ಮುಸ್ಲಿಂ ಮಾಂಸ ಮಾರಾಟಗಾರನ ಮೇಲೆ ಹಲ್ಲೆ: 5 ಬಜರಂಗದಳ ಕಾರ್ಯಕರ್ತರ ಬಂಧನ, ಶಾಂತಿ ಕಾಪಾಡಲು ಸಿಎಂ ಮನವಿ
ಹಲಾಲ್ ಕಟ್ ಮಾಂಸ ಮಾರಾಟ ಮಾಡುತ್ತಿದ್ದ ಮುಸ್ಲಿಂ ವ್ಯಾಪಾರಿ ಮೇಲೆ ದಾಳಿ ನಡೆಸಿದ ಐದು ಮಂದಿ ಬಜರಂಗದಳ ಕಾರ್ಯಕರ್ತರನ್ನು ಶಿವಮೊಗ್ಗದಲ್ಲಿ ಬಂಧಿಸಲಾಗಿದೆ. ಈ ಮಧ್ಯೆ ಇಂದು ಯುಗಾದಿ ಹೊಸತೊಡಕಿನ ದಿನ ರಾಜ್ಯಾದ್ಯಂತ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಕಾರ್ಯಕರ್ತರ ಹಲಾಲ್ ಕಟ್ ಮಾಂಸ ನಿಷೇಧಿಸಿ ಅಭಿಯಾನ ತೀವ್ರವಾಗಿದೆ.
Published: 03rd April 2022 11:23 AM | Last Updated: 03rd April 2022 11:23 AM | A+A A-

ಸಿಎಂ ಬಸವರಾಜ ಬೊಮ್ಮಾಯಿ
ಬೆಂಗಳೂರು: ಹಲಾಲ್ ಕಟ್ ಮಾಂಸ ಮಾರಾಟ ಮಾಡುತ್ತಿದ್ದ ಮುಸ್ಲಿಂ ವ್ಯಾಪಾರಿ ಮೇಲೆ ದಾಳಿ ನಡೆಸಿದ ಐದು ಮಂದಿ ಬಜರಂಗದಳ ಕಾರ್ಯಕರ್ತರನ್ನು ಶಿವಮೊಗ್ಗದಲ್ಲಿ ಬಂಧಿಸಲಾಗಿದೆ. ಈ ಮಧ್ಯೆ ಇಂದು ಯುಗಾದಿ ಹೊಸತೊಡಕಿನ ದಿನ ರಾಜ್ಯಾದ್ಯಂತ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಕಾರ್ಯಕರ್ತರ ಹಲಾಲ್ ಕಟ್ ಮಾಂಸ ನಿಷೇಧಿಸಿ ಅಭಿಯಾನ ತೀವ್ರವಾಗಿದೆ.
ರಾಜ್ಯದ ಜನತೆ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರದೆ ಶಾಂತಿಯಿಂದ ಸಂತೋಷವಾಗಿ ಯುಗಾದಿ ಹೊಸತೊಡಕನ್ನು ಆಚರಿಸಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮನವಿ ಮಾಡಿದ್ದಾರೆ.
ಇಂದು ಯುಗಾದಿಯ ಮರುದಿನ ಜನರು ಆಚರಿಸುವ ಹೊಸತೊಡಕಿನ ದಿನ ಮಾಂಸ ಸೇವನೆ ಮಾಡುವವರು ಮಾಂಸ ಬೇಯಿಸಿ ಮಟನ್, ಚಿಕನ್ ಸೇವಿಸುತ್ತಾರೆ.
ಈ ಹೊತ್ತಿನಲ್ಲಿ ಹಿಂದೂಗಳು ಹಲಾಲ್ ಕಟ್ ಮಾಂಸ ಸೇವಿಸಬೇಡಿ, ಜಟ್ಕಾ ಕಟ್ ಸೇವಿಸಿ ಹಲಾಲ್ ಕಟ್ ಮಾಂಸ ಮುಸ್ಲಿಮರು ಅಲ್ಲಾ ದೇವರಿಗೆ ನೈವೇದ್ಯ ನೀಡುವುದಾಗಿದ್ದು ಇದು ಹಿಂದೂ ದೇವತೆಗಳಿಗೆ ಅಗೌರವ ತೋರಿಸಿದಂತೆ ಎಂದು ಬಲಪಂಥೀಯ ಕಾರ್ಯಕರ್ತರು ಒತ್ತಾಯಿಸುತ್ತಿದ್ದಾರೆ.
ಕಳೆದ ಗುರುವಾರ, ಭದ್ರಾವತಿ ಪಟ್ಟಣದಲ್ಲಿ ಎರಡು ಘಟನೆಗಳು ಹೊಸಮನೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮತ್ತು ಇನ್ನೊಂದು ಹಳೇ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವರದಿಯಾಗಿದೆ ಎಂದು ಶಿವಮೊಗ್ಗ ಪೊಲೀಸ್ ವರಿಷ್ಠಾಧಿಕಾರಿ ಬಿ ಎಂ ಲಕ್ಷ್ಮಿ ಪ್ರಸಾದ್ ಶುಕ್ರವಾರ ತಿಳಿಸಿದರು. ಹೊಸಮನೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಐವರು ಅಂಗಡಿಗೆ ತೆರಳಿ ಹಲಾಲ್ ಮಾಂಸ ನೀಡುವಂತೆ ಒತ್ತಾಯಿಸಿದ್ದಾರೆ. ನೀಡದಿದ್ದಾಗ ಅಂಗಡಿ ಮುಚ್ಚಲಾಯಿತು.
ಅಂಗಡಿಯಲ್ಲಿದ್ದ ಒಬ್ಬ ಹುಡುಗನ ತಲೆಯ ಮೇಲೆ ಹಲ್ಲೆ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಅದೇ ರೀತಿ ಕೆಲವರು ಜನತಾ ಹೋಟೆಲ್ ಗೆ ತೆರಳಿ ಹಲಾಲ್ ಮಾಂಸ ಮಾರಾಟ ಮಾಡದಂತೆ ಮಾಲೀಕರಿಗೆ ಹೇಳಿರುವ ಪ್ರಕರಣ ಹಳೇ ಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಇದನ್ನು ಪ್ರಶ್ನಿಸಿದ ಗ್ರಾಹಕನ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
"ಎರಡೂ ಪ್ರಕರಣಗಳಲ್ಲಿ ಒಬ್ಬ ಆರೋಪಿಯನ್ನು ಹೆಸರಿಸಲಾಗಿದೆ. ಅವರ ವಿರುದ್ಧ ಪ್ರಕರಣ ದಾಖಲಿಸಿ ಅವರನ್ನು ಬಂಧಿಸಲಾಗಿದೆ. ಅವರು ವಡಿವೇಲು, ಶ್ರೀಕಾಂತ್, ಕೃಷ್ಣ, ಸವಾಯಿ ಸಿಂಗ್ ಮತ್ತು ಗುಂಡಾ" ಎಂದು ಪ್ರಸಾದ್ ಹೇಳಿದ್ದಾರೆ.