ಕೋವಿಡ್ ಸಾಂಕ್ರಾಮಿಕ ರೋಗದ ಪರಿಸ್ಥಿತಿ ಈಗಷ್ಟೇ ಸುಧಾರಿಸುತ್ತಿದೆ, ಮತ್ತೆ ಜನರಿಗೆ ಸಮಸ್ಯೆಗಳಾಗಬಾರದು: ಭಾರತ್ ಬಂದ್'ಗೆ ಸಿಎಂ ಬೊಮ್ಮಾಯಿ ನಕಾರ

ಕೋವಿಡ್‌ ಸಂಕಷ್ಟದಿಂದ ಈಗಷ್ಟೇ ಜನರು ಚೇತರಿಸಿಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ರೈತ ಸಂಘಟನೆಗಳು ಭಾರತ್ ಬಂದ್‌ಗೆ ಕರೆ ನೀಡಿರುವುದು ಸರಿಯಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಶನಿವಾರ ಹೇಳಿದ್ದಾರೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮೈಸೂರು: ಕೋವಿಡ್‌ ಸಂಕಷ್ಟದಿಂದ ಈಗಷ್ಟೇ ಜನರು ಚೇತರಿಸಿಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ರೈತ ಸಂಘಟನೆಗಳು ಭಾರತ್ ಬಂದ್‌ಗೆ ಕರೆ ನೀಡಿರುವುದು ಸರಿಯಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಶನಿವಾರ ಹೇಳಿದ್ದಾರೆ. 

ಕೇಂದ್ರದ ಕೃಷಿ ಕಾಯ್ದೆ ವಿರೋಧಿಸಿ ಸೆಪ್ಟೆಂಬರ್ 27ಕ್ಕೆ ಭಾರತ್ ಬಂದ್ ನಡೆಯಲಿರುವ ಬಗ್ಗೆ ಮುಖ್ಯಮಂತ್ರಿ ಬೊಮ್ಮಾಯಿ ಅವರು ಪ್ರತಿಕ್ರಿಯೆ ನೀಡಿದ್ದಾರೆ. 

ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಕೇಂದ್ರದ ಕೃಷಿ ಕಾಯ್ದೆ ವಿರೋಧಿಸಿ ಭಾರತ್ ಬಂದ್ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗದಂತೆ ರಕ್ಷಣೆ ಬೇಕು. ಬಂದ್​ಗೆ ಕರೆ ಕೊಟ್ಟಿರೋದಕ್ಕೆ ನಾನೇಕೆ ಪ್ರತಿಕ್ರಿಯೆ ನೀಡಲಿ. ಕೋವಿಡ್‌ ಸಾಂಕ್ರಾಮಿಕ ರೋಗದಿಂದಾಗಿ ಎಲ್ಲಾ ಕ್ಷೇತ್ರಗಳ ಕಾರ್ಯಚಟುವಟಿಕೆಗಳು ಕುಂಠಿತಗೊಂಡಿದ್ದವು. ಇದೀಗ ಕೊರೊನಾ ಸೋಂಕು ಪ್ರಮಾಣ ಇಳಿಮುಖವಾಗುತ್ತಿದ್ದು, ಮಾರುಕಟ್ಟೆಯಲ್ಲಿ ವ್ಯಾಪಾರ, ವಹಿವಾಟು ಪುನರಾರಂಭವಾಗುತ್ತಿವೆ. ಈ ಸಂದರ್ಭದಲ್ಲಿ ಪ್ರತಿಭಟನೆ, ಬಂದ್‌ ನಡೆಸಿದರೆ ಜನಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಜನರಿಗೆ ಯಾವುದೇ ರೀತಿ ತೊಂದರೆ ಆಗದಂತೆ ರಕ್ಷಣೆ ಬೇಕು. ರೈತ ಸಂಘಟನೆಗಳು ಬಂದ್‌ ನಡೆಸದೆ ಸಹಕಾರ ನೀಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

