ಬೆಂಗಳೂರು: ಲಾರಿಗೆ ಆಂಬ್ಯುಲೆನ್ಸ್ ಡಿಕ್ಕಿ; ರೋಗಿ, ವೈದ್ಯ ಸೇರಿ ಮೂವರು ಸ್ಥಳದಲ್ಲಿಯೇ ದುರ್ಮರಣ
ಚಲಿಸುತ್ತಿದ್ದ ಲಾರಿಗೆ ಆಂಬ್ಯುಲೆನ್ಸ್ ಡಿಕ್ಕಿ ಹೊಡೆದ ಪರಿಣಾಮ ರೋಗಿ, ವೈದ್ಯ ಸಹಿತ ಮೂವರು ಸ್ಥಳದಲ್ಲಿಯೇ ದುರ್ಮರಣ ಹೊಂದಿರುವ ಘಟನೆ ಅತ್ತಿಬೆಲೆ ಪೊಲೀಸ್ ಠಾಣೆ ವ್ಯಾಪ್ತಿಯ ನೆರಳೂರು ಗೇಟ್ ಬಳಿ ಗುರುವಾರ ಮುಂಜಾನೆ ಸಂಭವಿಸಿದೆ. ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದಾರೆ.
Published: 17th September 2021 09:23 AM | Last Updated: 17th September 2021 01:38 PM | A+A A-

ಅಪಘಾತದ ಸ್ಥಳದಲ್ಲಿ ಅವಶೇಷಗಳನ್ನು ತೆರವುಗೊಳಿಸುತ್ತಿರುವ ಆರ್ತ್ ಮೂವಿಂಗ್ ವಾಹನದ ಚಿತ್ರ
ಬೆಂಗಳೂರು: ಚಲಿಸುತ್ತಿದ್ದ ಲಾರಿಗೆ ಆಂಬ್ಯುಲೆನ್ಸ್ ಡಿಕ್ಕಿ ಹೊಡೆದ ಪರಿಣಾಮ ರೋಗಿ, ವೈದ್ಯ ಸಹಿತ ಮೂವರು ಸ್ಥಳದಲ್ಲಿಯೇ ದುರ್ಮರಣ ಹೊಂದಿರುವ ಘಟನೆ ಅತ್ತಿಬೆಲೆ ಪೊಲೀಸ್ ಠಾಣೆ ವ್ಯಾಪ್ತಿಯ ನೆರಳೂರು ಗೇಟ್ ಬಳಿ ಗುರುವಾರ ಮುಂಜಾನೆ ಸಂಭವಿಸಿದೆ. ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದಾರೆ.
ಮೃತರನ್ನು ತಮಿಳುನಾಡು ಮೂಲದ ಅನ್ವರ್ ಖಾನ್, ಮಧ್ಯ ಪ್ರದೇಶ ಮೂಲದ ವೈದ್ಯ ಡಾ. ಜಾಧವ್ ಭೂಷಣ್ ಮತ್ತು ಆಂಬ್ಯುಲೆನ್ಸ್ ಡ್ರೈವರ್ ತುಕಾರಾಮ್ ನಾಮದೇವ್ ಎಂದು ಗುರುತಿಸಲಾಗಿದೆ. ಗಾಯಗೊಂಡಿರುವ ನಾಲ್ವರನ್ನು ಆಸ್ಪತ್ರೆಯೊಂದಕ್ಕೆ ಸೇರಿಸಲಾಗಿದೆ. ಆಂಬ್ಯುಲೆನ್ಸ್ ಮುಂಬೈಯಿಂದ ತಮಿಳುನಾಡಿಗೆ ತೆರಳುತಿತ್ತು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನೆರಳೂರು ಗೇಟ್ ಬಳಿ ಲಾರಿಯನ್ನು ಹಿಂದಿಕ್ಕಲು ಹೋದ ಆಂಬ್ಯುಲೆನ್ಸ್ ಚಾಲಕ ನಿಯಂತ್ರಣ ಕಳೆದುಕೊಂಡು ಡಿಕ್ಕಿ ಹೊಡೆಯಲಾಗಿದೆ. ಇದರಿಂದಾಗಿ ಆಂಬ್ಯುಲೆನ್ಸ್ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ದಾರಿಹೋಕರು ಸ್ಥಳಕ್ಕೆ ಧಾವಿಸಿ, ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಪ್ರಾಥಮಿಕ ತನಿಖೆ ಆಧಾರದ ಮೇಲೆ ಅತ್ತಿಬೆಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ತನಿಖೆ ಭಾಗವಾಗಿ ಸಿಸಿಟಿವಿ ದೃಶ್ಯಾವಳಿಗಳನ್ನು ಸಂಗ್ರಹಿಸಿದ್ದಾರೆ.
ಪಾರ್ಶ್ವವಾಯು ಕಾಯಿಲೆಯಿಂದ ಬಳಲುತ್ತಿದ್ದ ಅನ್ವರ್ ಖಾನ್ ಅವರನ್ನು ಮುಂಬೈ ಆಸ್ಪತ್ರೆಯಿಂದ ತಮಿಳುನಾಡಿಗೆ ಕರೆದೊಯ್ಯುತ್ತಿರುವಾಗ ಈ ಅಪಘಾತ ನಡೆದಿರುವುದಾಗಿ ಅವರ ಕುಟುಂಬ ಸದಸ್ಯರು ತಿಳಿಸಿದ್ದಾರೆ. ಈ ಮಧ್ಯೆ ಲಾರಿ ಚಾಲಕ ಸಾರ್ವಜನಿಕರ ಆಕ್ರೋಶದ ಭಯದಿಂದ ಲಾರಿ ಬಿಟ್ಟು ಪಲಾಯನವಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.