
ಸಂಗ್ರಹ ಚಿತ್ರ
ಬೆಂಗಳೂರು: ಕೆಲವರು ದ್ವೇಷದ ವಾತಾವರಣ ನಿರ್ಮಿಸುತ್ತಿದ್ದು, ಕೋಮುವಾದಿಗಳ ಅಜೆಂಡಾಕ್ಕೆ ಬಲಿಯಾಗದಂತೆ ಜಮೀಯತ್ ಉಲಮಾ-ಐ-ಹಿಂದ್ ಮುಸ್ಲಿಮರಿಗೆ ಎಚ್ಚರಿಕೆ ನೀಡಿದೆ.
ದೇವಸ್ಥಾನಗಳ ಬಳಿ ಮುಸ್ಲಿಂ ವ್ಯಾಪಾರಿಗಳಿಗೆ ಬಹಿಷ್ಕಾರಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ರಂಜಾನ್ ವೇಳೆ ಮುಸ್ಲಿಂ ವ್ಯಾಪಾರಿಗಳಿಂದ ಮಾತ್ರ ವಸ್ತುಗಳನ್ನು ಖರೀದಿ ಮಾಡುವಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಸಂದೇಶಗಳು ಪ್ರಕಟಗೊಳ್ಳುತ್ತಿವೆ.
ಈ ಹಿನ್ನೆಲೆಯಲ್ಲಿ ಕೋಮುವಾದಿಗಳ ಅಜೆಂಡಾಕ್ಕೆ ಬಲಿಯಾಗದಂತೆ ಸಮುದಾಯದ ಸದಸ್ಯರಿಗೆ ಜಮೀಯತ್ ಎಚ್ಚರಿಕೆ ನೀಡಿದೆ.
ಜಮೀಯತ್ ಉಲಮಾ ಕರ್ನಾಟಕದ ಅಧ್ಯಕ್ಷ ಮುಫ್ತಿ ಇಫ್ತೆಯಾರ್ ಅಹ್ಮದ್ ಖಾಸ್ಮಿ ಅವರು ಮಾತನಾಡಿ, ‘ಮಸೀದಿಗಳ ಬಳಿ ಎಲ್ಲ ಧರ್ಮದವರು ಹಣ್ಣು ಹಾಗೂ ಇತರ ಅಂಗಡಿಗಳನ್ನು ಇಡುತ್ತಾರೆ. ಧರ್ಮಗಳ ನಡುವೆ ತಾರತಮ್ಯ ಒಳ್ಳೆಯದಲ್ಲ. ದ್ವೇಷ ಮತ್ತು ದ್ವೇಷದ ಸಂದೇಶಗಳನ್ನು ಯಾರೂ ಕೊಡಬಾರದು. ಎಲ್ಲ ಧರ್ಮದವರ ಅಂಗಡಿಗಳಲ್ಲೂ ಎಂದಿನಂತೆಯೇ ಖರೀದಿ ಮುಂದುವರಿಸಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಬರುವ ಸಂದೇಶಗಳ ಕುರಿತು ಜವಾಬ್ದಾರಿಯುತ ನಾಗರೀಕರಾಗಿ ನಾವು ಸತ್ಯಾಸತ್ಯತೆಗಳ ಪರಿಶೀಲನೆ ನಡೆಸಬೇಕು. ಇಂತಹ ಸಂದೇಶಗಳನ್ನು ಇತರರಿಗೆ ಹಂಚುವುದನ್ನು ತಪ್ಪಿಸಬೇಕು ಎಂದು ಹೇಳಿದ್ದಾರೆ.
ನಾವು ಜಾಗರೂಕರಾಗಿರಬೇಕು ಮತ್ತು ಈ ಸಂದೇಶಗಳು ದುರುದ್ದೇಶಪೂರಿತ ಕಾರ್ಯಸೂಚಿಯನ್ನು ಹೊಂದಿರುವ ವ್ಯಕ್ತಿಗಳ ಪಿತೂರಿಯ ಭಾಗವಾಗಿದೆ ಎಂದು ಅರ್ಥಮಾಡಿಕೊಳ್ಳಬೇಕು. ಈ ಸಂದೇಶಗಳು ಯಾವುದೇ ಮುಸ್ಲಿಂ ಸಂಘಟನೆ ಅಥವಾ ಧಾರ್ಮಿಕ ನಾಯಕತ್ವದಿಂದ ನೀಡಲ್ಪಟ್ಟಿಲ್ಲ ಮತ್ತು ಮುಸ್ಲಿಮರ ಜನಪ್ರಿಯ ಭಾವನೆಯನ್ನು ಪ್ರತಿಬಿಂಬಿಸುವುದಿಲ್ಲ ಎಂದು ತಿಳಿಸಿದ್ದಾರೆ.