ಈ ನಡುವೆ ಹೇಳಿಕೆ ನೀಡಿರುವ ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿ ಹಳ್ಳಿ ಚಂದ್ರಶೇಖರ್ ಅವರು, ಸೋಮವಾರ ಭಾರತ್ ಬಂದ್‍ಗೆ ರೈತ ಸಂಘಟನೆಗಳು ಕರೆ ನೀಡಿದೆ. ಕೇಂದ್ರ ಸರ್ಕಾರದ ಖಾಸಗೀಕರಣದ ನೀತಿ ರೈತರಿಗೆ ಮಾತ್ರವಲ್ಲ ಇಡೀ ಭಾರತೀಯರಿಗೆ ಅನ್ಯಾಯವಾಗಲಿದೆ ಎಂದು ಹೇಳಿದ್ದಾರೆ

ಕೇಂದ್ರದ ಕೃಷಿ ಕಾಯ್ದೆ ವಿರೋಧಿಸಿ ಸೆ.27ಕ್ಕೆ ಭಾರತ್​ ಬಂದ್​ಗೆ ಬಹುತೇಕ ರೈತ ಸಂಘಟನೆಗಳು ಬೆಂಬಲ ನೀಡಿವೆ. ರೈತರೇ ಹೋರಾಟದ ಮುಂಚೂಣಿಯಲ್ಲಿ ಇರುತ್ತಾರೆ. ಪ್ರತಿಯೊಬ್ಬರೂ ಭಾರತ್ ಬಂದ್ ಬೆಂಬಲಿಸುವಂತೆ ಮನವಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ. 

ಸೆ. 27 ರಂದು ಬೆಳಗ್ಗೆ 8ಕ್ಕೆ ಕೆ.ಆರ್. ಮಾರ್ಕೆಟ್​ನಿಂದ ಮೆರವಣಿಗೆ ನಡೆಸಲಿದ್ದೇವೆ. ಬೆಳಗ್ಗೆ 11 ಗಂಟೆಗೆ ಟೌನ್​ಹಾಲ್​ ತಲುಪಲಿದ್ದೇವೆ. ಮೈಸೂರು ಬ್ಯಾಂಕ್​ ವೃತ್ತದವರೆಗೆ ಮೆರವಣಿಗೆ ಮಾಡುತ್ತೇವೆ. ಸರ್ಕಾರದ ಪರವಾಗಿ ಇರುವವರು ಬಂದ್​ಗೆ ಆಕ್ಷೇಪಿಸುತ್ತಾರೆ ಎಂದು ಎಂದಿದ್ದಾರೆ. 

ಕೇಂದ್ರ ಸರ್ಕಾರ ಎಲ್ಲವನ್ನೂ ಖಾಸಗೀಕರಣ ಮಾಡುತ್ತಿದೆ. ರೈಲು, ಬಂದರು, ಹೆದ್ದಾರಿ ಎಲ್ಲವೂ ಖಾಸಗೀಕರಣವಾಗಿದೆ. ರೈತರು ಖಾಸಗೀಕರಣ ಆಗಬಾರದು. ಖಾಸಗೀಕರಣ ವಿರೋಧಿಸುವ ನಿಟ್ಟಿನಲ್ಲಿ ನಮ್ಮ ಹೋರಾಟ ನಡೆಯಲಿದೆ. ನಮ್ಮ ಹೋರಾಟಕ್ಕೆ ಸಮಸ್ತ ನಾಗರಿಕರು ಸಹಕರಿಸಬೇಕು. ಬಂದ್​ಗೆ ಯಾವುದೇ ರಾಜಕೀಯ ಪಕ್ಷಗಳ ಬೆಂಬಲ ಕೋರಿಲ್ಲ ಎಂದು ಕೋಡಿಹಳ್ಳಿ ಚಂದ್ರಶೇಖರ್​ ಹೇಳಿಕೆ ನೀಡಿದ್ದಾರೆ.

ಬಂದ್'ಗೆ ಆಮ್ ಆದ್ಮಿ ಪಕ್ಷ ಬೆಂಬಲ
ರೈತರ ಭಾರತ ಬಂದ್ ಕರೆಗೆ ಶನಿವಾರ ಆಮ್ ಆದ್ಮಿ ಪಕ್ಷ ಬೆಂಬಲ ವ್ಯಕ್ತಪಡಿಸಿದೆ. ಈ ಕುರಿತು ಹೇಳಿಕೆ ನೀಡಿರುವ ಆಪ್ ಮಾಧ್ಯಮ ಸಂಯೋಜಕ ಜಿಆರ್. ವಿದ್ಯಾರಣ್ಯ ಅವರು, ಹೊಸ ಕೃಷಿ ಕಾನೂನುಗಳು ಚುನಾವಣೆಯಲ್ಲಿ ಬಿಜೆಪಿಗೆ ಆರ್ಥಿಕ ನೆರವು ನೀಡುವ ಒಂದು ಭಾಗದ ಉದ್ಯಮಿಗಳಿಗೆ ಮಾತ್ರ ಸಹಾಯ ಮಾಡುತ್ತದೆ ಮತ್ತು ವಿರೋಧ ಪಕ್ಷದ ಶಾಸಕರನ್ನು ಸೆಳೆಯಲು 'ಆಪರೇಷನ್ ಕಮಲ' ಕೈಗೊಳ್ಳಲು ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ. 

