ಭಾರತ್ ಬಂದ್: ಬೆಂಗಳೂರಿನಲ್ಲಿ ಹೈ ಅಲರ್ಟ್, ಸಂಚಾರ ದಟ್ಟಣೆ ಸಾಧ್ಯತೆ, ಕೆಲವೆಡೆ ಮಾರ್ಗ ಬದಲಿಸಿದ ಪೊಲೀಸರು

ಕೃಷಿ ಕಾಯ್ದೆಗಳನ್ನು ವಿರೋಧಿಸಿ ಸಂಯುಕ್ತ ಕಿಸಾನ್ ಮೋರ್ಚಾ ಸೋಮವಾರ ಭಾರತ್ ಬಂದ್ ಗೆ ಕರೆ ನೀಡಿದೆ. ಬೆಂಗಳೂರಿನಲ್ಲಿ ಕೂಡ ಬಂದ್‌ಗೆ ಬೆಂಬಲಿಸಿ ಬೃಹತ್ ಜಾಥಾ ನಡೆಸಲಾಗುತ್ತಿದೆ. ಇದರ ಪರಿಣಾಮ ನಗರದಲ್ಲಿ ಸಂಚಾರ ದಟ್ಟಣೆ ಎದುರಾಗುವ ಸಾಧ್ಯತೆಗಳಿದ್ದು, ನಗರದ ಕೆಲವೆಡೆ ಮಾರ್ಗವನ್ನು ಬದಲಿಸಲಾಗಿದೆ ಎಂದು ತಿಳಿದುಬಂದಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕೃಷಿ ಕಾಯ್ದೆಗಳನ್ನು ವಿರೋಧಿಸಿ ಸಂಯುಕ್ತ ಕಿಸಾನ್ ಮೋರ್ಚಾ ಸೋಮವಾರ ಭಾರತ್ ಬಂದ್ ಗೆ ಕರೆ ನೀಡಿದೆ. ಬೆಂಗಳೂರಿನಲ್ಲಿ ಕೂಡ ಬಂದ್‌ಗೆ ಬೆಂಬಲಿಸಿ ಬೃಹತ್ ಜಾಥಾ ನಡೆಸಲಾಗುತ್ತಿದೆ. ಇದರ ಪರಿಣಾಮ ನಗರದಲ್ಲಿ ಸಂಚಾರ ದಟ್ಟಣೆ ಎದುರಾಗುವ ಸಾಧ್ಯತೆಗಳಿದ್ದು, ನಗರದ ಕೆಲವೆಡೆ ಮಾರ್ಗವನ್ನು ಬದಲಿಸಲಾಗಿದೆ ಎಂದು ತಿಳಿದುಬಂದಿದೆ. 

ಬೆಂಗಳೂರು ಸಂಚಾರಿ ಪೊಲೀಸರು ರೈತರು ಇಂದು ಜಾಥಾ ಹಮ್ಮಿಕೊಂಡಿರುವುದರಿಂದ ಸಂಚಾರ ವ್ಯವಸ್ಥೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದ್ದಾರೆ. ಹೀಗಾಗಿ ಮೆಜೆಸ್ಟಿಕ್, ಆನಂದ್ ರಾವ್ ವೃತ್ತ, ಫ್ರೀಡಂ ಪಾರ್ಕ್ ಸುತ್ತಮುತ್ತ ಸಂಚಾರ ನಡೆಸುವ ವಾಹನ ಸವಾರರು ಸಂಚಾರ ಮಾರ್ಗ ಬದಲಾವಣೆ ಬಗ್ಗೆ ಮಾಹಿತಿ ತಿಳಿಯುವುದು ಅಗತ್ಯವಾಗಿದೆ.

