3 ಅಂತಸ್ತಿನ ಕಟ್ಟಡ ಕುಸಿತ: ಆತಂಕದಲ್ಲಿ ‘ಬಮೂಲ್’ ಕ್ವಾರ್ಟರ್ಸ್'ನ ನಿವಾಸಿಗಳು!

3 ಅಂತಸ್ತಿನ ಕಟ್ಟಡ ಕುಸಿತ ಪ್ರಕರಣವು ಬಮೂಲ್ ಕ್ವಾರ್ಟರ್ಸ್ ನಲ್ಲಿರುವ ಇತರೆ ನಿವಾಸಿಗಳು ಆತಂಕಕ್ಕೊಳಗಾಗುವಂತೆ ಮಾಡಿದೆ. 
ಕಟ್ಟಡ ಕುಸಿದು ಬಿದ್ದಿರುವುದು.
ಕಟ್ಟಡ ಕುಸಿದು ಬಿದ್ದಿರುವುದು.

ಬೆಂಗಳೂರು: 3 ಅಂತಸ್ತಿನ ಕಟ್ಟಡ ಕುಸಿತ ಪ್ರಕರಣವು ಬಮೂಲ್ ಕ್ವಾರ್ಟರ್ಸ್ ನಲ್ಲಿರುವ ಇತರೆ ನಿವಾಸಿಗಳು ಆತಂಕಕ್ಕೊಳಗಾಗುವಂತೆ ಮಾಡಿದೆ. 

ಡೇರಿ ವೃತ್ತದಲ್ಲಿರುವ ಬೆಂಗಳೂರು ಹಾಲು ಒಕ್ಕೂಟಕ್ಕೆ (ಬಮೂಲ್) ಸೇರಿದ್ದ ಕ್ವಾರ್ಟರ್ಸ್'ನ ಮೂರು ಅಂತಸ್ತಿನ ಜೆ ಬ್ಲಾಕ್ ಕಟ್ಟಡ ಮಂಗಳವಾರ ಬೆಳಿಗ್ಗೆ 9.25ರ ಸುಮಾರಿಗೆ ಕುಸಿದುಬಿದ್ದಿತ್ತು. ಭದ್ರತಾ ಸಿಬ್ಬಂದಿ ಹಾಗೂ ನಿವಾಸಿಗಳ ಸಮಯ ಪ್ರಜ್ಞೆಯಿಂದಾಗಿ ದೊಡ್ಡ ಅನಾಹುತವೊಂದು ತಪ್ಪಿದಂತಾಗಿತ್ತು. 

ಬಮೂಲ್ ಉದ್ಯೋಗಿಗಳ ಕುಟುಂಬದವರ ವಾಸಕ್ಕಾಗಿ 35 ರ್ಷಗಳ ಹಿಂದೆ ಕ್ವಾರ್ಟರ್ಸ್ ನಿರ್ಮಿಸಲಾಗಿತ್ತು. ಇದರಲ್ಲಿ 18 ಮನೆಗಳು ಇದ್ದವು. 40ಕ್ಕೂ ಹೆಚ್ಚು ಮಂದಿ ವಾಸವಿದ್ದರು. ಮಂಗಳವಾರ ಬೆಳಿಗ್ಗೆ ಕಟ್ಟಡದ ಮಧ್ಯಭಾಗದ ಅಡಿಪಾಯದಲ್ಲಿ ನೆಲ ಕುಸಿದು, ಅದರ ಜೊತೆಯಲ್ಲಿ ಕಟ್ಟಡವೂ ಕುಸಿದುಬಿದ್ದಿತ್ತು. 

