ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ 1,200 ಅರೆಕಾಲಿಕ ಉಪನ್ಯಾಸಕರಿಗೆ ಕೆಲಸ ಕಳೆದುಕೊಳ್ಳುವ ಭೀತಿ!

ಎಐಸಿಟಿಇ ವಾರಕ್ಕೆ 40 ಗಂಟೆಗಳ ಬೋಧನೆ ಕಡ್ಡಾಯಪಡಿಸಿರುವುದರಿಂದ ಸಿಲಬಸ್ ಹಾಗೂ ಬೋಧನಾ ಅವಧಿ ಕಡಿಮೆಯಾಗಿದ್ದು, 85 ಸರ್ಕಾರಿ ಪಾಲಿಟೆಕ್ನಿಕ್ ಮತ್ತು 15 ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಸುಮಾರು 1,200 ಅರೆಕಾಲಿಕ ಉಪನ್ಯಾಸಕರು ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಎಐಸಿಟಿಇ ವಾರಕ್ಕೆ 40 ಗಂಟೆಗಳ ಬೋಧನೆ ಕಡ್ಡಾಯಪಡಿಸಿರುವುದರಿಂದ ಸಿಲಬಸ್ ಹಾಗೂ ಬೋಧನಾ ಅವಧಿ ಕಡಿಮೆಯಾಗಿದ್ದು, 85 ಸರ್ಕಾರಿ ಪಾಲಿಟೆಕ್ನಿಕ್ ಮತ್ತು 15 ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಸುಮಾರು 1,200 ಅರೆಕಾಲಿಕ ಉಪನ್ಯಾಸಕರು ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.

ಅರೆಕಾಲಿಕ ಉಪನ್ಯಾಸಕರ ವಿಚಾರಕ್ಕೆ ಸಂಬಂಧಿಸಿದಂತೆ ಹಣಕಾಸು ಇಲಾಖೆಯಿಂದ ತ್ವರಿತಗತಿಯ ಅನುಮೋದನೆಗಾಗಿ ಸರ್ಕಾರ ಮಧ್ಯ ಪ್ರವೇಶಿಸಬೇಕೆಂದು ಸರ್ಕಾರಿ ಪಾಲಿಟೆಕ್ನಿಕ್ ಮತ್ತು ಸರ್ಕಾರಿ ಎಂಜಿನಿಯರಿಂಗ್ ಕಾಲೇಜ್ ಅರೆಕಾಲಿಕ ಉಪನ್ಯಾಸಕರ ಸಂಘ ಕೋರಿದೆ. 

ಉತ್ತರ ಪ್ರದೇಶದಲ್ಲಿ ಬೋಧನಾ ಅವಧಿ ವಾರದಲ್ಲಿ 40 ಗಂಟೆಗಿಂತ ಹೆಚ್ಚಾಗಿದೆ. ಆಂಧ್ರದಲ್ಲೂ 42 ಗಂಟೆಯಿದೆ. ಆದರೆ,  ಕರ್ನಾಟಕದಲ್ಲಿ ಅದು 32 ಗಂಟೆಗೆ ಇಳಿದಿದೆ. ಇದರಿಂದಾಗಿ ಸಿಬ್ಬಂದಿ ಅಗತ್ಯತೆ 1,200 ರಿಂದ 600 ಕ್ಕೆ ಕಡಿಮೆಯಾಗಲಿದೆ. ಪ್ರಸ್ತುತ 826 ಹುದ್ದಗಳ ಭರ್ತಿಗೆ ಅನುಮೋದನೆ ದೊರೆತಿದೆ ಎಂದು ಅಸೋಸಿಯೇಷನ್ ಅಧ್ಯಕ್ಷ ಎಂ. ಪ್ರಶಾಂತ್ ಹೇಳಿದ್ದಾರೆ. 

ತಾಂತ್ರಿಕ ಶಿಕ್ಷಣ ಇಲಾಖೆಯು ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರವನ್ನು ಪಠ್ಯಕ್ರಮದಿಂದ ಹೊರಹಾಕಿದ್ದು, ಸರ್ಕಾರಿ ಪಾಲಿಟೆಕ್ನಿಕ್ ಮತ್ತು ಸರ್ಕಾರಿ ಎಂಜಿನಿಯರಿಂಗ್ ಕಾಲೇಜ್ ಗಳಲ್ಲಿ   350 ಅರೆಕಾಲಿಕ ಉಪನ್ಯಾಸಕರಿಗೆ ಉದ್ಯೋಗ ನಷ್ಟವಾಗಿದೆ. ಜಿಲ್ಲೆಗಳಲ್ಲಿ, ಉದ್ಯೋಗಗಳನ್ನು ಬದಲಾಯಿಸುವುದು ಕಷ್ಟ ಮತ್ತು ಕೋವಿಡ್ ನಂತರ ಅವಕಾಶಗಳು ಕಡಿಮೆ ಇರುವುದರಿಂದ ಉದ್ಯೋಗಕ್ಕಾಗಿ ಬೆಂಗಳೂರಿಗೆ ತೆರಳಲು ಸಾಧ್ಯವಿಲ್ಲ. ಹೆಚ್ಚಿನ ಉಪನ್ಯಾಸಕರು ಎಂಜಿನಿಯರಿಂಗ್ ವೃತ್ತಿಪರರು ಮತ್ತು ಅವರ ಆದಾಯದ ಮೂಲವಾಗಿ ಬೋಧನೆಯನ್ನು ಅವಲಂಬಿಸಿರುತ್ತಾರೆ ಎಂದು ಅವರು ಹೇಳಿದ್ದಾರೆ.

ಸಂಬಳ ಕಾಲ ಕಾಲಕ್ಕೆ ಬರುವುದಿಲ್ಲ ಎಂದು ಚಿಕ್ಕಮಗಳೂರಿನ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ್ ಮತ್ತೋರ್ವ ಉಪನ್ಯಾಸಕರು ಹೇಳಿದ್ದಾರೆ. ಅಸೋಸಿಯೇಷನ್ ರಚನೆಯಾದ ನಂತರ ನವೆಂಬರ್ 2020ರಲ್ಲಿ ಎರಡು ವರ್ಷದ ಸಂಬಳವನ್ನು ಒಂದೇ ಕಂತಿನಲ್ಲಿ ನೀಡಲಾಗಿದೆ. ಆದರೆ, ನವೆಂಬರ್ ಮತ್ತು ಡಿಸೆಂಬರ್ ನಲ್ಲಿ ಆನ್ ಲೈನ್ ತರಗತಿಗಾಗಿ ಸಂಬಳವನ್ನು ನೀಡಿಲ್ಲ ಎಂದು ಅವರು ತಿಳಿಸಿದ್ದಾರೆ. 

ವಿಜ್ಞಾನ ವಿಷಯವನ್ನು ಈಗಲೂ ಕೂಡಾ ಬೋಧಿಸಲಾಗುತ್ತಿದೆ. ಆದರೆ, ಕೆಲವೊಂದು ಭಾಗವನ್ನು ಮಾರ್ಪಡಿಸಲಾಗಿದೆ ಎಂದು ಕಾಲೇಜ್ ಶಿಕ್ಷಣ ಇಲಾಖೆ ಆಯುಕ್ತ ಪ್ರದೀಪ್ ಹೇಳಿದ್ದಾರೆ. ಆದರೆ, ಬೋಧನಾ ಅವಧಿ ಕಡಿಮೆಯಾಗಲಿದೆ ಎಂಬ ಆರೋಪವನ್ನು ಅವರು ಅಲ್ಲಗಳೆದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com