ಗಾಯದ ಮೇಲೆ ಮೆಟ್ರೋ ಬರೆ: ಪ್ರಯಾಣಿಕರ ಗೋಳು ಕೇಳುವವರು ಯಾರು..?
ಸಂಚಾರ ದಟ್ಟಣೆಯ ಸಂದರ್ಭದಲ್ಲಿ ಮೆಟ್ರೋ ಬಳಕೆ ವರದಾನವಾಗಿ ಪರಿಣಮಿಸಿದೆ. ನಿಗದಿತ ಸಮಯದಲ್ಲಿ ತಲುಪಬೇಕಾದ ಸ್ಥಳವನ್ನು ತಲುಪಬಹುದು. ಇದರಿಂದ ಸಮಾಜದ ಎಲ್ಲ ದುಡಿಯುವ ವರ್ಗಗಳು ಈ ಸಾರಿಗೆಯನ್ನು ಬಳಸುತ್ತಿರುವುದು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದರ ಜೊತೆಗೆ ಕೆಲವು ಸಂದರ್ಭಗಳಲ್ಲಿ ಹೊರೆಯಾಗಿಯೂ ಪರಿಣಮಿಸಿದೆ.
Published: 18th September 2021 09:38 PM | Last Updated: 18th September 2021 09:38 PM | A+A A-

ನಮ್ಮ ಮೆಟ್ರೋ ಕಾರ್ಡ್
ಬೆಂಗಳೂರು: ಸಂಚಾರ ದಟ್ಟಣೆಯ ಸಂದರ್ಭದಲ್ಲಿ ಮೆಟ್ರೋ ಬಳಕೆ ವರದಾನವಾಗಿ ಪರಿಣಮಿಸಿದೆ. ನಿಗದಿತ ಸಮಯದಲ್ಲಿ ತಲುಪಬೇಕಾದ ಸ್ಥಳವನ್ನು ತಲುಪಬಹುದು. ಇದರಿಂದ ಸಮಾಜದ ಎಲ್ಲ ದುಡಿಯುವ ವರ್ಗಗಳು ಈ ಸಾರಿಗೆಯನ್ನು ಬಳಸುತ್ತಿರುವುದು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದರ ಜೊತೆಗೆ ಕೆಲವು ಸಂದರ್ಭಗಳಲ್ಲಿ ಹೊರೆಯಾಗಿಯೂ ಪರಿಣಮಿಸಿದೆ.
ಮೆಟ್ರೋ ಸಾರಿಗೆಯಲ್ಲಿ ಟೋಕನ್ ಪಡೆದು ಅಥವಾ ಮಾಸಿಕ ಪಾಸ್ ಸ್ಮಾರ್ಟ್ ಕಾರ್ಡ್ ಪಡೆದು ಪಯಣಿಸಬೇಕು. ದ್ವಾರದಲ್ಲಿ ಟೋಕನ್ / ಸ್ಮಾರ್ಟ್ ಕಾರ್ಡ್ ತೋರಿಸಿದರೆ ಮಾತ್ರ ಫ್ಲಾಟ್ ಫಾರಂಗೆ ಹೋಗುವ ಕಿರುದ್ವಾರ ತೆರೆದುಕೊಳ್ಳುತ್ತದೆ. ನಿಗದಿತ ಸ್ಥಳ ತಲುಪಿದ ನಂತರವೂ ಹೊರ ಹೋಗಬೇಕಾದರೆ ಟೋಕನ್ ಗಳನ್ನು ಕಿರುದ್ವಾರದ ಮೇಲ್ಭಾಗದಲ್ಲಿರುವ ಕಿಂಡಿಯಲ್ಲಿ ಹಾಕಬೇಕು. ಸ್ಮಾರ್ಟ್ ಕಾರ್ಡ್ ಹೊಂದಿರುವವರು ಕಿರುದ್ವಾರದ ಮೇಲುಗಡೆ ಸೋಂಕಿಸಿದರೂ ಪಯಣದ ಹಣ ಸ್ವಯಂಚಾಲಿತವಾಗಿ ಮುರಿದುಕೊಳ್ಳುತ್ತದೆ.
