ರಾಷ್ಟ್ರೀಯ ಶಿಕ್ಷಣ ನೀತಿ ಬಗ್ಗೆ ವಿಧಾನಸಭೆಯಲ್ಲಿ ಗದ್ದಲ-ಕೋಲಾಹಲ; ಸಿಎಂ-ಸಿದ್ದರಾಮಯ್ಯ ಏಟು-ಎದಿರೇಟು: ಕಲಾಪ ಅನಿರ್ದಿಷ್ಟಾವಧಿ ಮುಂದೂಡಿಕೆ

ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಟಾಂಗಾ ಮೂಲಕ ಜಾಥಾ ಬಂದು ವಿಧಾನಸಭೆ ಕಲಾಪಕ್ಕೆ ಬಂದ ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ಹಾಗೂ ಇತರ ಕಾಂಗ್ರೆಸ್ ಸದಸ್ಯರು ಸದನದ ಬಾವಿಗಿಳಿದು ತೀವ್ರ ಗದ್ದಲ, ಕೋಲಾಹಲ ಮೂಡಿಸಿದರು.
ಸಿಎಂ ಬಸವರಾಜ ಬೊಮ್ಮಾಯಿ, ವಿಪಕ್ಷ ನಾಯಕ ಸಿದ್ದರಾಮಯ್ಯ
ಸಿಎಂ ಬಸವರಾಜ ಬೊಮ್ಮಾಯಿ, ವಿಪಕ್ಷ ನಾಯಕ ಸಿದ್ದರಾಮಯ್ಯ

ಬೆಂಗಳೂರು: ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಟಾಂಗಾ ಮೂಲಕ ಜಾಥಾ ಬಂದು ವಿಧಾನಸಭೆ ಕಲಾಪಕ್ಕೆ ಬಂದ ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ಹಾಗೂ ಇತರ ಕಾಂಗ್ರೆಸ್ ಸದಸ್ಯರು ಸದನದ ಬಾವಿಗಿಳಿದು ತೀವ್ರ ಗದ್ದಲ, ಕೋಲಾಹಲ ಮೂಡಿಸಿದರು.

ಸದನಕ್ಕೆ ಬಂದ ಕಾಂಗ್ರೆಸ್ ಸದಸ್ಯರು ನೇರವಾಗಿ ಬಾವಿಗಿಳಿದು ಗದ್ದಲ, ಕೋಲಾಹಲ ಏರ್ಪಡಿಸಿದಾಗ ವಿಪಕ್ಷ ನಾಯಕ ಸಿದ್ದರಾಮಯ್ಯ ಸದನವನ್ನುದ್ದೇಶಿಸಿ ಮಾತನಾಡಲು ಆರಂಭಿಸಿದರು. ಈ ವೇಳೆ ಸಭಾಧ್ಯಕ್ಷ ಕಾಗೇರಿ, ಏನು ಸಿದ್ದರಾಮಯ್ಯನವರೇ ಟಾಂಗಾದಲ್ಲಿ ಇವತ್ತು ಸದನಕ್ಕೆ ಬಂದಿರಂತೆ, ಒಳಗಿರುವ ಸದಸ್ಯರಿಗೆ ಏನು ಸಂದೇಶ ನೀಡಲು ಹೊರಟಿದ್ದೀರಿ ಎಂದು ಕೇಳಿದರು.

ಆಗ ಸಿದ್ದರಾಮಯ್ಯನವರು, ಪೆಟ್ರೋಲ್, ಡೀಸೆಲ್ ಬೆಲೆ ಗಗನಕ್ಕೇರಿದೆ, ಜನಸಾಮಾನ್ಯರ ಬದುಕು ದುಸ್ತರವಾಗುತ್ತಿದೆ. ಜನರ ಸಮಸ್ಯೆಗಳನ್ನು ಇವತ್ತು ಸದನದಲ್ಲಿ ಚರ್ಚೆ ಮಾಡಬೇಕು, ಯಾವುದೇ ಕಾರಣಕ್ಕೂ ಸದನದಲ್ಲಿ ಪ್ರತಿಭಟನೆ ಮಾಡಬಾರದು ಎಂದು ತೀರ್ಮಾನಿಸಿದ್ದೆವು. ಆದರೆ ನಮ್ಮ ಸದಸ್ಯರು ಎತ್ತಿದ ಅನೇಕ ಪ್ರಶ್ನೆಗಳಿಗೆ ಉತ್ತರ ಸಿಗುತ್ತಿಲ್ಲ. 6 ತಿಂಗಳ ಮೇಲೆ ಸದನದಲ್ಲಿ ಕಲಾಪಕ್ಕೆ ಸೇರಿದ್ದೇವೆ, ಅನೇಕ ವಿಷಯಗಳನ್ನು ಚರ್ಚಿಸಿ ಸರ್ಕಾರದಿಂದ ಉತ್ತರ ಸಿಗಬೇಕಿದೆ. ಇನ್ನೊಂದು ವಾರಗಳ ಕಾಲ ಕಲಾಪ ಮುಂದೂಡಿ ಎಂದು ಬ್ಯುಸ್ ನೆಸ್ ಅಡ್ವೈಸರ್ ಕಮಿಟಿಗೆ ಪರಿಪರಿಯಾಗಿ ಬೇಡಿಕೊಂಡಿದ್ದೇವೆ. ಆದರೆ ಚರ್ಚೆ ಮಾಡಲು ಸಮಯವೆಲ್ಲಿ ಸಿಗುತ್ತಿದೆ ಎಂದು ಆಕ್ರೋಶ ಹೊರಹಾಕಿದರು.