ಕೆ. ಜಿ. ರಸ್ತೆಯಲ್ಲಿ ಹಲಸೂರು ಪೊಲೀಸ್ ಠಾಣೆ ಕಡೆಯಿಂದ ಬಂದು ಪೊಲೀಸ್ ಕಾರ್ನರ್‌ ಬಳಿ ಎಡ ತಿರುವು ಪಡೆದುಕೊಂಡು ಕೆ. ಜಿ. ರಸ್ತೆ ಕಡೆಗೆ ಸಾಗುವ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ.

ಹಾಗೆಯೇ ನೃಪತುಂಗ ರಸ್ತೆ ಮೂಲಕ ಬಂದು ಪೊಲೀಸ್ ಕಾರ್ನರ್ ಬಳಿ ಬಲ ತಿರುವು ಪಡೆದು ಕೆ. ಜಿ. ರಸ್ತೆ ಸಾಗುವ ಸಂಚಾರವನ್ನು ನಿಷೇಧಿಸಲಾಗಿದೆ ಎಂದು ಬೆಂಗಳೂರು ಸಂಚಾರಿ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇನ್ನು ಹಲಸೂರು ಗೇಟ್ ಪೊಲೀಸ್ ಠಾಣೆ ಕಡೆಯಿಂದ ಬಂದು ಪೊಲೀಸ್ ಕಾರ್ನರ್ ಬಳಿ ಎಡ ತಿರುವು ಪಡೆದುಕೊಂಡು ಕೆ. ಜಿ. ರಸ್ತೆ ಕಡೆಗೆ ಸಾಗುವ ವಾಹನಗಳು ಪೊಲೀಸ್ ಕಾರ್ನರ್ ವೃತ್ತದಿಂದ ನೇರವಾಗಿ ನೃಪತುಂಗ ರಸ್ತೆಗೆ ಪವೇಶ ತೆಗೆದುಕೊಂಡು ನೃಪತುಂಗ ರಸ್ತೆಯಲ್ಲಿ ಸಾಗಿ ಕೆ. ಆರ್. ವೃತ್ತ ತಲುಪಿ ಮುಂದುವರೆಯಲು ಅನುವು ಮಾಡಿಕೊಡಲಾಗಿದೆ.

ಕೆ. ಆರ್. ಸರ್ಕಲ್‌ನಿಂದ ನೃಪತುಂಗ ರಸ್ತೆಯಲ್ಲಿ ಬಂದು ಪೊಲೀಸ್ ಕಾರ್ನರ್ ಬಳಿ ಬಲ ತಿರುವು ಪಡೆದು ಕೆ. ಜಿ. ರಸ್ತೆಗೆ ಸಾಗುವ ಸಂಚಾರವನ್ನು ನಿಷೇಧಿಸಿರುವುದರಿಂದ ಕೆ. ಆರ್. ವೃತ್ತದಿಂದ ಶೇಷಾದ್ರಿ ರಸ್ತೆಯಲ್ಲಿ ಸಾಗಿ ಮುಂದುವರೆಯಲು ವ್ಯವಸ್ಥೆ ಮಾಡಲಾಗಿದೆ.

ಭಾರತ್ ಬಂದ್ ಹಿನ್ನೆಲೆಯಲ್ಲಿ ಬೆಂಗಳೂರಿನಾದ್ಯಂತ ಪೊಲೀಸರಿಂದ ಹೈಅಲರ್ಟ್‌ ಘೋಷಿಸಲಾಗಿದೆ. ಹೆಚ್ಚುವರಿ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ 12 ಡಿಸಿಪಿ, ಎಲ್ಲಾ ಎಸಿಪಿಗಳು, 120ಕ್ಕೂ ಹೆಚ್ಚು ಇನ್ಸ್‌ಪೆಕ್ಟರ್‌ಗಳು, 150ಕ್ಕೂ ಹೆಚ್ಚು ಸಬ್‌ ಇನ್ಸ್‌ಪೆಕ್ಟರ್‌ಗಳು ಸೇರಿದಂತೆ, ಭದ್ರತೆಗಾಗಿ ನಾಳೆ 5 ಸಾವಿರ ಪೊಲೀಸರ ನಿಯೋಜನೆ ಮಾಡಲಾಗಿದೆ.

