗ್ಯ ಸಚಿವ ಬಿ. ಶ್ರೀರಾಮುಲು ಅತ್ಯುತ್ತಮವಾಗಿ ಕೆಲಸ ಮಾಡಿದ್ದಾರೆ. ಎಲ್ಲಾ ಜಿಲ್ಲೆಗಳಿಗೂ ಭೇಟಿ ನೀಡಿ, ಸೋಂಕು ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಂಡಿದ್ದಾರೆ ಎಂದು ಹೇಳಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com