ಕೋವಿಡ್-19: ಮೃತರ ಕುಟುಂಬಕ್ಕೆ ಪರಿಹಾರ ಮೊತ್ತ ಹೆಚ್ಚಿಸಿದ ರಾಜ್ಯ ಸರ್ಕಾರ!

ಕೋವಿಡ್ ನಿಂದ ಮೃತಪಟ್ಟ ಬಿಪಿಎಲ್ ಮತ್ತು ಬಿಪಿಎಲ್ ಯೇತರ ಕುಟುಂಬಗಳಿಗೆ ರಾಜ್ಯ ಸರ್ಕಾರವು ನೀಡುವ ಪರಿಹಾರ ಮೊತ್ತದಲ್ಲಿ ಬದಲಾವಣೆ ಮಾಡಿದ್ದು, ಬಿಪಿಎಲ್ ಕುಟುಂಬದ ವ್ಯಕ್ತಿಗೆ ನೀಡುವ ಪರಿಹಾರವನ್ನು ಒಂದು ರೂ.1 ಲಕ್ಷದಿಂದ ರೂ.1.50 ಲಕ್ಷಕ್ಕೆ ಹೆಚ್ಚಳ ಮಾಡಲಾಗಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕೋವಿಡ್ ನಿಂದ ಮೃತಪಟ್ಟ ಬಿಪಿಎಲ್ ಮತ್ತು ಬಿಪಿಎಲ್ ಯೇತರ ಕುಟುಂಬಗಳಿಗೆ ರಾಜ್ಯ ಸರ್ಕಾರವು ನೀಡುವ ಪರಿಹಾರ ಮೊತ್ತದಲ್ಲಿ ಬದಲಾವಣೆ ಮಾಡಿದ್ದು, ಬಿಪಿಎಲ್ ಕುಟುಂಬದ ವ್ಯಕ್ತಿಗೆ ನೀಡುವ ಪರಿಹಾರವನ್ನು ಒಂದು ರೂ.1 ಲಕ್ಷದಿಂದ ರೂ.1.50 ಲಕ್ಷಕ್ಕೆ ಹೆಚ್ಚಳ ಮಾಡಲಾಗಿದೆ. 

ಇದೇ ವೇಳೆ ಬಿಪಿಎಲ್ ಯೇತರ ಕುಟುಂಬಕ್ಕೆ ರೂ.50 ಸಾವಿರ ಪರಿಹಾರವನ್ನು ಹೊಸದಾಗಿ ಘೋಷಿಸಿ ಮಂಗಳವಾರ ಆದೇಶ ಹೊರಡಿಸಿದೆ. 

ಬಿಪಿಎಲ್‌ ಕುಟುಂಬದವರಿಗೆ ರಾಜ್ಯ ಸರ್ಕಾರದ ಸಂಧ್ಯಾ ಸುರಕ್ಷಾ ಯೋಜನೆಯಡಿ ರೂ.1 ಲಕ್ಷ ಮತ್ತು ಎಸ್‌ಡಿಆರ್‌ಎಫ್‌ನಿಂದ ರೂ. 50 ಸಾವಿರ ಸೇರಿ 1.50 ಲಕ್ಷ ರು. ನೀಡಲಾಗುತ್ತದೆ. 

ಬಿಪಿಎಲ್‌ ಕುಟುಂಬದ ಒಂದಕ್ಕಿಂತ ಹೆಚ್ಚು ಮಂದಿ ಕೋವಿಡ್‌ನಿಂದ ಮೃತಪಟ್ಟಿದ್ದರೆ ಆಗ ಮೊದಲ ವ್ಯಕ್ತಿಗೆ ರೂ.1.50 ಲಕ್ಷ ಹಾಗೂ ಉಳಿದವರಿಗೆ ತಲಾ ರೂ.50 ಸಾವಿರ ಪರಿಹಾರ ದೊರೆಯುತ್ತದೆ. ಇನ್ನು, ಬಿಪಿಎಲ್‌ಯೇತರ ಕುಟುಂಬದಲ್ಲಿ ಕೋವಿಡ್‌ನಿಂದ ಸಾವನ್ನಪ್ಪಿದ್ದರೆ ತಲಾ ರೂ.50 ಸಾವಿರ ಪರಿಹಾರ ನೀಡಲಾಗುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಕೋವಿಡ್‌ನಿಂದ ಮೃತರಾದ ಬಿಪಿಎಲ್‌ ಕುಟುಂಬದವರಿಗೆ ರೂ.1 ಲಕ್ಷ ನೀಡುವ ಆದೇಶವನ್ನು ಹಿಂಪಡೆದು ಕೆಲವೇ ಗಂಟೆಯಲ್ಲಿ ಪರಿಷ್ಕೃತ ಆದೇಶ ಹೊರಡಿಸಲಾಗಿದೆ. 