ರಾಷ್ಟ್ರೀಯ ಶಿಕ್ಷಣ ನೀತಿ ಪ್ರಸ್ತಾಪ: ದೇಶದಲ್ಲಿಯೇ ಮೊದಲ ಬಾರಿಗೆ ನಮ್ಮ ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತರುತ್ತಿದೆ ಸರ್ಕಾರ, ಅಕ್ಟೋಬರ್ 1ರಿಂದ ಕಾಲೇಜುಗಳು ಆರಂಭವಾಗುತ್ತಿದೆ, ಮಕ್ಕಳ ಭವಿಷ್ಯದ ಪ್ರಶ್ನೆಯಾಗಿರುವ ಅದರ ಬಗ್ಗೆ ಚರ್ಚೆ ನಡೆಸಬೇಕಲ್ಲವೇ ಎಂದು ಕೇಳಿದರು.

ಸರ್ಕಾರ ತರುತ್ತಿರುವ ಎನ್ ಇಪಿ ನಾಗ್ಪುರ ಶಿಕ್ಷಣ ನೀತಿ, ಇದು ಆರ್ ಎಸ್ ಎಸ್ ಅಜೆಂಡಾ ಇಟ್ಟುಕೊಂಡು ತರಲಾಗಿದೆ ಎಂದು ಸಿದ್ದರಾಮಯ್ಯ ಟೀಕಿಸಿದರು. ಆಗ ಡಿ ಕೆ ಶಿವಕುಮಾರ್ ಇದು ನ್ಯಾಷನಲ್ ಎಜುಕೇಶನ್ ಪಾಲಿಸಿ ಅಲ್ಲ. ಅದು ನಾಗಪುರ ಎಜುಕೇಶನ್ ಪಾಲಿಸಿ ಎಂದು ಏರುಧ್ವನಿಯಲ್ಲಿ ಟೀಕಿಸಿದರು. 

ಈ ವೇಳೆ ಎದ್ದುನಿಂತು ಉತ್ತರಿಸಲು ಪ್ರಯತ್ನಿಸಿದ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಪಕ್ಷಕ್ಕೆ ತಿರುಗೇಟು ನೀಡಲು ನೋಡಿದರು.  ರಾಷ್ಟ್ರ ನಿರ್ಮಾಣ ಮಾಡುವಂತಹ, ಮಕ್ಕಳ ಉಜ್ವಲ ಭವಿಷ್ಯದ ದೃಷ್ಟಿಯಿಂದ ಸರ್ಕಾರ ಶಿಕ್ಷಣ ವಿಧಾನದಲ್ಲಿ ಈ ಬದಲಾವಣೆಯನ್ನು ತಂದಿದೆ, ನಾವು ಹೆದರುವುದಿಲ್ಲ. ಅದನ್ನು ಜಾರಿ ಮಾಡಿಯೇ ಸಿದ್ದ ಎಂದ ಸಿಎಂ ಬೊಮ್ಮಾಯಿ ಸಮರ್ಥಿಸಿದರು. 

ಗ್ರಾಮೀಣ ಭಾಗದ ಮಕ್ಕಳಿಗೆ ನೂತನ ಶಿಕ್ಷಣ ನೀತಿ ಅತ್ಯಂತ ಸಹಕಾರಿಯಾಗಲಿದೆ. ಎಲ್ಲ ಮಕ್ಕಳ ಉಜ್ವಲ ಭವಿಷ್ಯಕ್ಕೆ ಉತ್ತಮವಾಗಿದೆ, ನೀವು ವಿರೋಧ ಪಕ್ಷದವರು ಆರ್ ಎಸ್ ಎಸ್ ಎಜುಕೇಶನ್ ಪಾಲಿಸಿ ಅಂತಲೇ ಕರೆಯಿರಿ, ನಾವು ಡೋಂಟ್ ಕೇರ್ ಎಂದರು.

ಈ ವೇಳೆ ಗದ್ದಲ, ಕೋಲಾಹಲ ತೀವ್ರವಾಗಿ ಕಲಾಪ ಮುಂದುವರಿಸಲಾಗದೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅನಿರ್ದಾಷ್ಟಾವಧಿಗೆ ಮುಂದೂಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com