ಆಪಾರ್ಟ್ ಮೆಂಟ್ ಅಗ್ನಿ ದುರಂತ: ಬಾಲ್ಕನಿಗೆ ಗ್ರಿಲ್ ಅಥವಾ ಮುಚ್ಚುವಿಕೆ ಮಾಡಬಾರದು: ಬಿಬಿಎಂಪಿ ಆದೇಶ

ಬೆಂಗಳೂರು ಅಪಾರ್ಟ್​ಮೆಂಟ್​ ಅಗ್ನಿ ದುರಂತದ ಬೆನ್ನಲ್ಲೇ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಗ್ನಿ ಅವಘಡಗಳನ್ನು ತಡೆಗಟ್ಟುವ ನಿಟ್ಟನಲ್ಲಿ ಬಿಬಿಎಂಪಿ ಹೊಸ ಆದೇಶ ಪ್ರಕಟಿಸಿದೆ.
ಅಗ್ನಿ ದುರಂತ ಸಂಭವಿಸಿದ ಕಟ್ಟಡ
ಅಗ್ನಿ ದುರಂತ ಸಂಭವಿಸಿದ ಕಟ್ಟಡ

ಬೆಂಗಳೂರು: ಬೆಂಗಳೂರು ಅಪಾರ್ಟ್​ಮೆಂಟ್​ ಅಗ್ನಿ ಅವಘಡದಲ್ಲಿ ಸಜೀವ ದಹನವಾದ ತಾಯಿ ಮತ್ತು ಮಗಳ ದುರಂತ ಇದೀಗ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದು, ಈ ದುರಂತದ ಬೆನ್ನಲ್ಲೇ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ  ಅಗ್ನಿ ಅವಘಡಗಳನ್ನು ತಡೆಗಟ್ಟುವ ನಿಟ್ಟನಲ್ಲಿ ಬಿಬಿಎಂಪಿ ಹೊಸ ಆದೇಶ ಪ್ರಕಟಿಸಿದೆ.