ಇಂದು ಬೆಳಿಗ್ಗೆ 5 ಗಂಟೆಯಿಂದಲೇ ಪೊಲೀಸರ ನಿಯೋಜನೆ ಮಾಡಲಾಗಿದೆ. ಪ್ರತಿ ವಿಭಾಗದಲ್ಲಿ ಡಿಸಿಪಿಗಳ ನೇತೃತ್ವದಲ್ಲಿ ಬಂದೋಬಸ್ತ್‌ ಮಾಡಲಾಗಿದೆ. ನಗರದ ಸೂಕ್ಷ್ಮ, ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಫ್ರೀಡಂಪಾರ್ಕ್‌, ಟೌನ್‌ಹಾಲ್‌ನಲ್ಲಿ ಹೆಚ್ಚುವರಿ ಭದ್ರತೆ ಇದೆ. ಹೆಚ್ಚುವರಿಯಾಗಿ ಕೆಎಸ್​ಆರ್​ಪಿ, ಸಿಎಆರ್ ತುಕಡಿ ನಿಯೋಜನೆ ಮಾಡಲಾಗಿದೆ.

ಪ್ರತಿಭಟನಾನಿರತರು ಸಾರ್ವಜನಿಕರ ದೈನಂದಿನ ಕೆಲಸಕ್ಕೆ ಅಡ್ಡಿಪಡಿಸುವಂತಿಲ್ಲ. ಯಾವುದೇ ರಸ್ತೆ ತಡೆಗಳಿಗೆ ಅನುಮತಿ ನೀಡಿಲ್ಲ. ಈವರೆಗೂ ಯಾರೂ ಮೆರವಣಿಗೆಗೆ ಅನುಮತಿ ಕೇಳಿಲ್ಲ. ಪ್ರತಿಭಟನೆ ಹೆಸರಿನಲ್ಲಿ ನಿಯಮ ಉಲ್ಲಂಘಿಸುವಂತಿಲ್ಲ. ದುಷ್ಕೃತ್ಯಗಳಲ್ಲಿ ಭಾಗಿಯಾದರೆ ಪೊಲೀಸರಿಂದ ಕಠಿಣ ಕ್ರಮ ಎಂಬ ಸೂಚನೆ ನೀಡಲಾಗಿದೆ ಈಗಾಗಲೇ ನೀಡಲಾಗಿದೆ. 

ಈ ನಡುವೆ ಹೇಳಿಕೆ ನೀಡಿರುವ ರೈತ ನಾಯಕ ಕೋಡಿಹಳ್ಳಿ ಚಂದ್ರಶೇಖರ್ ಅವರು, ಸೋಮವಾರ ಬೆಳಗ್ಗೆ 6 ರಿಂದ ಸಂಜೆ 6 ಗಂಟೆಯ ತನಕ ಬಂದ್ ನಡೆಯಲಿದೆ. ಬಸ್, ರೈಲು ಸಂಚಾರವನ್ನು ತಡೆಯಲಾಗುತ್ತದೆ ಎಂದು ಹೇಳಿದ್ದಾರೆ.

ರೈತ ಸಂಘಟನೆಗಳು, ಕಾರ್ಮಿಕ, ದಲಿತ ಸಂಘಟನೆಗಳು, ವಿದ್ಯಾರ್ಥಿ ಸಂಘಟನೆಗಳು, ವರ್ತಕರು, ಕನ್ನಡ ಸಂಘಟನೆಗಳು, ಆಟೋ ಚಾಲಕರ ಸಂಘ, ಟ್ಯಾಕ್ಸಿ ಚಾಲಕರು ಬಂದ್‌ಗೆ ಬೆಂಬಲ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com