ಬಿಪಿಎಲ್‌ಯೇತರ ಕುಟುಂಬದಲ್ಲಿ ಒಂದು ಅಥವಾ ಒಂದಕ್ಕಿಂತ ಹೆಚ್ಚು ವ್ಯಕ್ತಿಗಳು ಮೃತಪಟ್ಟಿದ್ದರೆ ಎಸ್‌ಡಿಆರ್‌ಎಫ್‌ ಅಡಿ ಮೃತ ಸಂಖ್ಯೆಗನುಗುಣವಾಗಿ ತಲಾ 50 ಸಾವಿರ ರು. ಪಾವತಿಸಲಾಗುತ್ತದೆ ಎಂದು ಆದೇಶದಲ್ಲಿ ಹೇಳಲಾಗಿದೆ.

ಎಲ್ಲಾ ತಾಲೂಕು ಕಚೇರಿ, ನಾಡ ಕಚೇರಿ ಮತ್ತು ಬಿಬಿಎಂಪಿ ವ್ಯಾಪ್ತಿಯ ವಾರ್ಡ್‌ ಕಚೇರಿಗಳಲ್ಲಿ ಅರ್ಜಿ ಸಲ್ಲಿಸಬಹುದು. ವ್ಯಕ್ತಿಯು ರಾಜ್ಯದ ಯಾವುದೇ ಭಾಗದಲ್ಲಿ ಮೃತಪಟ್ಟಿದ್ದರೂ ಸಹ ಅರ್ಜಿದಾರರು ತಮ್ಮ ವಾಸಸ್ಥಳದ ವ್ಯಾಪ್ತಿಯಲ್ಲಿಯೇ ಅರ್ಜಿ ಸಲ್ಲಿಸಬೇಕು ಎಂದು ತಿಳಿಸಲಾಗಿದೆ.

ಮಾರ್ಗಸೂಚಿಗಳ ಪ್ರಕಾರ, ರಾಜ್ಯದ ಎಸ್‌ಎಸ್‌ಎಸ್ ಅಥವಾ ಕೇಂದ್ರದ ಪ್ರಾಯೋಜಿತ ಎಸ್‌ಡಿಆರ್‌ಎಫ್‌ನಿಂದ ಪರಿಹಾರ ಪಡೆಯಲು ಇಚ್ಛಿಸುವ ಕೋವಿಡ್ ಮೃತರ ಕುಟುಂಬವು ವ್ಯಕ್ತಿಯು ಕೋವಿಡ್ ನಿಂದ ಸಾವನ್ನಪ್ಪಿದ್ದಾರೆಂದು ನಮೂದಿಸಿರುವ ಮರಣ ಪ್ರಮಾಣ ಪತ್ರವನ್ನು ಹಾಜರುಪಡಿಸಬೇಕಿದೆ. ಅಲ್ಲದೆ, ಮೃತ ವ್ಯಕ್ತಿ ಕುಟುಂಬದಲ್ಲಿ ದುಡಿಯುವ ವ್ಯಕ್ತಿ ಮತ್ತು 18 ವರ್ಷಕ್ಕಿಂತ ಮೇಲ್ಪಟ್ಟವರಾಗಿರಬೇಕು. ಕುಟುಂಬದ ಸದಸ್ಯರು ವೈದ್ಯಕೀಯ ಪ್ರಮಾಣಪತ್ರ ಅಥವಾ ಕೋವಿಡ್ -19 ಸಾವಿನ ದೃಢೀಕರಣ ಸಮಿತಿಯಿಂದ ನೀಡುವ ಪ್ರಮಾಣಪತ್ರವನ್ನು ಹಾಜರುಪಡಿಸಬೇಕು.

ಒಂದು ವೇಳೆ ಮರಣ ಪ್ರಮಾಣಪತ್ರಗಳು ಅಥವಾ ಸಂಬಂಧಿತ ದಾಖಲೆಗಳನ್ನು ಹೊಂದಿರದ ಕುಟುಂಬಗಳು, ಪರಿಹಾರ ಪಡೆದುಕೊಳ್ಳಲು ಜಿಲ್ಲೆಗಳಲ್ಲಿನ ಉಪ ಆಯುಕ್ತರನ್ನು ಸಂಪರ್ಕಿಸಬಹುದು ಎಂದು ತಿಳಿಸಲಾಗಿದೆ. 

