ಸಿಜೆಐ ಎನ್ ವಿ ರಮಣ
ಸಿಜೆಐ ಎನ್ ವಿ ರಮಣ

ನ್ಯಾಯಮೂರ್ತಿ ಶಾಂತನಗೌಡರ್ ನಿಧನದಿಂದ ನ್ಯಾಯಾಂಗಕ್ಕೆ ದೊಡ್ಡ ನಷ್ಟ: ಸಿಜೆಐ ಎನ್ ವಿ ರಮಣ

ನ್ಯಾಯಮೂರ್ತಿ ದಿವಂಗತ ಮೋಹನ ಎಂ. ಶಾಂತನಗೌಡರ್ ಅವರ ನಿಧನದಿಂದ ನ್ಯಾಯಾಂಗಕ್ಕೆ ದೊಡ್ಡ ನಷ್ಟವಾಗಿದೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ಹೇಳಿದ್ದಾರೆ.

ಬೆಂಗಳೂರು: ನ್ಯಾಯಮೂರ್ತಿ ದಿವಂಗತ ಮೋಹನ ಎಂ. ಶಾಂತನಗೌಡರ್ ಅವರ ನಿಧನದಿಂದ ನ್ಯಾಯಾಂಗಕ್ಕೆ ದೊಡ್ಡ ನಷ್ಟವಾಗಿದೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ಹೇಳಿದ್ದಾರೆ.

ಶನಿವಾರ ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ರಾಜ್ಯ ವಕೀಲರ ಪರಿಷತ್ತು ಏರ್ಪಡಿಸಿದ್ದ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ದಿವಂಗತ ಮೋಹನ ಎಂ. ಶಾಂತನಗೌಡರ್ ಅವರ ನುಡಿನಮನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು, 'ನ್ಯಾಯಮೂರ್ತಿ ದಿವಂಗತ ಮೋಹನ ಎಂ. ಶಾಂತನಗೌಡರ್ ಅವರನ್ನು ಅವರನ್ನು ಕಳೆದುಕೊಂಡು ನ್ಯಾಯಾಂಗಕ್ಕೆ ದೊಡ್ಡ ನಷ್ಟವಾಗಿದೆ. ಅವರ ಸಾಮಾನ್ಯ ಹಾಗೂ ಸರಳ ನಡತೆ ಎಲ್ಲರನ್ನು ಆಕರ್ಷಿಸುತ್ತಿತ್ತು ಎಂದು ಹೇಳಿದರು. 

'ಒಮ್ಮೆ ನನ್ನ ಉಂಗುರದಲ್ಲಿದ್ದ ಕಲ್ಲು ಕಳೆದುಹೋಗಿತ್ತು. ಅದನ್ನು ಹುಡುಕಲು ಅವರು ಸಾಕಷ್ಟು ಪ್ರಯತ್ನ ಮಾಡಿದ್ದರು. ಕೊನೆಗೆ ಅವರೇ ಅದನ್ನು ಹುಡುಕಿ ಕೊಟ್ಟಿದ್ದರು. ಅದು ಸಿಕ್ಕಿದ್ದರಿಂದ ಮತ್ತೆ ನಾನು ನನ್ನ ಉಂಗುರಕ್ಕೆ ಹಾಕಿಕೊಂಡಿದ್ದೇನೆ’ ಎಂದು ನೆನಪು ಮೆಲುಕು ಹಾಕಿದರು.

ಮಂಕುತಿಮ್ಮನ ಕಗ್ಗ ಹಾಡಿದ ಸಿಜೆಐ
ಇದೇ ವೇಳೆ ಕಾರ್ಯಕ್ರಮದಲ್ಲಿ ಮಂಕುತಿಮ್ಮನ ಕಗ್ಗ ಹಾಡಿದ ಸಿಜೆಐ ರಮಣ ಅವರು, ಮೋಹನ ಎಂ. ಶಾಂತನಗೌಡರ್ ಅವರನ್ನು ಕಳೆದುಕೊಂಡಿದ್ದೇವೆ. ಅವರ ಕುಟುಂಬಕ್ಕೆ ಶಾಂತಿ ಸಿಗಲಿ, ನೋವು ಬರಿಸುವ ಶಕ್ತಿ ನೀಡಲಿ ಎಂದೂ ಹೇಳಿದರು.

