ದಸರಾ ರಜೆ ನಂತರ 1-5ನೇ ತರಗತಿಗಳ ಆರಂಭಕ್ಕೆ ರಾಜ್ಯ ಸರ್ಕಾರ ಚಿಂತನೆ!

ದಸರಾ ರಜೆ ಬಳಿಕ 1 ರಿಂದ 5ನೇ ತರಗತಿಗಳ ಆರಂಭಕ್ಕೆ ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರು ಬುಧವಾರ ಹೇಳಿದ್ದಾರೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ದಸರಾ ರಜೆ ಬಳಿಕ 1 ರಿಂದ 5ನೇ ತರಗತಿಗಳ ಆರಂಭಕ್ಕೆ ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರು ಬುಧವಾರ ಹೇಳಿದ್ದಾರೆ. 

ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ದಸರಾ ಬಳಿಕ 1 ರಿಂದ 5ನೇ ತರಗತಿ ಆರಂಭಕ್ಕೆ ಚಿಂತನೆ ನಡೆಸಲಾಗಿದೆ. ಆದರೆ ಈ ನಿರ್ಧಾರಕ್ಕೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಈಗಾಗಲೇ ಶಾಲೆಗಳಲ್ಲಿ ಸಿದ್ಧತೆ ಆರಂಭವಾಗಿದ್ದು, ಕೊವಿಡ್ ತಾಂತ್ರಿಕಾ ಸಲಹಾ ಸಮಿತಿಯ ಅನುಮತಿಗಾಗಿ ಕಾಯಲಾಗುತ್ತಿದೆ ಎಂದು ಹೇಳಿದ್ದಾರೆ. 

ಕರ್ನಾಟಕ ರಾಜ್ಯ ಸಾರ್ವಜನಿಕ ಶಿಕ್ಷಣ ಇಲಾಖೆ (ಡಿಪಿಐ) ಕಳೆದ ಜೂನ್ ನಲ್ಲಿ ಅಕ್ಟೋಬರ್ 10 ರಿಂದ 20 ರವರೆಗೆ 11 ದಿನಗಳ ದಸರಾ ರಜಾದಿನಗಳನ್ನು ಘೋಷಿಸಿತ್ತು. ಬಳಿಕ ಹೇಳಿಕೆ ನೀಡಿದ್ದ ಸಚಿವ ನಾಗೇಶ್ ಅವರು, ಶೇ.1ಕ್ಕಿಂತ ಕಡಿಮೆ ಪಾಸಿಟಿವಿಟಿ ದರ ಇರುವ ಜಿಲ್ಲೆಗಳಲ್ಲಿ ಅಕ್ಟೋಬರ್ 1 ರಿಂದ 6-12 ತರಗತಿಗಳನ್ನು ಪೂರ್ಣ ಸಾಮರ್ಥ್ಯದ ವಿದ್ಯಾರ್ಥಿಗಳೊಂದಿಗೆ ಆರಂಭಿಸುವುದಾಗಿ ಘೋಷಿಸಿದ್ದರು. 

ವಾರದಲ್ಲಿ ಐದು ದಿನ ಶಾಲೆಗಳು ತೆರೆಯಲಿದ್ದು, ಶನಿವಾರ ಮತ್ತು ಭಾನುವಾರಗಳನ್ನು ಶಾಲೆ ಸ್ವಚ್ಛಗೊಳಿಸಲು ಮತ್ತು ಸ್ಯಾನಿಟೈಸ್ ಮಾಡುವ ಸಲುವಾಗಿ ಮೀಸಲಿಡಲಾಗುತ್ತದೆ. ಈ ನಡುವೆ ಮಧ್ಯಾಹ್ನದ ಬಿಸಿಯೂ    ಟದ ಯೋಜನೆಯನ್ನು ಪುನರಾರಂಭಿಸುವ ಕುರಿತಂತೆಯೂ ಶಿಕ್ಷಣ ಇಲಾಖೆ ಚಿಂತನೆ ನಡೆಸುತ್ತಿದ್ದು. ಈ ಕುರಿತ ಅಂತಿಮ ನಿರ್ಧಾರವನ್ನು ಅಕ್ಟೋಬರ್ 1 ರ ನಂತರ ತೆಗೆದುಕೊಳ್ಳಲಿದೆ ಎಂದು ಹೇಳಲಾಗುತ್ತಿದೆ. 

ಶಾಲೆ ಆರಂಭ ಕುರಿತು ಸಂತಸ ವ್ಯಕ್ತಪಡಿಸುತ್ತಿರುವ ವಿದ್ಯಾರ್ಥಿಗಳು, ಆತಂಕದಲ್ಲಿ ಪೋಷಕರು
ಈ ನಡುವೆ ಶಾಲೆಗೆ ತೆರಳಲು ವಿದ್ಯಾರ್ಥಿಗಳು ಉತ್ಸುಕರಾಗಿದ್ದು, ಪೋಷಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಕೋರಮಂಗಲ ಶಾಲೆಯೊಂದರ 5ನೇ ತರಗತಿ ವಿದ್ಯಾರ್ಥಿ ಮಾತನಾಡಿ, ಶಾಲೆಗೆ ಮರಳಿ ಹೋಗಬೇಕು. ನನ್ನ ಸ್ನೇಹಿತರು ಹಾಗೂ ಶಿಕ್ಷಕರನ್ನು ಭೇಟಿ ಮಾಡಬೇಕು ಎಂದು ಹೇಳಿದ್ದಾಳೆ. ಆದರೆ, ಈ ಉತ್ಸುಕತೆಯು ಪೋಷಕರಲ್ಲಿ ಕಂಡು ಬರುತ್ತಿಲ್ಲ. 

ನೋಂದಾಯಿತ ಅನುದಾನರಹಿತ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟ (ರುಪ್ಸಾ)ವು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದು, ಶಿಫ್ಟ್ ರೀತಿಯಲ್ಲಿ ಶಾಲೆಗಳ ಆರಂಭಿಸಲು ಅನುಮತಿ ನೀಡಬೇಕೆಂದು ಮನವಿ ಮಾಡಿಕೊಂಡಿದೆ. 

ಇನ್ನೂ ಲಸಿಕೆ ಹಾಕದ ಸಣ್ಣ ಮಕ್ಕಳಿಗೆ ಆಫ್‌ಲೈನ್ ತರಗತಿಗಳನ್ನು ಪ್ರಾರಂಭಿಸಲು ಇಷ್ಟೊಂದು ಆತುರವೇಕೆಂಬುದು ನನಗೆ ಅರ್ಥವಾಗುತ್ತಿಲ್ಲ, ಈ ಸಮಯದಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸುವುದು ಯಾರಿಗೂ ಸುಲಭವಲ್ಲ. ಅಪಾಯವನ್ನು ಮೈಮೇಲೆ ಎಳೆದುಕೊಳ್ಳಲು ನಮಗಿಷ್ಟವಿಲ್ಲ ಎಂದು ಸುಮನ್ ಜೈನ್ ಎಂಬುವವರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com