ಹೊಸ ನೇಮಕಾತಿಗೆ ರಾಜ್ಯ ಸರ್ಕಾರ ಬ್ರೇಕ್; ಅನೇಕ ಇಲಾಖೆಗಳಲ್ಲಿ ಸಿಬ್ಬಂದಿ ಕೊರತೆ

ಕೋವಿಡ್-19 ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಸರ್ಕಾರ ನೇಮಕಾತಿಗೆ ಬ್ರೇಕ್ ಹಾಕಿದ ನಂತರ ಜನರೊಂದಿಗೆ ನೇರವಾಗಿ ವ್ಯವಹರಿಸುವ ಇಲಾಖೆಗಳು ಸೇರಿದಂತೆ ಹಲವಾರು ಇಲಾಖೆಗಳು ಮಂಜೂರಾದ ಅರ್ಧದಷ್ಟು ನೌಕರರೊಂದಿಗೆ ಕಾರ್ಯನಿರ್ವಹಿಸುತ್ತಿವೆ.
ಮಾನವ ಸಂಪನ್ಮೂಲ ಕೊರತೆಯ ಪಟ್ಟಿ
ಮಾನವ ಸಂಪನ್ಮೂಲ ಕೊರತೆಯ ಪಟ್ಟಿ

ಬೆಂಗಳೂರು: ಕೋವಿಡ್-19 ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಸರ್ಕಾರ ನೇಮಕಾತಿಗೆ ಬ್ರೇಕ್ ಹಾಕಿದ ನಂತರ ಜನರೊಂದಿಗೆ ನೇರವಾಗಿ ವ್ಯವಹರಿಸುವ ಇಲಾಖೆಗಳು ಸೇರಿದಂತೆ ಹಲವಾರು ಇಲಾಖೆಗಳು ಮಂಜೂರಾದ ಅರ್ಧದಷ್ಟು ನೌಕರರೊಂದಿಗೆ ಕಾರ್ಯನಿರ್ವಹಿಸುತ್ತಿವೆ. ಇದರಿಂದಾಗಿ ಸರ್ಕಾರದ ವಿವಿಧ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ವಿಳಂಬವಾಗುತ್ತಿದೆ. ಆರ್ಥಿಕ ಚಟುವಟಿಕೆಗಳು ನಿಧಾನಗತಿಯಲ್ಲಿ ಸುಧಾರಣೆಯಾಗುವುದರೊಂದಿಗೆ ಸರ್ಕಾರ ನೇಮಕಾತಿ ಪ್ರಕ್ರಿಯೆಯನ್ನು ಪುನರ್ ಆರಂಭಿಸುವ ಸಾಧ್ಯತೆಯಿದೆ.

ಕೋವಿಡ್-19 ಸಾಂಕ್ರಾಮಿಕ ಪ್ರಾರಂಭವಾದಾಗಿನಿಂದ ಆರೋಗ್ಯ ಮತ್ತಿತರ ಅವಶ್ಯಕ ಸೇವೆಗಳ ಇಲಾಖೆಗಳನ್ನು ಹೊರತುಪಡಿಸಿದರೆ. ಉಳಿದ ಇಲಾಖೆಗಳಲ್ಲಿ ನೇಮಕಾತಿ ಪ್ರಕ್ರಿಯೆ ಸ್ಥಗಿತಗೊಳಿಸಲಾಗಿದೆ. ಹೊರ ಮೂಲದ ನೌಕರರಿಂದ ನಿರ್ವಹಣೆ ಮಾಡಲಾಗುತ್ತಿದೆ. ಕೃಷಿ, ಗೃಹ, ನಗರಾಭಿವೃದ್ಧಿ, ಆರೋಗ್ಯ, ಪ್ರವಾಸೋದ್ಯಮ, ಶಿಕ್ಷಣ, ಆರೋಗ್ಯ ಮತ್ತು ನಾಗರಿಕ ಪೂರೈಕೆ, ಇಂಧನ, ಜಲಸಂಪನ್ಮೂಲ, ಅಬಕಾರಿ, ವೈದ್ಯಕೀಯ ಶಿಕ್ಷಣ ಮತ್ತಿತರ 72 ಇಲಾಖೆಗಳಲ್ಲಿ 5 ಲಕ್ಷ ನೌಕರರು ಕೆಲಸ ಮಾಡುತ್ತಿದ್ದಾರೆ. 1.5 ಲಕ್ಷ  ಗುತ್ತಿಗೆ ನೌಕರರಿದ್ದಾರೆ.