ಅವರದ್ದು ಜೀವಂತ ವ್ಯಕ್ತಿತ್ವ
ಇನ್ನು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾತನಾಡಿ, 'ಮೋಹನ ಶಾಂತನಗೌಡರ್ ಅವರಿಗೆ ಶ್ರದ್ಧಾಂಜಲಿ ಸಮಾರಂಭ ಮಾಡುತ್ತೇವೆ ಎಂದು ನಾನು ಅಂದುಕೊಂಡಿರಲಿಲ್ಲ. ಅವರು ಜೀವಂತವಿರುವ ವ್ಯಕ್ತಿತ್ವ, ನಾನೊಬ್ಬ ಜಸ್ಟೀಸ್‌ ಎಂದು ಅವರು ಎಂದಿಗೂ ತೋರಿಸಿಕೊಳ್ಳುತ್ತಿರಲಿಲ್ಲ. ಶಾಲಾ ಕಾಲೇಜಿನ ದಿನಗಳಿಂದಲೂ ನಾನು ಅವರನ್ನು ಬಲ್ಲೆ. ನಮ್ಮ ತಂದೆ, ಅವರ ತಂದೆ ಸ್ನೇಹಿತರು. ಅವರು ದೊಡ್ಡ ಹುದ್ದೆಗೆ ತಲುಪಿದರೂ ಅವರ ವ್ಯಕ್ತಿತ್ವದಲ್ಲಿ ಎಂದಿಗೂ ಬದಲಾವಣೆ ಆಗಿರಲಿಲ್ಲ. ಅವರ ಸರಳತೆ ಎಲ್ಲರಿಗೂ ಮಾದರಿ. ಅವರಿಂದ ಕಲಿಯಬೇಕಾದ್ದು ಬಹಳಷ್ಟಿತ್ತು, ಅವರು ಸಾಮಾನ್ಯ ಜನರ ಜಡ್ಜ್. ಅವರ ಆದೇಶಗಳು ನ್ಯಾಯದ ಪರವಾಗಿ, ಸಾಮಾನ್ಯ ಜನರ ಪರವಾಗಿ ಇರುತ್ತಿತ್ತು ಎಂದೂ ಹೇಳಿದರು.

‘ಒಮ್ಮೆ ದೆಹಲಿಗೆ ಹೋದಾಗ ಅವರ ಮನೆಯಲ್ಲಿ ನನಗೆ ಜೋಳದ ರೊಟ್ಟಿ ಊಟ ಬಡಿಸಿದ್ದರು. ಅವರು ಹೃದಯದಿಂದ ಕನ್ನಡಿಗರಾಗಿದ್ದರು. ಅವರ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗಬೇಕು. ಅವರ ಕೆಲಸದಿಂದ ಅವರು ಶಾಶ್ವತವಾಗಿ ಉಳಿಯುತ್ತಾರೆ. ಕರ್ನಾಟಕ ಬಾರ್ ಅಸೋಸಿಯೇಷನ್ ಸಾಕಷ್ಟು ನ್ಯಾಯಮೂರ್ತಿಗಳನ್ನು ದೇಶಕ್ಕೆ ಕೊಟ್ಟಿದೆ. ಅದರಲ್ಲಿ ಮೋಹನ ಶಾಂತನಗೌಡರ್ ಕೂಡಾ ಒಬ್ಬರು. ಸಾಧಕನಿಗೆ ಸಾವು ಅಂತ್ಯವಲ್ಲ. ಅವರು ಸಾವು ಮೀರಿದವರು. ಅವರ ಸಾಧನೆ ಜೀವಂತವಾಗಿರುತ್ತದೆ. ಯುವ ವಕೀಲರಿಗೆ ಅವರ ಜೀವನ ಮಾದರಿ’ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನ್ಯಾಯಮೂರ್ತಿಗಳಾದ ನಜೀರ್, ಎ.ಎಸ್. ಬೋಪಣ್ಣ, ಅಭಯ್ ಶ್ರೀನಿವಾಸ್ ಓಕಾ, ಬಿ.ವಿ. ನಾಗರತ್ನ, ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಪ್ರಭಾರ) ಸತೀಶ್ ಚಂದ್ರ ಶರ್ಮಾ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ, ಅಡ್ವೋಕೇಟ್ ಜನರಲ್ ಪ್ರಭುಲಿಂಗ ನಾವದಗಿ ಪುಷ್ಪ ನಮನ ಸಲ್ಲಿಸಿದರು.

ಸುಪ್ರೀಂ ಸಿಜೆಐ ಜೊತೆ ಸಿಎಂ ಚರ್ಚೆ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎಂ.ವಿ ರಮಣಾ ಅವರನ್ನು ಸೌಹಾರ್ದಯುತ ಭೇಟಿ ಮಾಡಿ ಮಾತುಕತೆ ನಡೆಸಿದರು. ರಾಜ್ಯಕ್ಕೆ ಭೇಟಿ ನೀಡಿರುವ ಮುಖ್ಯ ನ್ಯಾಯಮೂರ್ತಿ ಎಂ.ವಿ ರಮಣಾ ಅವರನ್ನು ಖಾಸಗಿ ಹೋಟೆಲ್‌ನಲ್ಲಿ ಭೇಟಿ ಮಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮುಖ್ಯನ್ಯಾಯಮೂರ್ತಿಗಳಿಗೆ ಪೇಟ ತೊಡಿಸಿ ಸನ್ಮಾನಿಸಿ ಸ್ಮರಣಿಕೆಯನ್ನು ನೀಡಿದರು. ಈ ಸಂದರ್ಭದಲ್ಲಿ ಸಚಿವ ಕೆ. ಸುಧಾಕರ್, ಮುಖ್ಯಮಂತ್ರಿಗಳ ಪ್ರಧಾನಿ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್, ರಾಜ್ಯದ ಅಡ್ವಕೇಟ್ ಜನರಲ್ ಪ್ರಭುಲಿಂಗ ನಾವಡಗಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

Related Stories

No stories found.

Advertisement

X
Kannada Prabha
www.kannadaprabha.com