ಕೊರೋನಾ ಹೋಯ್ತೆಂದು ಮಾಸ್ಕ್ ಎಸೆಯಬೇಡಿ, ಕಡ್ಡಾಯವಾಗಿ ಧರಿಸಿ: ತಾಂತ್ರಿಕ ಸಲಹಾ ಸಮಿತಿ ತಜ್ಞರ ಸಲಹೆ
ಕೋವಿಡ್ ಮೂರನೇ ಅಲೆ ದೇಶಾದ್ಯಂತ ಬಹುತೇಕ ರಾಜ್ಯಗಳಲ್ಲಿ ಸಾಕಷ್ಟು ಇಳಿಮುಖವಾಗಿದೆ. ಸೋಂಕಿನ ತೀವ್ರತೆ ಕಡಿಮೆಯಾಗುತ್ತಿದ್ದಂತೆ ಮಾಸ್ಕ್ ಧರಿಸುವುದು ಕೂಡ ಕಡಿಮೆಯಾಗಿದೆ.
Published: 03rd April 2022 12:42 PM | Last Updated: 03rd April 2022 12:42 PM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ಕೋವಿಡ್ ಮೂರನೇ ಅಲೆ ದೇಶಾದ್ಯಂತ ಬಹುತೇಕ ರಾಜ್ಯಗಳಲ್ಲಿ ಸಾಕಷ್ಟು ಇಳಿಮುಖವಾಗಿದೆ. ಸೋಂಕಿನ ತೀವ್ರತೆ ಕಡಿಮೆಯಾಗುತ್ತಿದ್ದಂತೆ ಮಾಸ್ಕ್ ಧರಿಸುವುದು ಕೂಡ ಕಡಿಮೆಯಾಗಿದೆ.
ಮಾಸ್ಕ್ ಧರಿಸದಿದ್ದಕ್ಕಾಗಿ ಜನರಿಗೆ ದಂಡ ವಿಧಿಸುವುದನ್ನು ನಿಲ್ಲಿಸಲು ಕೆಲವು ರಾಜ್ಯಗಳು ನಿರ್ಧರಿಸಿದ್ದರೂ, ಕರ್ನಾಟಕದಲ್ಲಿ ಕೋವಿಡ್ ತಾಂತ್ರಿಕ ಸಲಹಾ ಸಮಿತಿ(TAC) ಕಟ್ಟುನಿಟ್ಟಾಗಿ ಮಾಸ್ಕ್ ಧರಿಸುವುದನ್ನು ನಿಲ್ಲಿಸಿಲ್ಲವಾದ್ದರಿಂದ ರಾಜ್ಯ ಸರ್ಕಾರ ಜನರಿಗೆ ಮಾಸ್ಕ್ ಧರಿಸುವುದು ಬೇಡ ಎಂದು ಕಡ್ಡಾಯವಾಗಿ ಹೇಳಿಲ್ಲ. ವಿಪತ್ತು ನಿರ್ವಹಣಾ ಕಾಯ್ದೆಯಡಿ ಸಲಹೆ ಅಥವಾ ಅಧಿಸೂಚನೆ ಹೊರಡಿಸಬೇಕೇ ಎಂಬುದನ್ನು ರಾಜ್ಯ ಸರ್ಕಾರ ಅಂತಿಮವಾಗಿ ನಿರ್ಧರಿಸಬೇಕು ಎಂದು ಟಿಎಸಿ ತಜ್ಞರು ಹೇಳಿದ್ದಾರೆ.
ಮಾಸ್ಕ್ ಆದೇಶವನ್ನು ಕೈಬಿಡದಂತೆ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದ್ದೇವೆ. ಹಲವಾರು ರಾಜ್ಯಗಳು ಮಾಸ್ಕ್ ಧರಿಸುವ ಆದೇಶವನ್ನು ಹಿಂತೆಗೆದುಕೊಂಡಿವೆ ಎಂದು ನಮಗೆ ತಿಳಿದಿದ್ದರೂ, ಪರಿಸ್ಥಿತಿಯ ಸ್ಥಳೀಯ ಮೌಲ್ಯಮಾಪನದ ಆಧಾರದ ಮೇಲೆ ಪ್ರತಿ ರಾಜ್ಯವು ತನ್ನದೇ ಆದ ನಿರ್ಧಾರವನ್ನು ತೆಗೆದುಕೊಳ್ಳಬಹುದು ಎಂದು ಕೇಂದ್ರದ ಮಾರ್ಗಸೂಚಿಗಳು ಸ್ಪಷ್ಟವಾಗಿವೆ. ಗಾಳಿ-ಬೆಳಕು ಸರಿಯಾಗಿ ಬಾರದ ಸ್ಥಳಗಳು, ಜನನಿಬಿಡ ಪ್ರದೇಶಗಳು ಮತ್ತು ಆಸ್ಪತ್ರೆಗಳಲ್ಲಿ ಮಾಸ್ಕ್ ಧರಿಸುವುದನ್ನು ಮುಂದುವರಿಸಬೇಕು ಎಂದು ನಮ್ಮ ಸಮಿತಿ ಹೇಳಿದೆ ಎಂದು ಟಿಎಸಿ ಅಧ್ಯಕ್ಷ ಡಾ ಎಂಕೆ ಸುದರ್ಶನ್ ಹೇಳಿದರು.