ನನ್ನ ಹೆಂಡತಿ ತನ್ನೂರಿಗೆ ಹೋಗಿದ್ದಳು, ಮನೆಯಲ್ಲಿ ನಾನೊಬ್ಬನೇ ಇದ್ದರಿಂದ ಬೆಳಿಗ್ಗೆ 8.30ರ ಸುಮಾರಿಗೆ ತಿಂಡಿ ತಿನ್ನುವ ಸಲುವಾಗಿ ಹತ್ತಿರದಲ್ಲೇ ಇದ್ದ ಮಗಳ ಮನೆಗೆ ಹೋಗಿದ್ದೆ. ಈ ವೇಳೆ ನೆರೆಮನೆಯವರು ದೂರವಾಣಿ ಕರೆ ಮಾಡಿ ಕಟ್ಟಡ ಅಲುಗಾಡುತ್ತಿದ್ದು, ಕೂಡಲೇ ಹೊರಗೆ ಬರುವಂತೆ ತಿಳಿಸಿದ್ದರು. ಈ ವೇಳೆ ಕಟ್ಟಡದ ಬಳಿ ಹೋದ ಕೆಲವೇ ನಿಮಿಷಗಳಲ್ಲಿ ಮೊದಲ ಹಾಗೂ ಎರಡನೇ ಮಹಡಿ ಕುಸಿದು ಬೀಳುತ್ತಿರುವ ದೃಷ್ಟ ಕಣ್ಣಿಗೆ ಬಿತ್ತು. ಘಟನೆ ನಿಜಕ್ಕೂ ಆಘಾತವನ್ನುಂಟು ಮಾಡಿದೆ. ಭಯಕ್ಕೆ ನನ್ನ ಕಾಲುಗಳು ಅಲುಗಾಡಲು ಶುರುವಾಗಿತ್ತು ಎಂದು ಕಟ್ಟಡದ ಮೊದಲನೇ ಮಹಡಿಯಲ್ಲಿ ವಾಸವಿದ್ದ ಬಾಲಕೃಷ್ಣಾ ಎಂಬುವವರು ಹೇಳಿದ್ದಾರೆ. 

ಮತ್ತೊಬ್ಬ ನಿವಾಸಿ ಕೇಶವ ಮೂರ್ತಿ ಎಂಬುವವರು ಮಾತನಾಡಿ, ಸೋಮವಾರ ರಾತ್ರಿಯಿಂದಲೇ ನಮಗೆ ಆತಂಕ ಶುರುವಾಗಿತ್ತು. ಮನೆಯ ಮೇಲ್ಚಾವಣಿಯಲ್ಲಿ ಬಿರುಕು ಬೀಳುತ್ತಿತ್ತು. ನೆಲಮಹಡಿಯಲ್ಲಿ ವಾಸವಿದ್ದರು ಭಾನುವಾರ ರಾತ್ರಿಯೇ ಮನೆ ಖಾಲಿ ಮಾಡಿದ್ದರು. ಬಳಿಕ ಇಂಜಿನಿಯರಿಂಗ್'ಗಳಿಗೆ ಮಾಹಿತ ನೀಡಲಾಗಿತ್ತು. ಬೆಳಿಗ್ಗೆ 8.30ರ ಸುಮಾರಿಗೆ ಬಂದ ಎಂಜಿನಿಯರ್ ಗಳು ಕಟ್ಟಡದ ತೊರೆಯುವಂತೆ ತಿಳಿಸಿದ್ದರು. ಬಳಿಕ ಪಾತ್ರೆಗಳು ಹಾಗೂ ಇತರೆ ವಸ್ತುಗಳನ್ನು ಮನೆಗಳಲ್ಲಿಯೇ ಬಿಟ್ಟು ಹೊರ ಬಂದಿದ್ದವು. ಕಟ್ಟಡದಿಂದ ಹೊರ ಬಂದ ಕೆಲವೇ ಗಂಟೆಗಳಲ್ಲಿ ಕಟ್ಟಡ ಕುಸಿದು ಬಿದ್ದಿತ್ತು ಎಂದು ಹೇಳಿದ್ದಾರೆ. 

