ಥಲಸ್ಸೀಮಿಯಾ ರೋಗಿಗಳಿಗೆ ಕಿಲೇಷನ್ ಔಷಧ, ರಕ್ತ ಪೂರೈಕೆ: ಸರ್ಕಾರಕ್ಕೆ ನಿರ್ದೇಶನ ಕೋರಿ ಹೈಕೋರ್ಟಿಗೆ ಮನವಿ

ಥಲಸ್ಸೀಮಿಯಾ ರೋಗಿಗಳಿಗೆ ಕಿಲೇಷನ್ ಔಷಧ, ಸೂಕ್ತವಾದ ರಕ್ತ ಪೂರೈಕೆ ಮತ್ತು ಕೋವಿಡ್ ಲಸಿಕೆಯನ್ನು ತುರ್ತಾಗಿ ಪೂರೈಕೆ ಮಾಡಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಬೆಂಗಳೂರಿನ ಥಲೇಸ್ಸೀಮಿಯಾ ಮತ್ತು ಸಿಕಲ್ ಸೆಲ್ ಸೊಸೈಟಿ ಸಾರ್ವಜನಿಕ ಹಿತಾಸಕ್ತಿ ಮನವಿ ಸಲ್ಲಿಸಿದೆ. ಇದು ಶೀಘ್ರದಲ್ಲೇ ವಿಚಾರಣೆಗೆ ಬರಲಿದೆ.
ಕಿಲೇಷನ್ ಔಷಧ (ಸಂಗ್ರಹ ಚಿತ್ರ)
ಕಿಲೇಷನ್ ಔಷಧ (ಸಂಗ್ರಹ ಚಿತ್ರ)

ಬೆಂಗಳೂರು: ಥಲಸ್ಸೀಮಿಯಾ ರೋಗಿಗಳಿಗೆ ಕಿಲೇಷನ್ ಔಷಧ, ಸೂಕ್ತವಾದ ರಕ್ತ ಪೂರೈಕೆ ಮತ್ತು ಕೋವಿಡ್ ಲಸಿಕೆಯನ್ನು ತುರ್ತಾಗಿ ಪೂರೈಕೆ ಮಾಡಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಬೆಂಗಳೂರಿನ ಥಲೇಸ್ಸೀಮಿಯಾ ಮತ್ತು ಸಿಕಲ್ ಸೆಲ್ ಸೊಸೈಟಿ ಸಾರ್ವಜನಿಕ ಹಿತಾಸಕ್ತಿ ಮನವಿ ಸಲ್ಲಿಸಿದೆ. ಇದು ಶೀಘ್ರದಲ್ಲೇ ವಿಚಾರಣೆಗೆ ಬರಲಿದೆ.

ವಕೀಲ್ ಎನ್ ಗೌತಮ್ ರಘುನಾಥ್ ಅವರ ಮೂಲಕ ಮನವಿ ಸಲ್ಲಿಸಲಾಗಿದೆ. ಥಲಸ್ಸೀಮಿಯಾ, ರಕ್ತಕ್ಕೆ ಸಂಬಂಧಿಸಿದ ರೋಗವಾಗಿದೆ. ಅಂಗವೈಕಲ್ಯ ಕಾಯಿದೆ ಹಕ್ಕು 2016ರ ವ್ಯಾಪ್ತಿಯಲ್ಲಿ ರೋಗಿಗೆ ಸೌಲಭ್ಯ ಕಲ್ಪಿಸುವುದು ರಾಜ್ಯ ಸರ್ಕಾರದ ಕರ್ತವ್ಯವಾಗಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ. ಥಲಸ್ಸೀಮಿಯಾ ಚಿಕಿತ್ಸೆಗೆ ಬಳಸಲಾಗುತ್ತಿದ್ದ ಕಿಲೇಷನ್ ಔಷಧವನ್ನು ಸರ್ಕಾರ ಪೂರೈಸುತ್ತಿತ್ತು. ಆದರೆ, ಇದ್ದಕ್ಕಿದ್ದಂತೆ ಔಷಧ ಪೂರೈಕೆ ಬಂದ್ ಮಾಡಿರುವ ಸರ್ಕಾರವು ಈ ಸಂಬಂಧ ಯಾವುದೇ ಕ್ರಮಕೈಗೊಂಡಿಲ್ಲ. ಔಷಧ ಪೂರೈಕೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಹಾಗೂ ರಾಜ್ಯ ಸರ್ಕಾರಕ್ಕೆ ಪದೇಪದೇ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಮನವಿಯಲ್ಲಿ ವಿವರಿಸಲಾಗಿದೆ.

ಕರ್ನಾಟಕದಲ್ಲಿ 17 ಸಾವಿರ ಥಲಸ್ಸೀಮಿಯಾ ರೋಗಿಗಳಿದ್ದು, ಜೀವ ಉಳಿಸುವ ಈ ಔಷಧ ಪೂರೈಕೆಯಾಗದಿರುವುದರಿಂದ ಅವರ ಬದುಕು ಅಪಾಯದಲ್ಲಿದೆ. ರಾಜ್ಯ ಸರ್ಕಾರ ಕ್ರಮಕೈಗೊಳ್ಳದಿರುವುದರಿಂದ ನ್ಯಾಯಾಲಯದ ಕದ ತಟ್ಟಲಾಗಿದೆ. ಮುಕ್ತ ಮಾರುಕಟ್ಟೆಯಲ್ಲಿ ಕಿಲೇಷನ್ ಔಷಧ ದೊರೆಯುತ್ತಿದ್ದು, ಪ್ರತಿ ದಿನ ರೋಗಿಯೊಬ್ಬರು 1 ಸಾವಿರದಿಂದ 1,500 ರೂಪಾಯಿ ವೆಚ್ಚ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.

ಥಲಸ್ಸೀಮಿಯಾ ರೋಗಿಗಳ ದೃಷ್ಟಿಯಿಂದ ಕಿಲೇಷನ್ ಔಷಧವನ್ನು ರಾಜ್ಯದ ಎಲ್ಲಾ ಆಸ್ಪತ್ರೆಗಳಲ್ಲಿ ಅನಿಯಂತ್ರಿತವಾಗಿ ಉಚಿತವಾಗಿ ಧಕ್ಕುವಂತೆ ಆದೇಶ ಮಾಡಬೇಕು. ಥಲಸ್ಸೀಮಿಯಾ ರೋಗಿಗಳಿಗೆ ಅಗತ್ಯವಾದಷ್ಟು, ಸುರಕ್ಷಿತ, ಉಚಿತ ಮತ್ತು ಸೂಕ್ತ ಸಂದರ್ಭದಲ್ಲಿ ರಕ್ತ ಪೂರೈಕೆಯಾಗುವಂತೆ ಮಾಡಬೇಕು. ಈ ಸಂಬಂಧ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಹೇಳಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com