ಭಾರತ್ ಬಂದ್: ಪ್ರತಿಭಟನೆ ವೇಳೆ ಹಾವೇರಿಯಲ್ಲಿ ಇಬ್ಬರು ರೈತರು ಆತ್ಮಹತ್ಯೆಗೆ ಯತ್ನ
ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ವಿರೋಧಿಸಿ ಕಿಸಾನ್ ಮೋರ್ಚಾ ಕರೆ ನೀಡಿರುವ ಭಾರತ್ ಬಂದ್ ಪ್ರತಿಭಟನೆ ವೇಳೆ ರೈತರಿಬ್ಬರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಸೋಮವಾರ ನಡೆಯಿತು.
Published: 27th September 2021 04:28 PM | Last Updated: 27th September 2021 06:11 PM | A+A A-

ಪ್ರತಿಭಟನಾನಿರತ ರೈತರು (ಸಂಗ್ರಹ ಚಿತ್ರ)
ಹಾವೇರಿ: ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ವಿರೋಧಿಸಿ ಕಿಸಾನ್ ಮೋರ್ಚಾ ಕರೆ ನೀಡಿರುವ ಭಾರತ್ ಬಂದ್ ಪ್ರತಿಭಟನೆ ವೇಳೆ ರೈತರಿಬ್ಬರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಸೋಮವಾರ ನಡೆಯಿತು.
ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ಹಗ್ಗ ಹಿಡಿದುಕೊಂಡು ಪ್ರತಿಭಟನೆಗೆ ನೂರ್ ಅಹಮ್ಮದ್ ಮುಲ್ಲಾ ಮತ್ತು ರಾಕೇಶ್ ಎಂಬ ರೈತರಿಬ್ಬರೂ ಬಂದಿದ್ದರು.
ಇದನ್ನು ಓದಿ: ಭಾರತ್ ಬಂದ್: ರಾಜ್ಯದಲ್ಲಿ ಮಿಶ್ರ ಪ್ರತಿಕ್ರಿಯೆ, ಮೆಜೆಸ್ಟಿಕ್ನಲ್ಲಿ ಬಸ್ಗೆ ಅಡ್ಡ ಮಲಗಿ ಕರವೇ ಆಕ್ರೋಶ
ಟವೆಲ್‍ನಲ್ಲಿ ಹಗ್ಗವನ್ನು ಮುಚ್ಚಿಟ್ಟುಕೊಂಡು ಬಂದ ರೈತರ ಬಳಿಯಿದ್ದ ಹಗ್ಗವನ್ನು ಗಮನಿಸಿ ಹಗ್ಗವನ್ನು ಕಿತ್ತುಕೊಳ್ಳಲು ಪೊಲೀಸರು ಹರಸಾಹಸ ಪಡಬೇಕಾಯಿತು.
ದೇಶದ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿಗೆ ಬಂದಿದ್ದೇವೆ ಎಂದು ಹಗ್ಗ ಕೊಡಲು ರೈತರು ನಿರಾಕರಿಸಿದರು. ಕೊನೆಗೂ ಹಗ್ಗವನ್ನು ಕಸಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದನ್ನು ಪೊಲೀಸರು ತಪ್ಪಿಸಿದರು. ನಂತರ ಪ್ರತಿಭಟನೆ ಶಾಂತಿಯುತವಾಗಿ ನಡೆದಿದ್ದು, ಕೇಂದ್ರ ಸರ್ಕಾರದ ವಿರುದ್ಧ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.