ಕೊವಿಡ್​ನಿಂದ ಮೃತರ ಕುಟುಂಬಗಳಿಗೆ ನೀಡಲಾಗುವ ವಿಚಾರ ಕುರಿತು ನಿನ್ನೆಯಷ್ಟೇ ಕೆಲ ಗೊಂದಲ ಉಂಟಾಗಿತ್ತು. 1 ಲಕ್ಷ ರೂಪಾಯಿ ಬದಲಿಗೆ 50 ಸಾವಿರ ನೀಡಲು ನಿರ್ಧಾರ ಮಾಡಲಾಗಿದೆ ಎಂದು ಹೇಳಲಾಗಿತ್ತು. 1 ಲಕ್ಷ ರೂಪಾಯಿ ಪರಿಹಾರ ಬಿಡುಗಡೆಗೆ ಹೊರಡಿಸಿದ್ದ ಆದೇಶ ವಾಪಸ್ ಪಡೆಯಲಾಗಿದೆ ಎಂದು ಹೇಳಲಾಗಿತ್ತು. ಕೇಂದ್ರದ ಗೃಹ ಸಚಿವಾಲಯದ ಸೂಚನೆ ಹಿನ್ನೆಲೆಯಲ್ಲಿ ಕೋವಿಡ್ ಮೃತರಿಗೆ 50 ಸಾವಿರ ರೂ ಪರಿಹಾರ ಎಂದು ಚರ್ಚೆಯಾಗಿತ್ತು. ಈ ಬಗ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಕೂಡ ಟೀಕಾಪ್ರಹಾರ ನಡೆಸಿದ್ದರು. 

ರಾಜ್ಯ ಸರ್ಕಾರ ಆದೇಶಿಸಿರುವ 1 ಲಕ್ಷ ರೂಪಾಯಿ ಪರಿಹಾರವನ್ನು ನೀಡಿಲ್ಲ. ಅದಾಗಲೇ ಈಗ ಪರಿಹಾರ ಧನ ಕಡಿತಗೊಳಿಸಲಾಗಿದೆ. ಈ ಘೋಷಣೆ, ಬದಲಾವಣೆಗಳ ಬಗ್ಗೆ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದರು. 

ವಿಧಾನಸಭಾ ಅಧಿವೇಶನದ ವೇಳೆಯಲ್ಲಿ ಕೂಡ ಸಚಿವ ಬಿ. ಶ್ರೀರಾಮುಲು ಹಾಗೂ ಸಿದ್ದರಾಮಯ್ಯ ನಡುವೆ ಪರಿಹಾರ ಧನ ವಿಚಾರವಾಗಿ ವಾಗ್ವಾದ ನಡೆದಿತ್ತು. ಈ ನಡುವೆ ಇಂದು ಉಂಟಾದ ಗೊಂದಲ ಮತ್ತೆ ಕೊರೊನಾದಿಂದ ಮೃತಪಟ್ಟವರ ಕುಟುಂಬಕ್ಕೆ ಪರಿಹಾರ ಧನ ನೀಡುವ ಬಗೆಗಿನ ಚರ್ಚೆ ಕಾವೇರುವಂತೆ ಮಾಡಿತ್ತು.

ಈ ಎಲ್ಲಾ ಬೆಳವಣಿಗೆ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಕೊವಿಡ್​ನಿಂದ ಮೃತಪಟ್ಟವರ ಕುಟುಂಬಕ್ಕೆ 1 ಲಕ್ಷ ಪರಿಹಾರ ನೀಡುತ್ತೇವೆ. ಸರ್ಕಾರ ಘೋಷಿಸಿರುವಂತೆ 1 ಲಕ್ಷ ಪರಿಹಾರ ನೀಡುತ್ತೇವೆ. 1 ಲಕ್ಷ ರೂಪಾಯಿ ಪರಿಹಾರ ನೀಡುವ ವಿಚಾರದಲ್ಲಿ ಬದಲಾವಣೆಯಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಮುಖ್ಯಮಂತ್ರಿಗಳ ಆದೇಶ ಬೆನ್ನಲ್ಲೇ ಈ ಅಧಿಕೃತ ಆದೇಶ ಹೊರಬಂದಿದೆ. ಆದೇಶದಂತೆ ಕೊರೋನಾದಿಂದ ಮೃತಪಟ್ಟ ಅರ್ಹ ಸಂತ್ರಸ್ಥ ಕುಟುಂಬದ ಕಾನೂನು ಬದ್ಧ ವಾರಸುದಾರರಿಗೆ ಪರಿಹಾರದ ಮೊತ್ತ ಲಭಿಸಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com