ನಿವೃತ್ತಿ ಬಳಿಕ 6 ತಿಂಗಳ ಹಿಂದಷ್ಟೇ 2ನೇ ಮಹಡಿಯ ಮನೆಯನ್ನು ಖಾಲಿ ಮಾಡಿದ್ದ ಮಂಜುನಾಥ್ ಎಂಬುವವರು ಮಾತನಾಡಿ, ಏನಾಯಿತು ಎಂದು ನೋಡಲು ನಾನು ಸ್ಥಳಕ್ಕೆ ತೆರಳಿದ್ದೆ. ಕಟ್ಟಡ ಕುಸಿಯುವುದನ್ನು ಯಾರೂ ನಿರೀಕ್ಷಿಸಿರಲಿಲ್ಲ. ನಾವು ಸ್ಥಳದಲ್ಲಿದ್ದ ಸಮಯದಲ್ಲಿ ಸಮಸ್ಯೆ ಕಂಡು ಬಂದ ಕೂಡಲೇ ಪರಿಹರಿಸಲಾಗುತ್ತಿತ್ತು. ಆದರೆ, ಮಳೆ ಬಂದಾಗ ಮನೆ ಸೋರುತ್ತಿದ್ದದ್ದು ಮಾತ್ರ ಸಾಮಾನ್ಯವಾಗಿತ್ತು. ಇದು ಕಟ್ಟಡ ಶಿಥಿಲಾವಸ್ಥೆಗೆ ಹೋಗಲು ಕಾರಣವಾಗಿದೆ ಎಂದು ಹೇಳಿದ್ದಾರೆ. 

ಈ ನಡುವೆ ಕಟ್ಟಡ ಕುಸಿದು ಬಿದ್ದು, ವಾಸಕ್ಕೆ ನೆಲೆಯಿಲ್ಲದೆ ಕಂಗಾಲಾಗಿರುವ ಜನರಿಗೆ ಬಮೂಲ್ ವ್ಯವಸ್ಥೆಗಳನ್ನು ಕಲ್ಪಿಸುತ್ತಿದೆ ಎಂದು ಬಂದಿದೆ. ಇನ್ನು ಕಟ್ಟಡ ಕುಸಿದ ಪ್ರಕರಣ ಇದೀಗ ಇತರೆ ಕಟ್ಟಡದಲ್ಲಿರುವ ನಿವಾಸಿಗಳನ್ನು ಆತಂಕಕ್ಕೊಳಗಾಗುವಂತೆ ಮಾಡಿದೆ. 

ಕಟ್ಟಡದ ಅವಶೇಷಗಳ ತೆರವು ಕಾರ್ಯಾಚರಣೆಯನ್ನು ಬುಧವಾರ ಪೂರ್ಣಗೊಳ್ಳಲಿದೆ ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ಹೇಳಿದ್ದಾರೆ. 

ಇನ್ನು ಕಟ್ಟಡ ಕುಸಿತಗೊಂಡ ಸಂದರ್ಭದಲ್ಲಿ ಕಟ್ಟಡದೊಳಗೆ ಎರಡು ನಾಯಿಗಳು ಸಿಕ್ಕಿಹಾಕಿಕೊಂಡಿದ್ದವು. ಇದನ್ನು ತಿಳಿದ ಅಗ್ನಿಶಾಮಕ ದಳಕ ಸಿಬ್ಬಂದಿ ಬಾಗಿಲ ಮೂಲಕ ಮನೆಯೊಳಗೆ ಹೋಗುವುದರಿಂದ ಆಗಬಹುದಾದ ಅನಾಹುತ ಅರಿತು ಹೊರಗಿನಿಂದಲೇ ಒಬ್ಬರ ಮೇಲೊಬ್ಬರು ಹತ್ತಿ ನಾಯಿಗಳನ್ನು ರಕ್ಷಿಸುವಲ್ಲಿ ಯಶಸ್ವಿಯಾದರು. ಅಗ್ನಿಶಾಮಕ ಸಿಬ್ಬಂದಿಗಳ ಈ ಕಾರ್ಯಕ್ಕೆ ಇದೀಗ ಎಲ್ಲೆಡೆ ಮೆಚ್ಚುಗೆಗಳು ವ್ಯಕ್ತವಾಗತೊಡಗಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com