ಬೆಂಗಳೂರು: ಶೀಲ ಶಂಕಿಸಿ ಪತ್ನಿಯ ಹತ್ಯೆಗೈದ ಪತಿ, ಘಟನೆ ಬಳಿಕ ಪರಾರಿ

ಶೀಲ ಶಂಕಿಸಿ ತನ್ನ ಪತ್ನಿಯ ಕುತ್ತಿಗೆ ಕೊಯ್ದು ಹತ್ಯೆ ಮಾಡಿದ ರಿಯಲ್‌ ಎಸ್ಟೇಟ್‌ ಏಜೆಂಟ್‌ವೊಬ್ಬ ಪರಾರಿಯಾಗಿರುವ ಘಟನೆ ಅನ್ನಪೂರ್ಣೇಶ್ವರಿ ನಗರ ಪೊಲೀಸ್‌ ಠಾಣಾ ವ್ಯಾಪ್ತಿಯ ಹೆಲ್ತ್‌ ಲೇಔಟ್‌ನಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಶೀಲ ಶಂಕಿಸಿ ತನ್ನ ಪತ್ನಿಯ ಕುತ್ತಿಗೆ ಕೊಯ್ದು ಹತ್ಯೆ ಮಾಡಿದ ರಿಯಲ್‌ ಎಸ್ಟೇಟ್‌ ಏಜೆಂಟ್‌ವೊಬ್ಬ ಪರಾರಿಯಾಗಿರುವ ಘಟನೆ ಅನ್ನಪೂರ್ಣೇಶ್ವರಿ ನಗರ ಪೊಲೀಸ್‌ ಠಾಣಾ ವ್ಯಾಪ್ತಿಯ ಹೆಲ್ತ್‌ ಲೇಔಟ್‌ನಲ್ಲಿ ನಡೆದಿದೆ.

ಹೆಲ್ತ್‌ ಲೇಔಟ್‌ ನಿವಾಸಿ ರೂಪಾ (34) ಕೊಲೆಯಾದ ದುರ್ದೈವಿ. ಈ ಕೃತ್ಯ ಎಸಗಿ ತಪ್ಪಿಸಿಕೊಂಡಿರುವ ಮೃತಳ ಪತಿ ಕಾಂತರಾಜು ಪತ್ತೆಗೆ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. 

ಕೌಟುಂಬಿಕ ವಿಚಾರವಾಗಿ ಸಂಜೆ ದಂಪತಿ ಮಧ್ಯೆ ಜಗಳವಾಗಿದೆ. ಈ ಹಂತದಲ್ಲಿ ಕೆರಳಿದ ಆತ, ಪತ್ನಿಯ ಕತ್ತು ಕೊಯ್ದು ಪರಾರಿಯಾಗಿದ್ದಾನೆ. ಸಂಜೆ ರೂಪಾ ಅವರ ಪುತ್ರ ಟ್ಯೂಷನ್ ನಿಂದ ಮನೆಗೆ ಬಂದು ಬಾಗಿಲು ತೆಗೆದು ನೋಡಿದ್ದಾನೆ. ಬಳಿಕ ತನ್ನ ಅಜ್ಜಿ ತಾತನಿಗೆ ಮಾಹಿತಿ ನೀಡಿದ್ದಾನೆ. ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿದ ಅನ್ನಪೂರ್ಣೇಶ್ವರಿನಗರ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. 

ಹತ್ತು ವರ್ಷಗಳ ಹಿಂದೆ ರೂಪಾ ಹಾಗೂ ಕಾಂತರಾಜು ವಿವಾಹವಾಗಿದ್ದು, ಈ ದಂಪತಿಗೆ 8 ವರ್ಷದ ಗಂಡು ಮಗುವಿದೆ. ಕೆಲ ದಿನಗಳಿಂದ ಪತ್ನಿ ನಡವಳಿಕೆ ಮೇಲೆ ಗುಮಾನಿಗೊಂಡಿದ್ದ ಕಾಂತರಾಜು, ಇದೇ ವಿಚಾರವಾಗಿ ಸದಾ ಮನೆಯಲ್ಲಿ ಗಲಾಟೆ ಮಾಡುತ್ತಿದ್ದ. ಅಂತೆಯೇ ಬುಧವಾರ ಸಂಜೆ 6 ಗಂಟೆ ಸುಮಾರಿಗೆ ಸಹ ಸತಿ-ಪತಿ ಮಧ್ಯೆ ಉಂಟಾದ ಜಗಳವು ವಿಕೋಪಕ್ಕೆ ತಿರುಗಿ ಕೊಲೆಯಲ್ಲಿ ಅಂತ್ಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರೂಪಾ ಪೋಷಕರು ನೀಡಿರುವ ದೂರಿನ ಆಧಾರದ ಮೇಲೆ ಕಾಂತರಾಜು ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 2005ರಲ್ಲಿ ಡಬಲ್ ಮರ್ಡರ್ ಕೇಸ್ ವೊಂದರಲ್ಲಿ ಕಾಂತರಾಜು ಹೆಸರಿದ್ದು, 2011ರಲ್ಲಿ ಜಾಮೀನಿನ ಮೇಲೆ ಜೈಲಿನಿಂದ ಹೊರ ಬಂದಿದ್ದ. ನಂತರ ರೂಪಾ ಅವರನ್ನು ವಿವಾಹವಾಗಿದ್ದ. ಇದೀಗ ಆರೋಪಿಗಾಗಿ ಹುಡುಕಾಟ ಆರಂಭಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com