ರಾಜ್ಯದಲ್ಲಿ ಕೋವಿಡ್ ನಿಯಂತ್ರಣಕ್ಕೆ ಬಂದಿರಬಹುದು. ಆದರೆ “ನಾವು ಕೋವಿಡ್-19 ನಿಂದ ಮುಕ್ತರಾಗಿಲ್ಲ. ಅಂತರರಾಷ್ಟ್ರೀಯ ಪ್ರಯಾಣ ಸೇರಿದಂತೆ ಎಲ್ಲಾ ಸಾರ್ವಜನಿಕ ಚಟುವಟಿಕೆಗಳು ತೆರೆದುಕೊಂಡಿವೆ, ಆದ್ದರಿಂದ ಜಾಗರೂಕತೆ ಹೆಚ್ಚಾಗಿರಬೇಕಾಗುತ್ತದೆ. ಪ್ರಸ್ತುತ ಪರೀಕ್ಷಾ ತಂತ್ರವು ರೋಗಲಕ್ಷಣದ ಜನರನ್ನು ಪರೀಕ್ಷಿಸುವುದು ಮಾತ್ರ, ಆದ್ದರಿಂದ ಲಕ್ಷಣರಹಿತ ಜನರನ್ನು ಗುರುತಿಸಲಾಗುವುದಿಲ್ಲ. ಮೂರನೇ ಅಲೆ ಮುಗಿದಿದೆ ಆದರೆ ಕೋವಿಡ್ ಮುಗಿದಿಲ್ಲ” ಎಂದು ಸುದರ್ಶನ್ ವಿವರಿಸಿದರು.
ಅನೇಕ ದೇಶಗಳಲ್ಲಿ ಕೋವಿಡ್ ಪ್ರಕರಣಗಳ ಉಲ್ಬಣವು ಕಂಡುಬಂದಿದೆ. ಅಂತರರಾಷ್ಟ್ರೀಯ ಸಂಚಾರದ ಮುಕ್ತ ಹರಿವು ಇದೆ. ಕೇವಲ 2 ಪ್ರತಿಶತದಷ್ಟು ಪ್ರಯಾಣಿಕರ ಮಾದರಿಗಳನ್ನು ಮಾತ್ರ ತೆಗೆದುಕೊಳ್ಳಲಾಗುತ್ತದೆ. ಜೂನ್‌ನಲ್ಲಿ ನಾಲ್ಕನೇ ಅಲೆಯ ಸಾಧ್ಯತೆಯೊಂದಿಗೆ, ಕರ್ನಾಟಕದಲ್ಲಿ ಮಾಸ್ಕ್ ಧರಿಸುವ ಆದೇಶವನ್ನು ಮುಂದುವರಿಸಲು TAC ತಜ್ಞರು ನಿರ್ಧರಿಸಿದ್ದಾರೆ.
ಈ ಮಧ್ಯೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತ ಡಿ ರಂದೀಪ್, “ಟಿಎಸಿ ಶಿಫಾರಸಿನ ಆಧಾರದ ಮೇಲೆ ಆರೋಗ್ಯ ಇಲಾಖೆಯು ಮಾಸ್ಕ್ ಕಡ್ಡಾಯವನ್ನು ಮುಂದುವರಿಸಬೇಕು ಎಂದು ಹೇಳಿದೆ. ಅಂತಿಮ ನಿರ್ಧಾರ ಸಚಿವರು ತೆಗೆದುಕೊಳ್ಳುತ್ತಾರೆ ಎಂದರು.