
ಹಿಂಸಾಚಾರ ನಡೆದ ಸ್ಥಳ.
ಬೆಳಗಾವಿ: ಆಂಧ್ರಪ್ರದೇಶದ ಶ್ರೀಶೈಲಂನಲ್ಲಿ ಬುಧವಾರ ಸಂಭವಿಸಿದ ಘರ್ಷಣೆಯಲ್ಲಿ ರಾಜ್ಯದ ಇಬ್ಬರು ಭಕ್ತರಿಗೆ ಗಾಯಗಳಾಗಿವೆ ಎಂದು ತಿಳಿದುಬಂದಿದೆ.
ಶ್ರೀಶೈಲಕ್ಕೆ ಯಾತ್ರೆ ಕೈಗೊಂಡಿದ್ದ ಸಾವಿರಾರು ಕನ್ನಡಿಗರು ಬುಧವಾರ ರಾತ್ರಿ ಟೀ ಅಂಗಡಿಯೊಂದಕ್ಕೆ ತೆರಳಿದ್ದು, ಸಣ್ಣಪುಟ್ಟ ವಿಚಾರಕ್ಕೆ ಅಂಗಡಿಯವರೊಂದಿಗೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಇಬ್ಬರ ನಡುವೆ ಘರ್ಷಣೆ ಏರ್ಪಟ್ಟಿದ್ದು, ಕರ್ನಾಟಕದ ನಂಬರ್ ಪ್ರೇಟ್ ಹೊಂದಿರುವ ನೂರಾರು ಕಾರುಗಳು ಹಾಗೂ ಪ್ರಯಾಣಿಕ ವಾಹನಗಳನ್ನು ಹಾನಿಗೊಳಿಸಿದ್ದಾರೆ. ಘಟನೆಯಲ್ಲಿ ರಾಜ್ಯದ ಇಬ್ಬರಿಗೆ ಗಾಯಗಳಾಗಿವೆ ಎಂದು ವರದಿಗಳು ತಿಳಿಸಿವೆ.
ಇದನ್ನೂ ಓದಿ: ಆಂಧ್ರಪ್ರದೇಶದಲ್ಲಿ ಭೀಕರ ರಸ್ತೆ ಅಪಘಾತ: ಬಸ್ ಮಗುಚಿ ಬಿದ್ದು 7 ಸಾವು, 45 ಮಂದಿಗೆ ಗಾಯ
ಬುಧವಾರ ರಾತ್ರಿ ಚಹಾ ಅಂಗಡಿಯೊಂದಕ್ಕೆ ನೀರಿನ ಬಾಟಲಿ ಖರೀದಿಸಲು ಕರ್ನಾಟಕದ ಭಕ್ತನೊಬ್ಬ ತೆರಳಿದಾಗ, ಅಂಗಡಿಕಾರನೊಂದಿಗೆ ಯಾವುದೋ ಕಾರಣಕ್ಕೆ ಜಗಳ ಆರಂಭವಾಗಿದೆ. ಆಗ ಕರ್ನಾಟಕದ ಭಕ್ತರು ಅಲ್ಲಿ ಭಾರೀ ಸಂಖ್ಯೆಯಲ್ಲಿ ಜಮಾಯಿಸಿದ್ದು, ಜಗಳ ತೀವ್ರಗೊಂಡಿದೆ. ಈ ವೇಳೆ ಪರಿಸ್ಥಿತಿ ನಿಯಂತ್ರಣ ತಪ್ಪಿದ್ದು, ಉದ್ರಿಕ್ತ ಭಕ್ತರು ಅಂಗಡಿಯನ್ನು ಧ್ವಂಸ ಮಾಡಿದ್ದಾರೆ.
ಇದರಿಂದ ಕೋಪಗೊಂಡ ಅಂಗಡಿಕಾರ ಹಾಗೂ ಸ್ಥಳೀಯರು ಕರ್ನಾಟಕದಿಂದ ಬಂದಿದ್ದ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಗಲಾಟೆ ವೇಳೆ ಬಾಗಲಕೋಟೆಯ ಶ್ರೀಶೈಲ ವರಿಮಠ ಅವರ ತಲೆಗೆ ತೀವ್ರ ಪೆಟ್ಟಾಗಿದ್ದರೆ, ಹುನಗುಂದ ತಾಲೂಕಿನ ಗೋಪಾಲ ರುದ್ರಪ್ಪ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಕೂಡಲೇ ಇಬ್ಬರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆಂದು ವರದಿಗಳು ತಿಳಿಸಿವೆ.
ಇದನ್ನೂ ಓದಿ: ಮದುವೆಗೆ ಹೋಗಿದ್ದವರು ಮಸಣಕ್ಕೆ: ಭೀಕರ ಅಪಘಾತದಲ್ಲಿ ಬಿಜೆಪಿ ಮುಖಂಡ ಸೇರಿ 9 ಮಂದಿ ದುರ್ಮರಣ
ಯುಗಾದಿ ನಿಮಿತ್ತ ಬೆಳಗಾವಿ, ವಿಜಯಪುರ, ಬಾಗಲಕೋಟೆ, ಗದಗ, ಹಾವೇರಿ, ಧಾರವಾಡ ಸೇರಿದಂತೆ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಿಂದ ಸಾವಿರಾರು ಭಕ್ತರು ಶ್ರೀಶೈಲಕ್ಕೆ ತೆರಳಿದ್ದರೆನ್ನಲಾಗಿದೆ.