ಪ್ರಸ್ತುತ ರಾಜ್ಯದಲ್ಲಿ ಮಂಜೂರಾದ  7.7 ಲಕ್ಷ ಹುದ್ದೆಗಳಲ್ಲಿ 2.4 ಲಕ್ಷ ಹುದ್ದೆಗಳು ಖಾಲಿ ಇವೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ. ಎಸ್. ಷಡಕ್ಷರಿ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ. ಕೃಷಿ, ಕಂದಾಯ, ಪಶು ಸಂಗೋಪನೆಯಂತಹ ಇತರ ಇಲಾಖೆಗಳಲ್ಲಿ ನೌಕರರ ಕೊರತೆಯಿದೆ. ಶೇ. 50 ರಷ್ಟು ಹುದ್ದೆಗಳ ಕೊರೆತೆಯಿರುವುದಾಗಿ ಕೃಷಿ ಇಲಾಖೆ ಮೂಲಗಳು ಹೇಳಿವೆ.

 2,099 ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳಲ್ಲಿ 400 ಮಾತ್ರ ಭರ್ತಿಯಾಗಿದೆ. ಪ್ರತಿ ಅಧಿಕಾರಿಯು ಎರಡರಿಂದ ಮೂರು ಗ್ರಾಮ ಪಂಚಾಯಿತಿಗಳನ್ನು ನಿರ್ವಹಿಸುತ್ತಾರೆ. ಅವರು ತಳಮಟ್ಟದ ಅಧಿಕಾರಿಗಳಾಗಿದ್ದು, ಸರ್ಕಾರದ ಯೋಜನೆಗಳು ಫಲಾನುಭವಿಗಳಿಗೆ  ತಲುಪುವಂತೆ ನೋಡಿಕೊಳ್ಳಬೇಕು. ಆದರೆ, ಸಿಬ್ಬಂದಿ ಕೊರತೆಯಿಂದಾಗಿ, ರೈತರು ಸಕಾಲಕ್ಕೆ ಪ್ರಯೋಜನವನ್ನು ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಮೂಲಗಳು ತಿಳಿಸಿವೆ.

ಕಂದಾಯ ಇಲಾಖೆಯಲ್ಲಿ ಇದೇ ರೀತಿಯಲ್ಲಿ ಭೂ ಸರ್ವೆಯರ್ ಗಳ ಕೊರತೆಯಿದೆ.  4,020 ಭೂ ಸರ್ವೆಯರ್ ಹುದ್ದೆಗಳು ಮಂಜೂರಾಗಿದ್ದು, 604 ಖಾಲಿಯಿವೆ ಎಂದು ಕಂದಾಯ ಸಚಿವ ಆರ್. ಅಶೋಕ್ ಇತ್ತೀಚಿಗೆ ಮುಕ್ತಾಯವಾದ ಅಧಿವೇಶನದಲ್ಲಿ ಹೇಳಿದ್ದರು. ಇದರಿಂದಾಗಿ ಕೃಷಿ ಭೂ ಸರ್ವೆ ಕಾರ್ಯ ವಿಳಂಬವಾಗಿದೆ ಎಂದು ಒಪ್ಪಿಕೊಳ್ಳುವ ಸಚಿವರು, ಶೀಘ್ರದಲ್ಲಿಯೇ ಭರ್ತಿ ಮಾಡುವುದಾಗಿ ತಿಳಿಸಿದ್ದಾರೆ. 

ಲೋಕೋಪಯೋಗಿ ಇಲಾಖೆಯಲ್ಲಿ ಕಿರಿಯ, ಸಹಾಯಕ ಎಂಜನಿಯರಿಂಗ್ ಗಳ ಕೊರತೆಯಿದ್ದು, ಕೆಪಿಎಸ್ ಸಿ ಮೂಲಕ ಭರ್ತಿ ಮಾಡಲಾಗುತ್ತಿದೆ. ಸಿಬ್ಬಂದಿ ಕೊರತೆಯಿಂದ ನೌಕರರಿಗೆ ಬಲವಂತವಾಗಿ ಹೆಚ್ಚುವರಿ ಕೆಲಸ ನೀಡಲಾಗುತ್ತಿದೆ. ಆದಾಯ ಬರುವಂತಹ ಸಬ್ ರಿಜಿಸ್ಟ್ರರ್, ಆರ್ ಟಿಒ ಮತ್ತಿತರ ಇಲಾಖೆಗಳಲ್ಲೂ ಸಿಬ್ಬಂದಿ ಕೊರತೆಯಿದೆ. ಇದರಿಂದಾಗಿ ಆದಾಯದ ಮೇಲೂ ಹೊಡೆತ ಬಿದ್ದಿದೆ. ನಮ್ಮ ಸಿಬ್ಬಂದಿ ಒತ್ತಡದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಹುದ್ದೆಗಳ ಭರ್ತಿಗೆ ಇದು ಸೂಕ್ತ ಸಮಯ, ಇಲ್ಲದಿದ್ದರೆ ಬೀದಿಗಿಳಿದು ಹೋರಾಟ ಮಾಡದೆ ನಮಗೆ ಪರ್ಯಾಯ ಮಾರ್ಗವಿಲ್ಲ ಎಂದು ಷಡಕ್ಷರಿ ಎಚ್ಚರಿಕೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com