ಡಾ ಶಿವಕುಮಾರ ಸ್ವಾಮೀಜಿಯವರ 115ನೇ ಜಯಂತ್ಯೋತ್ಸವ: ಗದ್ದುಗೆಗೆ ವಿಶೇಷ ಪೂಜೆ, ಕಂಚಿನ ಪ್ರತಿಮೆ ಮೆರವಣಿಗೆ, ಭಕ್ತಾದಿಗಳ ಆಗಮನ
ಇಂದು ಏಪ್ರಿಲ್ 1, ಶುಕ್ರವಾರ, ನಡೆನಾಡಿದ ದೇವರು, ತ್ರಿವಿಧ ದಾಸೋಹಿ ಸಿದ್ಧಗಂಗಾ ಮಠದ ಡಾ ಶಿವಕುಮಾರ ಸ್ವಾಮೀಜಿ ಅವರ 115ನೇ ಜಯಂತ್ಯೋತ್ಸವ.
Published: 01st April 2022 08:46 AM | Last Updated: 01st April 2022 08:53 AM | A+A A-

ಸಿದ್ದಗಂಗಾ ಶ್ರೀಗಳು(ಸಂಗ್ರಹ ಚಿತ್ರ)
ತುಮಕೂರು: ಇಂದು ಏಪ್ರಿಲ್ 1, ಶುಕ್ರವಾರ, ನಡೆನಾಡಿದ ದೇವರು, ತ್ರಿವಿಧ ದಾಸೋಹಿ ಸಿದ್ಧಗಂಗಾ ಮಠದ ಡಾ ಶಿವಕುಮಾರ ಸ್ವಾಮೀಜಿ ಅವರ 115ನೇ ಜಯಂತ್ಯೋತ್ಸವ.
ಸಿದ್ಧಗಂಗಾ ಶ್ರೀಗಳ ಸಾಮಾಜಿಕ ಕಾರ್ಯಗಳು, ತ್ರಿವಿಧ ದಾಸೋಹ ಇಡೀ ದೇಶಕ್ಕೆ ಅನುಕರಣೀಯ, ಲಕ್ಷಾಂತರ ಭಕ್ತರು ಇಂದು ಅವರ ಜಯಂತ್ಯೋತ್ಸವದಲ್ಲಿ ಭಾಗಿಯಾಗುತ್ತಿದ್ದಾರೆ. ಅವರ ನಿಸ್ವಾರ್ಥ ಬದುಕು ನಮಗೆಲ್ಲ ಆದರ್ಶ. ಅವರ ದಾರಿಯೇ ನಮಗೆ ದಾರಿದೀಪ ಎಂದು ನಂಬಿಕೊಂಡು ಮುನ್ನಡೆಯುವವರು ಲಕ್ಷಾಂತರ, ಕೋಟ್ಯಂತರ ಮಂದಿ.
ಗದ್ದುಗೆಗೆ ವಿಶೇಷ ಪೂಜೆ, ಅಭಿಷೇಕ: ಇಂದು ಶಿವಕುಮಾರ ಸ್ವಾಮಿಗಳ ಜಯಂತ್ಯೋತ್ಸವ ಹಿನ್ನೆಲೆಯಲ್ಲಿ ಗದ್ದುಗೆಗೆ ವಿಶೇಷ ಪೂಜೆ, ಅಭಿಷೇಕ ನೆರವೇರಿಸಲಾಗಿದೆ. ಸಿದ್ದಗಂಗಾ ಶ್ರೀಗಳ ಈಗಿನ ಸಿದ್ಧಲಿಂಗ ಶ್ರೀಗಳ ನೇತೃತ್ವದಲ್ಲಿ ಪೂಜೆ ನೆರವೇರಿಸಲಾಗಿದೆ. ಗದ್ದುಗೆಗೆ ಪೂಜೆ ಬಳಿಕ ಶ್ರೀಗಳ ಕಂಚಿನ ಪ್ರತಿಮೆ ಮೆರವಣಿಗೆ ಮಾಡಲಾಗುತ್ತದೆ.
