ಅಕ್ರಮ ವಿದೇಶಿಗರ ಪತ್ತೆಗೆ ವಿಶೇಷ ಕಾರ್ಯಪಡೆ: ಆರಗ ಜ್ಞಾನೇಂದ್ರ

ರಾಜ್ಯದಲ್ಲಿ ಅಕ್ರಮ ವಿದೇಶಿಗರ ಪತ್ತೆಗೆ ವಿಶೇಷ ಕಾರ್ಯಪಡೆ ರಚನೆ ಮಾಡಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಗುರುವಾರ ಹೇಳಿದ್ದಾರೆ.
ವಿಧಾನಪರಿಷತ್ ನಲ್ಲಿ ಲಕ್ಷ್ಮಣ್ ಸವದಿ ಹಾಗೂ ಶಿವರಾಮ್ ಹೆಬ್ಬಾರ್
ವಿಧಾನಪರಿಷತ್ ನಲ್ಲಿ ಲಕ್ಷ್ಮಣ್ ಸವದಿ ಹಾಗೂ ಶಿವರಾಮ್ ಹೆಬ್ಬಾರ್

ಬೆಂಗಳೂರು: ರಾಜ್ಯದಲ್ಲಿ ಅಕ್ರಮ ವಿದೇಶಿಗರ ಪತ್ತೆಗೆ ವಿಶೇಷ ಕಾರ್ಯಪಡೆ ರಚನೆ ಮಾಡಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಗುರುವಾರ ಹೇಳಿದ್ದಾರೆ. 

ರಾಜ್ಯದಲ್ಲಿ ಅಕ್ರಮ ಬಾಂಗ್ಲಾ ವಲಸಿಗರು ಮತ್ತು ರೊಹಿಂಗ್ಯಾ ಮುಸ್ಲಿಮರನ್ನು ಪತ್ತೆ ಹಚ್ಚುವ ವಿಚಾರವಾಗಿ ಗುರುವಾರ ಪ್ರಶ್ನೋ ತ್ತರ ಅವಧಿಯಲ್ಲಿ ಬಿಜೆಪಿಯ ಪಿ.ಎಂ. ಮುನಿರಾಜು ಗೌಡ ಅವರು ಕೇಳಿದ ಪ್ರಶ್ನೆಗೆ ಗೃಹ ಸಚಿವರು ಈ ಉತ್ತರ ನೀಡಿದರು. 

ಈ ವಿಚಾರದಲ್ಲಿ ಸರ್ಕಾರ ಗಂಭೀರವಾಗಿದ್ದು, ಬದ್ಧತೆ ಹೊಂದಿದೆ. ವಲಸಿಗರ ಮೇಲೆ ಕಣ್ಗಾವಲು ಇರಿಸಲಾಗುತ್ತಿದೆ. ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿರುವ ವಿದೇಶಿಯರನ್ನು ಗುರುತಿಸಿ ಅಗತ್ಯ ಕ್ರಮ ಕೈಗೊಳ್ಳಲು ಪೊಲೀಸರು ಮತ್ತು ಆಂತರಿಕ ಭದ್ರತ ವಿಭಾಗಕ್ಕೆ ಸ್ಪಷ್ಟ ನಿರ್ದೇಶನ ನೀಡಲಾಗಿದೆ. ಇದಕ್ಕಾಗಿ ವಿಶೇಷ ಕಾರ್ಯಾಚರಣೆ ನಡೆಸಲು ಸೂಚಿಸಲಾಗಿದೆ ಎಂದು ಹೇಳಿದರು. 