ದೇವರಚಿಕ್ಕನಹಳ್ಳಿಯ ವಸತಿ ಗೃಹದಲ್ಲಿ ಭೀಕರ ಅಗ್ನಿ ಅವಘಡ ಜರುಗಿದ ಬೆನ್ನಲ್ಲೇ ಅಗ್ನಿ ಅವಘಡಗಳನ್ನು ತಡೆಗಟ್ಟುವ ನಿಟ್ಟನಲ್ಲಿ ಬಿಬಿಎಂಪಿ ಹೊಸ ಆದೇಶ ಪ್ರಕಟಿಸಿದೆ. ಬಿಬಿಎಂಪಿ ವ್ಯಾಪ್ತಿಯ ವಸತಿ ಸಮುಚ್ಚಯಗಳಲ್ಲಿ ಸುರಕ್ಷತಾ ದೃಷ್ಟಿಯಿಂದ ಬಾಲ್ಕನಿಯಲ್ಲಿ ಬದಲಾವಣೆಗಳು ಹಾಗೂ ಇನ್ನಿತರೆ ಅಸುರಕ್ಷತಾ ಕಟ್ಟಡ ಮಾರ್ಪಾಡುಗಳನ್ನು ತಡೆಗಟ್ಟಲು ಬಿಬಿಎಂಪಿ ಮುಖ್ಯ ಆಯುಕ್ತರು ಆದೇಶಿಸಿದ್ದಾರೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿರುವ ಕಟ್ಟಡಗಳಿಗೆ ಕಟ್ಟಡ ಉಪವಿಧಿ-2003, ಪರಿಷ್ಕೃತ ವಲಯ ನಿಯಮಾವಳಿಗಳು-2015 ಮತ್ತು National Building Code of India-2016 ರ ಅನ್ವಯ ನಕ್ಷೆ ಮಂಜೂರಾತಿ, ಪ್ರಾರಂಭಿಕ ಪ್ರಮಾಣ ಪತ್ರ ಮತ್ತು ಸ್ವಾಧೀನಾನುಭವ ಪ್ರಮಾಣ ಪತ್ರಗಳನ್ನು ಪಡೆದ ನಂತರ ಕಟ್ಟಡಗಳ ಬಾಲ್ಕನಿಗಳನ್ನು ಸಂಪೂರ್ಣವಾಗಿ ಮುಚ್ಚಲು ಹಾಗೂ ಇನ್ನಿತರೆ ಅಸುರಕ್ಷತಾ ಕಟ್ಟಡ ಮಾರ್ಪಾಡುಗಳನ್ನು ನಿರ್ವಹಿಸಲು ನಿಯಮಾನುಸಾರ ಅವಕಾಶವಿರುವುದಿಲ್ಲ. ಆದರೂ ಕಟ್ಟಡ ಮಾಲೀಕರು ನಿಯಮಬಾಹಿರವಾಗಿ ಅಸುರಕ್ಷತೆಗೆ ಕಾರಣವಾಗುವಂತೆ ಕಟ್ಟಡ ಮಾರ್ಪಾಡು ಮಾಡುತ್ತಿರುವುದನ್ನು ಗಮನಿಸಲಾಗಿದೆ ಎಂದು ಬಿಬಿಎಂಪಿ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಮೇಲ್ಕಂಡ ಹಿನ್ನಲೆಯಲ್ಲಿ ನಿಯಮಾನುಸಾರ ಕಟ್ಟಡಗಳಿಗೆ ನಕ್ಷೆ ಮಂಜೂರಾತಿ, ಪ್ರಾರಂಭಿಕ ಪ್ರಮಾಣ ಪತ್ರ ಮತ್ತು ಸ್ವಾಧೀನಾನುಭವ ಪ್ರಮಾಣ ಪತ್ರಗಳನ್ನು ಪಡೆದ ನಂತರ ವಸತಿ ಸಮುಚ್ಚಯಗಳಲ್ಲಿ ಅಥವಾ ಇತರೆ ಕಟ್ಟಡಗಳಲ್ಲಿ ಸುರಕ್ಷತಾ ದೃಷ್ಟಿಯಿಂದ ಬಾಲ್ಕನಿಯಲ್ಲಿ ಬದಲಾವಣೆಗಳು ಹಾಗೂ ಇನ್ನಿತರೆ ಅಸುರಕ್ಷತಾ ಕಟ್ಟಡ ಮಾರ್ಪಾಡುಗಳನ್ನು ತಡೆಗಟ್ಟಲು ಸೂಚಿಸಿದೆ. ಒಂದು ವೇಳೆ ವಸತಿ ಸಮುಚ್ಚಯಗಳಲ್ಲಿ/ಇತರೆ ಕಟ್ಟಡಗಳಲ್ಲಿ ಮಾರ್ಪಾಡು ಅವಶ್ಯವಿದ್ದಲ್ಲಿ ಪಾಲಿಕೆಯ ಸಕ್ಷಮ ಪ್ರಾಧಿಕಾರಗಳಿಂದ ಕಡ್ಡಾಯವಾಗಿ ಪೂರ್ವಾನುಮತಿಗಳನ್ನು ಪಡೆಯಲು ಬಿಬಿಎಂಪಿ ಮುಖ್ಯ ಆಯುಕ್ತರು ಆದೇಶ ಹೊರಡಿಸಿದ್ದಾರೆ.

ಬಿಟಿಎಂ ಲೇಔಟ್ ನಲ್ಲಿರುವ ದೇವರ ಚಿಕ್ಕನಹಳ್ಳಿಯಲ್ಲಿರುವ ಅಪಾರ್ಟ್ ಮೆಂಟ್ ನ 210 ನೇ ಫ್ಲ್ಯಾಟ್‌ನಲ್ಲಿದ್ದ ತಾಯಿ ಹಾಗೂ ಮಗಳು ಸಜೀವದಹನ ಆಗಿದ್ದಾರೆ. ಅಗ್ನಿಶಾಮಕ ಸಿಬ್ಬಂದಿಯಿಂದ ತಾಯಿ, ಪುತ್ರಿ ಮೃತದೇಹ ಪತ್ತೆಯಾಗಿತ್ತು.  ಅಲ್ಲದೆ ಅಗ್ನಿ ಅವಘಡದಲ್ಲಿ ಭೀಮಸೇನ್‌ ಎಂಬುವವರಿಗೆ ಗಾಯಗೊಂಡಿದ್ದರು. ಗಾಯಾಳು ಭೀಮಸೇನ್‌ಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಭೀಮಸೇನ್‌ ತಲೆ, ಕೈ-ಕಾಲುಗಳಲ್ಲಿ ಸುಟ್ಟಗಾಯ ಆಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com