ಇದನ್ನೂ ಓದಿ: ಬೆಂಗಳೂರಿಗರಿಗೆ ಗುಡ್ನ್ಯೂಸ್: ನಾಳೆಯಿಂದ ನಮ್ಮ ಮೆಟ್ರೋ ಸಂಚಾರ ಅವಧಿ ವಿಸ್ತರಣೆ
ಸಾಮಾನ್ಯವಾಗಿ ಹೊಸದಾಗಿ ಮೆಟ್ರೋದಲ್ಲಿ ಚಲಿಸುವವರಿಗೆ ಆರಂಭದಲ್ಲಿ ಇವೆಲ್ಲ ಗೊತ್ತಿರುವುದಿಲ್ಲ. ಮೆಟ್ರೋ ಸ್ಟೇಷನ್ ಗಳಲ್ಲಿ ಇದನ್ನು ವಿವರವಾಗಿಯೂ ಹೇಳುವುದಿಲ್ಲ. ಆದ್ದರಿಂದ ಕೆಲವರು ಟೋಕನ್ ಕಡೆ ಹೆಚ್ಚು ಗಮನ ನೀಡದೇ ನಿಗದಿತ ಸ್ಥಳ ತಲುಪುವ ಮುನ್ನವೇ ಕಳೆದುಕೊಂಡು ಫಜೀತಿಗೆ ಸಿಲುಕುತ್ತಿದ್ದಾರೆ.
ಟೋಕನ್ ಕಳೆದುಕೊಂಡವರು ನಿಗದಿತ ಸ್ಥಳ ತಲುಪಿದ ನಂತರ ಕಿರುದ್ವಾರದ ಮುಂದೆ ಸಪ್ಪೆಮುಖ ಹೊತ್ತು ಕಂಗಾಲಾಗಿ ನಿಲ್ಲುತ್ತಾರೆ. ಪಕ್ಕದಲ್ಲಿಯೇ ಇರುವ ಸ್ಮಾರ್ಟ್ ಕಾರ್ಡ್ ವಿತರಣೆ/ ರೀ ಛಾರ್ಜ್ ಮಾಡುವರ ಬಳಿ ವಿಚಾರಿಸಿದಾಗ ಕಡ್ಡಾಯವಾಗಿ 250 ರೂ. ಕಟ್ಟಲು ಹೇಳುತ್ತಾರೆ. ಅವರು ಹಿಂದಿನ ಮೆಟ್ರೋ ನಿಲ್ದಾಣದಲ್ಲಿ ರೈಲು ಹತ್ತಿದ್ದರೂ ರೈಲು ಹೊರಟ ಸ್ಥಳದಿಂದ ತಗುಲುವ ಹಣವನ್ನು ಕಟ್ಟಬೇಕು. ಜೊತೆಗೆ 200 ರೂಗಳನ್ನು ಹೆಚ್ಚುವರಿಯಾಗಿ ದಂಡವಾಗಿ ಪಾವತಿಸಲೇಬೇಕು.
ಇದನ್ನೂ ಓದಿ: ಬೆಳ್ಳಂದೂರು ಫ್ಲೈ ಓವರ್ ಬೀಳಿಸುವ ಯೋಜನೆ ಇಲ್ಲ: ಬಿಎಂಆರ್ ಸಿಎಲ್
ಕೊರೊನಾ ಕಾಲ ಆರಂಭವಾದ ನಂತರ ಗ್ರಾಮೀಣ ಪ್ರದೇಶ, ನಗರ ಪ್ರದೇಶ ಎಂಬ ಭೇದವಿಲ್ಲದೇ ಬಹುತೇಕರು ಆರ್ಥಿಕ ಮುಗ್ಗಟ್ಟಿನಿಂದ ಬಳಲುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಪ್ರತಿ ನೂರು ರೂಪಾಯಿ ಕೂಡ ಅಮೂಲ್ಯ. ಕೆಲವರ ಬಳಿ ದಂಡ ಕಟ್ಟುವುದಕ್ಕೂ ಹಣ ಇರುವುದಿಲ್ಲ. ಇರುವ ಸ್ಥಿತಿ ಹೇಳಿದರೂ ಸಂಸ್ಥೆ ರೂಪಿಸಿದ ನಿಯಮಕ್ಕೆ ಬದ್ಧರಾಗಿರಬೇಕಾದ ಸಿಬ್ಬಂದಿ ಕೇಳುವುದಿಲ್ಲ.