ರಾಜ್ಯದಲ್ಲಿ ಅಕ್ರಮವಾಗಿ ಯಾವುದೇ ವಿದೇಶಿ ನಾಗರಿಕರು ಅಥವಾ ರೊಹಿಂಗ್ಯಾ ಮುಸ್ಲಿಮರು ಮಸೀದಿ ಅಥವಾ ಮದ್ರಸಗಳಲ್ಲಿ ವಾಸವಾಗಿರುವ ಪ್ರಕರಣ ವರದಿಯಾಗಿಲ್ಲ. ಆದರೆ ಇಂಥದ್ದನ್ನು ನಿಯಂತ್ರಿಸಲು ಎಲ್ಲ ನಗರ ಮತ್ತು ಜಿಲ್ಲಾ ಮಟ್ಟದಲ್ಲಿ ಸ್ಪೆಷಲ್‌ ಟಾಸ್ಕ್ ಫೋರ್ಸ್‌ ರಚಿಸಲಾಗಿದೆ. ಇಂಥವರ ಪತ್ತೆಗೆ ಸ್ಥಳೀಯ ಪೊಲೀಸರು ಮತ್ತು ವಿಶೇಷ ಕಾರ್ಯಪಡೆಯ ಸಿಬಂದಿ ನಿರಂತರ ಕಾರ್ಯಪ್ರವೃತ್ತರಾಗಿರುತ್ತಾರೆ ಎಂದು ತಿಳಿಸಿದರು.

ಜೀರೋ ಟ್ರಾಫಿಕ್
ಇದೇ ವೇಳೆ ವಿವಿಐಪಿಗಳಿಗೆ ನೀಡಲಾಗುವ ಬೆಂಗಾವಲು ಪಡೆ ಹಾಗೂ ಜೀರೋ ಟ್ರಾಫಿಕ್ ವ್ಯವಸ್ಥೆಯನ್ನು ಬೆಂಗಳೂರು ಶಾಸಕರು ಬಳಕೆ ಮಾಡುತ್ತಿರುವ ಕುರಿತ ಪ್ರಶ್ನೆಗೆ ಉತ್ತರಿಸಿರುವ ಅವರು, ಭದ್ರತೆ ಕಾರಣದಿಂದಾಗಿ ವಿಐಪಿ ಹಾಗೂ ವಿವಿಐಪಿಗಳಿಗೆ ಜೀರೋ ಟ್ರಾಫಿಕ್ ವ್ಯವಸ್ಥೆಯನ್ನು ನೀಡಲಾಗಿದೆ. ಅದನ್ನು ಶಾಸಕರು ಬಳಕೆ ಮಾಡುವಂತಿಲ್ಲ. ಝೀರೋ ಟ್ರಾಫಿಕ್‌ ಎಂಬ ಪದದ ಬಳಕೆಯೇ ತಪ್ಪು. ಅಂತಹ ವ್ಯವಸ್ಥೆಯೇ ಇಲಾಖೆಯಲ್ಲಿ ಇಲ್ಲ. ತುರ್ತು ಸಂದರ್ಭದಲ್ಲಿ ಮಾತ್ರ ತಡೆರಹಿತ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ. ಆಗಸ್ಟ್‌ 4ರಂದು ಸಚಿವೆ ಶಶಿಕಲಾ ಜೊಲ್ಲೆ ಅವರು ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಬರಲು ವಿಮಾನ ನಿಲ್ದಾಣದಿಂದ ತಡೆರಹಿತ ಸಂಚಾರಕ್ಕೆ ಅವಕಾಶ ನೀಡಲಾಗಿತ್ತು. ಝೀರೋ ಟ್ರಾಫಿಕ್‌ ಹೆಸರಿನಲ್ಲಿ ಅವರಿಗೆ ಯಾವುದೇ ಸೌಲಭ್ಯ ನೀಡಿರಲಿಲ್ಲ. 2019ರಲ್ಲಿ ಸುಪ್ರೀಂಕೋರ್ಟ್‌ ಆದೇಶದಂತೆ 19 ಶಾಸಕರಿಗೆ ಅಗತ್ಯ ಭದ್ರತೆ ನೀಡಿ ವಿಧಾನಸೌಧಕ್ಕೆ ಕರೆತರಲಾಗಿತ್ತು. ಆಗ ಯಾವುದೇ ರೀತಿಯಲ್ಲಿ ನಿಯಮಗಳ ಉಲ್ಲಂಘನೆ ಆಗಿರಲಿಲ್ಲ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com