ಸಿದ್ಧಗಂಗಾ ಮಠದಲ್ಲಿ ಇಂದು ಬೆಳಗ್ಗೆ 11 ಗಂಟೆಯ ವೇಳೆಗೆ ಗುರುವಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಇದರಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾಗಿಯಾಗುತ್ತಿದ್ದು ವಿಶೇಷ ಭದ್ರತೆ ಒದಗಿಸಲಾಗಿದೆ. ಅಮಿತ್ ಶಾ ಅವರ ಜೊತೆ ರಾಜ್ಯದ ಬಿಜೆಪಿ ನಾಯಕರು, ಮುಖ್ಯಮಂತ್ರಿಗಳು ಭಾಗವಹಿಸುತ್ತಿದ್ದು ಭದ್ರತೆಗಾಗಿ 2 ಸಾವಿರಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದೆ.
ತುಮಕೂರಿನ ಸಿದ್ದಗಂಗಾ ಮಠಕ್ಕೆ ಬೆಳಗ್ಗೆ 5 ಗಂಟೆಯಿಂದಲೇ ಭಕ್ತಾದಿಗಳು ಆಗಮಿಸುತ್ತಿದ್ದಾರೆ. ಮಠಕ್ಕೆ ಬರುವ ಎಲ್ಲಾ ಭಕ್ತರಿಗೆ ಬೆಳಗ್ಗೆ ತಿಂಡಿಯಿಂದ ಹಿಡಿದು ಮಧ್ಯಾಹ್ನ ಭೋಜನ, ರಾತ್ರಿಯ ಭೋಜನ ವ್ಯವಸ್ಥೆಯಿರುತ್ತದೆ. ಈಗಾಗಲೇ ಭಕ್ತರಿಗೆ ಪ್ರಸಾದ ವಿತರಣೆ ವ್ಯವಸ್ಥೆಗೆ ಸಿದ್ಧತೆ ಆರಂಭವಾಗಿದೆ. ಬರೋಬ್ಬರಿ 20 ಎಕರೆ ಪ್ರದೇಶದಲ್ಲಿ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.
ತುಮಕೂರಿನಾದ್ಯಂತ ಸಂಭ್ರಮ ಮನೆಮಾಡಿದ್ದು, ಮದುವಣಗಿತ್ತಿಯಂತೆ ನಗರ ಸಿಂಗಾರಗೊಂಡಿದೆ. ಮಠದಲ್ಲಿ ಇಂದು ಮಧ್ಯಾಹ್ನ ಜರುಗುವ ಕಾರ್ಯಕ್ರಮದಲ್ಲಿ 300 ವಿಐಪಿಗಳಿಗೆ ಮಾತ್ರ ಅವಕಾಶವಿದೆ. ಬಸವ ಭಾರತ ಎಂಬ ಬೃಹತ್ ವೇದಿಕೆಯನ್ನು ನಿರ್ಮಿಸಲಾಗಿದೆ.
ನಡೆದಾಡುವ ದೇವರು, ತ್ರಿವಿಧ ದಾಸೋಹಿ, ಸಿದ್ದಗಂಗೆಯ ಲಿಂಗೈಕ್ಯ ಪರಮಪೂಜ್ಯ ಡಾ. ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಗಳ ಜಯಂತಿಯಂದು ಅವರಿಗೆ ಭಕ್ತಿಪೂರ್ವಕ ನಮನಗಳು.
— CM of Karnataka (@CMofKarnataka) April 1, 2022
ಸಕಲಜೀವರಾಶಿಗಳಿಗೂ ಲೇಸನ್ನು ಬಯಸಿದ ಅವರ ಬದುಕು ಮತ್ತು ಸಾಧನೆಗಳು ನಮಗೆ ಪ್ರೇರಣೆಯಾಗಿವೆ. pic.twitter.com/gG8cjCOdYA