ಬೆಂಗಳೂರು: ಐಐಎಸ್ಸಿ ಕ್ಯಾಂಪಸ್ ನಲ್ಲಿ ಮತ್ತೋರ್ವ ವಿದ್ಯಾರ್ಥಿ ಆತ್ಮಹತ್ಯೆ

ಬೆಂಗಳೂರಿನ ಪ್ರತಿಷ್ಠಿತ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ರಿಸರ್ಚ್ ನಲ್ಲಿ ಬಿಎಸ್ ಸಿ ಪದವಿ ವ್ಯಾಸಂಗ ಮಾಡುತ್ತಿದ್ದ 21 ವರ್ಷದ ವಿದ್ಯಾರ್ಥಿಯೊಬ್ಬ ತನ್ನ ಕೊಠಡಿಯಲ್ಲಿ ಮಂಗಳವಾರ ರಾತ್ರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಬೆಂಗಳೂರಿನ ಪ್ರತಿಷ್ಠಿತ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ರಿಸರ್ಚ್ ನಲ್ಲಿ ಬಿಎಸ್ ಸಿ ಪದವಿ ವ್ಯಾಸಂಗ ಮಾಡುತ್ತಿದ್ದ 21 ವರ್ಷದ ವಿದ್ಯಾರ್ಥಿಯೊಬ್ಬ ತನ್ನ ಕೊಠಡಿಯಲ್ಲಿ ಮಂಗಳವಾರ ರಾತ್ರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ವರ್ಷ ಕ್ಯಾಂಪಸ್ ನಲ್ಲಿ ನಡೆಯುತ್ತಿರುವ ಮೂರನೇ ಪ್ರಕರಣ ಇದಾಗಿದೆ.

ವೈಯಕ್ತಿಕ ಸಮಸ್ಯೆಯಿಂದ ಆತ ಮಾನಸಿಕ ಒತ್ತಡದಿಂದ ಬಳಲುತ್ತಿದ್ದ, ಕೆಲ ದಿನ ಚಿಕಿತ್ಸೆ ಪಡೆದಿದ್ದ ಎನ್ನಲಾಗಿದೆ. ಸೆಪ್ಟೆಂಬರ್ 12 ರಂದು ಪಿಎಚ್ ಡಿ ವಿದ್ಯಾರ್ಥಿಯೊಬ್ಬ ತನ್ನ ರೂಮ್ ನಲ್ಲಿ ರಾಸಾಯನಿಕ ಸೇವಿಸಿ ಮೃತಪಟ್ಟ ಬಳಿಕ ವಾರದಲ್ಲಿಯೇ ನಡೆದ ಎರಡನೇ ಪ್ರಕರಣ ಇದಾಗಿದೆ. 

ಐಐಎಸ್ ಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಕೂಡಾ ಆತ್ಮಹತ್ಯೆಗೆ ಯತ್ನಿಸಿದ್ದು,  ಕೆಲ ಸಿಬ್ಬಂದಿ ಕೂಡಲೇ ಸ್ಥಳೀಯ ಆಸ್ಪತ್ರೆಗೆ ಸ್ಥಳಾಂತರಿಸಿ, ತುರ್ತು ಚಿಕಿತ್ಸೆ ಕಲ್ಪಿಸಿದ್ದಾರೆ. ಆಕೆ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಕೌನ್ಸಿಲಿಂಗ್ ನಲ್ಲಿ ಇರುವುದಾಗಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಾರ್ಚ್ 2 ರಂದು 34 ವರ್ಷದ ಪಿಹೆಚ್ ಡಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದ. ಇದು ಈ ವರ್ಷ ನಡೆದ ಮೊದಲ ಆತ್ಮಹತ್ಯೆ ಪ್ರಕರಣವಾಗಿದೆ. ಆತನ ಕೂಡಾ ಮಾನಸಿಕ ಒತ್ತಡಕ್ಕೆ ಒಳಗಾಗಿ ಇಂತಹ ನಿರ್ಧಾರ ಕೈಗೊಂಡಿದ್ದ. ಮಂಗಳವಾರ ಮೃತಪಟ್ಟ ರಿಷಬ್ ಮಿಶ್ರಾಮ್ ರಾಜ್ಯಸ್ಥಾನದ ನಿವಾಸಿಯಾಗಿದ್ದು, ಬಿಎಸ್ ಸಿ ರಿಸರ್ಚ್ ನಲ್ಲಿ ನಾಲ್ಕನೇ ಸೆಮಿಸ್ಟರ್ ನಲ್ಲಿ ವ್ಯಾಸಂಗ ಮಾಡುತ್ತಿದ್ದ ಎನ್ನಲಾಗಿದೆ. 

ಮಂಗಳವಾರ ರಾತ್ರಿ 10-30ರ ಸುಮಾರಿನಲ್ಲಿ ಆತನ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತಕ್ಷಣ ಐಐಎಸ್ ಸಿ ಮ್ಯಾನೇಜ್ ಮೆಂಟ್ ಸದಾಶಿವನಗರ ಪೊಲೀಸ್ ಠಾಣೆಗೆ ಸುದ್ದಿ ಮುಟ್ಟಿಸಿದ್ದಾರೆ. ಪೊಲೀಸರಿಗೆ ಸ್ಥಳದಲ್ಲಿ ಯಾವುದೇ ನೋಟ್ ಸಿಕ್ಕಿಲ್ಲ, ಮ್ಯಾನೇಜ್ ಮೆಂಟ್ ನೀಡಿದ ದೂರಿನ ಆಧಾರದ ಮೇಲೆ ಅಸ್ವಾಭಾವಿಕ ಸಾವು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಯುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com