ಪ್ರಧಾನಿ ಮೋದಿ ಹುಟ್ಟುಹಬ್ಬದ ವಿಶೇಷ ಲಸಿಕಾ ಮೇಳದ ನಂತರ ರಾಜ್ಯದಲ್ಲಿ ಕೋವಿಡ್ ಲಸಿಕೆ ನೀಡಿಕೆ ಪ್ರಮಾಣ ಶೇ.90ರಷ್ಟು ಇಳಿಕೆ!

ನರೇಂದ್ರ ಮೋದಿ ಅವರ ಜನ್ಮದಿನದ ಹಿನ್ನೆಲೆಯಲ್ಲಿ ಕಳೆದ ಶುಕ್ರವಾರ ರಾಜ್ಯದಲ್ಲಿ ನಡೆಸಲಾಗಿದ್ದ ಕೋವಿಡ್ -19 ಲಸಿಕಾ ಮೇಳ (ವ್ಯಾಕ್ಸಿನೇಷನ್ ಡ್ರೈವ್)ದಲ್ಲಿ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿತ್ತು.
ಪ್ರಧಾನಿ ಮೋದಿ
ಪ್ರಧಾನಿ ಮೋದಿ

ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜನ್ಮದಿನದ ಹಿನ್ನೆಲೆಯಲ್ಲಿ ಕಳೆದ ಶುಕ್ರವಾರ ರಾಜ್ಯದಲ್ಲಿ ನಡೆಸಲಾಗಿದ್ದ ಕೋವಿಡ್ -19 ಲಸಿಕಾ ಮೇಳ (ವ್ಯಾಕ್ಸಿನೇಷನ್ ಡ್ರೈವ್)ದಲ್ಲಿ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಲಸಿಕಾ ಮೇಳದ ದಿನ ರಾಜ್ಯದಲ್ಲಿ ಬರೋಬ್ಬರಿ 31 (31,43,598) ಲಕ್ಷ ಜನರಿಗೆ ಲಸಿಕೆ ನೀಡಲಾಗಿತ್ತು. ಆದರೆ, ನಂತರ ದಿನಗಳ ಲಸಿಕೆಗಳಲ್ಲಿ ಶೇ.90 ರಷ್ಟು ಇಳಿಕೆಯಾಗಿರುವುದು ಕಂಡುಬಂದಿದೆ.

ಪ್ರಧಾನಿ ಮೋದಿಯವರ ಜನ್ಮದಿನ ಪೂರ್ಣಗೊಂಡ ಬಳಿಕ ಮರುದಿನ ಅಂದರೆ ಶನಿವಾರ ರಾಜ್ಯದಲ್ಲಿ ಕೇವಲ 1.82 ಲಕ್ಷ ಜನರಿಗೆ ಮಾತ್ರ ಲಸಿಕೆ ನೀಡಿರುವುದು ಬಂದಿದೆ. ಇದಕ್ಕೂ ಕಡಿಮೆ ಪ್ರಮಾಣದ ಲಸಿಕೆ ನೀಡಿದೆ ಭಾನುವಾರ ಕಂಡು ಬಂದಿದೆ. ಕಳೆದ ಭಾನುವಾರ ರಾಜ್ಯದಲ್ಲಿ ಕೇವಲ 58,509 ಜನರಿಗೆ ಮಾತ್ರ ಲಸಿಕೆಯನ್ನು ನೀಡಲಾಗಿದೆ. ಇದಾದ ಬಳಿಕ ಸೋಮವಾರ ಕೊಂಚ ಏರಿಕೆ ಕಂಡು ಬಂದಿದ್ದು, ಅಂದು 2,55,503 ಜನರಿಗೆ ಲಸಿಕೆ ನೀಡಲಾಗಿದೆ. ಇನ್ನು ಮಂಗಳವಾರ 2,62,709 ಜನರಿಗೆ ಲಸಿಕೆ ನೀಡಿರುವುದು ಕಂಡು ಬಂದಿದೆ. 

ಈ ಬೆಳವಣಿಗೆ ಕುರಿತು ಪ್ರತಿಕ್ರಿಯೆ ನೀಡಿರುವ ರಾಷ್ಟ್ರೀಯ ಆರೋಗ್ಯ ಆಯೋಗದ ವ್ಯವಸ್ಥಾಪಕ ನಿರ್ದೇಶಕಿ ಡಾ.ಅರುಂಧತಿ ಚಂದ್ರಶೇಖರ್ ಅವರು, ಲಸಿಕೆ ಮೇಳ ಹಿನ್ನೆಲೆಯಲ್ಲಿ ಜಿಲ್ಲೆಗಳಿಗೆ ನೀಡಲಾಗಿದ್ದ ಲಸಿಕೆಗಳು ಮುಗಿದು ಹೋಗಿವೆ. ಎರಡು ದಿನಗಳ ವಿರಾಮದ ಬಳಿಕ ಜಿಲ್ಲೆಗಳಿಗೆ ಮತ್ತೆ ಲಸಿಕೆ ವಿತರಿಸಲಾಗಿದ್ದು, ಲಸಿಕೆ ಅಭಿಯಾನ ಸೋಮವಾರದಿಂದ ಆರಂಭಿಸಲಾಗಿದೆ. ಪ್ರತೀನಿತ್ಯದ ನಮ್ಮ ಗುರಿ 5 ಲಕ್ಷವಾಗಿದೆ ಎಂದು ಹೇಳಿದ್ದಾರೆ. 

ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಲಸಿಕೆ ವಿತರಿಸಲು ಒಂದೂವರೆ ದಿನಗಳ ಕಾಲಾವಕಾಶ ಬೇಕಾಗುತ್ತದೆ. ಸೋಮವಾರವಷ್ಟೇ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಲಾಗಿತ್ತು. ಈ ವೇಳೆ ಲಸಿಕೆ ವಿತರಣೆ ಕುರಿತ ತಂತ್ರಗಳನ್ನು ಆರೋಗ್ಯ ಮತ್ತು ಕುಟುಂಬ ಇಲಾಖೆಯ ಅಧಿಕಾರಿಗಳು ವಿವರಿಸಿದ್ದರು. 

2 ದಿನಗಳ ಬಳಿಕ ಅಭಿಯಾನ ಎಂದಿನಂತೆ ಮತ್ತೆ ಆರಂಭವಾಗಿದೆ. ಜಿಲ್ಲೆಗಳಿಗೆ 20ಲಕ್ಷಕ್ಕೂ ಹೆಚ್ಚು ಡೋಸ್ ಲಸಿಕೆಗಳನ್ನು ನೀಡಲಾಗಿದ್ದು, ಮರಳಿ ಲಸಿಕಾ ಮೇಳವನ್ನು ಆರಂಭಿಸಲಾಗುತ್ತಿದೆ ಎಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com