ಇಂಥ ಸಂದರ್ಭದಲ್ಲಿ ವಾದ – ವಿವಾದ ಸಾಮಾನ್ಯ. ನಿತ್ಯ ಇಂಥ ದೃಶ್ಯಗಳು ಕಾಣುತ್ತಲೇ ಇರುತ್ತವೆ. ಇತ್ತೀಚೆಗೆ ತಮ್ಮ ಸ್ಮಾರ್ಟ್ ಕಾರ್ಡ್ ಅನ್ನು ಆಕಸ್ಮಿಕವಾಗಿ ಕಳೆದುಕೊಂಡು ಕೊಟ್ರೇಶ್ ಎಂಬುವರು ಪಯಣದ ಹಣವನ್ನಷ್ಟೇ ಕಟ್ಟಿಸಿಕೊಳ್ಳಿ ಎಂದು ಪರಿಪರಿಯಾಗಿ ಹೇಳಿದರೂ ಮೆಟ್ರೋ ಸಿಬ್ಬಂದಿ/ ಅಧಿಕಾರಿ ಕೇಳಲಿಲ್ಲ. ಸಂಸ್ಥೆ ಮಾಡಿದ ನಿಯಮ ಪಾಲಿಸಲೇಬೇಕು ಎಂದು ಹೇಳಿದರು.
ಇದನ್ನೂ ಓದಿ: ನಮ್ಮ ಮೆಟ್ರೋ ಸೇವೆಯನ್ನು ಬೆಳಗ್ಗೆ 5 ರಿಂದ ರಾತ್ರಿ 10 ರವರೆಗೆ ವಿಸ್ತರಿಸಲು ಸಂಸದ ಪಿಸಿ ಮೋಹನ್ ಒತ್ತಾಯ
ಇಂಥ ಸಂದರ್ಭಗಳಲ್ಲಿ ದಂಡ ಕಟ್ಟಿಸಿಕೊಳ್ಳದೇ ಪಯಣದ ಶುಲ್ಕವನ್ನಷ್ಟೇ ಕಟ್ಟಿಸಿಕೊಂಡು ಟೋಕನ್ / ಸ್ಮಾರ್ಟ್ ಕಾರ್ಡ್ ಕಳೆದುಕೊಂಡವರನ್ನು ಹೊರಗೆ ಕಳುಹಿಸುವ ಅಧಿಕಾರವನ್ನು ಬಿ.ಎಂ.ಆರ್.ಸಿ.ಎಲ್. ನಿಲ್ದಾಣಗಳಲ್ಲಿರುವ ತನ್ನ ಸಿಬ್ಬಂದಿಗೆ ನೀಡಬೇಕಾದ ಅಗತ್ಯವಿದೆ.
ಇದಾಗದಿದ್ದರೆ ಟೋಕನ್ / ಸ್ಮಾರ್ಟ್ ಕಾರ್ಡ್ ಕಳೆದುಕೊಂಡವರ ಬಳಿ ದಂಡ ಕಟ್ಟುವಷ್ಟು ಹಣ ಇಲ್ಲದಿದ್ದರೆ ಮುಜುಗರಕ್ಕೆ ಸಿಲುಕಿ ಮಾನಸಿಕವಾಗಿ ಬಳಲುತ್ತಾರೆ. ಸಿಬ್ಬಂದಿಯೊಂದಿಗೆ ವಾದಕ್ಕಿಳಿಯುವ ಇವರನ್ನು ಹೋಗಿ ಬರುವವರೆಲ್ಲ ದೃಷ್ಟಿಸಿ ನೋಡುವುದರಿಂದಲೂ ಸಲ್ಲದ ಮುಜುಗರಕ್ಕೆ ಒಳಗಾಗುತ್ತಾರೆ. ಇಂಥ ಸನ್ನಿವೇಶಗಳನ್ನು ತಪ್ಪಿಸಲು ಬಿ.ಎಂ.ಆರ್.ಸಿ.ಎಲ್ ಕ್ರಮ ತೆಗೆದುಕೊಳ್ಳಬೇಕಾದ ಅಗತ್ಯವಿದೆ.
ವರದಿ: ಕುಮಾರ ರೈತ