ಈ ಎಲ್ಲಾ ಬೆಳವಣಿಗೆ ನಡುವಲ್ಲೇ ಭಾರತ್ ಬಂದ್ ಗೆ ಬೆಂಬಲ ನೀಡಬೇಕು ಎಂದು ಮನವಿ ಮಾಡಲು ಕರ್ನಾಟಕ ರಾಜ್ಯ ಸಂಯುಕ್ತ ಕಿಸಾನ್ ಮೋರ್ಚಾ ಮುಖಂಡ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಮೈಸೂರಿನಲ್ಲಿ ಇಂದು  ಚಡ್ಡಿ ಬನಿಯನ್ ಹಾಕಿ ಕಬ್ಬಿನ ಜಲ್ಲೆ ಹಿಡಿದು ಪಾದಯಾತ್ರೆ ಮೆರವಣಿಗೆ ನಡೆಸಿದರು.

ಸಾರ್ವಜನಿಕರಿಗೆ ಕರಪತ್ರ ನೀಡಿ ರೈತರ ಉಳಿವಿಗಾಗಿ ಸ್ವಯಂ ಪ್ರೇರಿತವಾಗಿ ಬಂದ್ ಗೆ ಬೆಂಬಲ ನೀಡಬೇಕೆಂದು ಸರ್ವಾಧಿಕಾರಿ ಕೇಂದ್ರ ಸರ್ಕಾರದ  ನಡೆಯನ್ನು ಖಂಡಿಸಬೇಕು ಎಂದು ಮನವಿ ಮಾಡಿದರು. 

ಬಂದ್ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಟಿಸಿ – ಬಿಎಂಟಿಸಿ ಬಸ್‌ಗಳಿಗೆ ಭದ್ರತೆ ಒದಗಿಸುವಂತೆ ಪೊಲೀಸರಿಗೆ ಮನವಿ ಮಾಡಲಾಗಿದೆ ಎಂದು ತಿಳಿದುಬಂದಿದೆ. 

ಸಾರಿಗೆ ಸಂಸ್ಥೆ ಬಸ್‌ಗಳು ಎಂದಿನಂತೆ ಸಂಚರಿಸಲಿವೆ. ಬಸ್ ಮತ್ತು ಸಂಸ್ಥೆಯ ಆಸ್ತಿಗೆ ಯಾವುದೇ ಹಾನಿಯಾಗದಂತೆ ಭದ್ರತೆ ಒದಗಿಸಬೇಕು ಎಂದು ಪೊಲೀಸ್ ಇಲಾಖೆಯನ್ನು ಕೋರಲಾಗಿದೆ ಎಂದು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ. ಕಳಸದ ತಿಳಿಸಿದ್ದಾರೆ. 

ಬಿಎಂಟಿಸಿ ಬಸ್‌ಗಳ ಸಂಚಾರದಲ್ಲಿ ವ್ಯತ್ಯಾಸ ಆಗುವುದಿಲ್ಲ. ಭದ್ರತೆ ಕೋರಿ ಪತ್ರ ಬರೆಯಲಾಗಿದೆ ಎಂದು ಬಿಎಂಟಿಸಿ ಸಾರ್ವಜನಿಕ ಸಂಪರ್ಕಾಧಿಕಾರಿ ತಿಳಿಸಿದರು.

ಮೆಟ್ರೊ ರೈಲು ಸಂಚಾರವೂ ಎಂದಿನಂತೆ ಇರಲಿದೆ. ಹೆಚ್ಚಿನ ಭದ್ರತೆ ಒದಗಿಸುವಂತೆ ಪೊಲೀಸ್ ಇಲಾಖೆಯನ್ನು ಕೋರಲಿದ್ದೇವೆ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್ ಹೇಳಿದ್ದಾರೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com